ತಮ್ಮ ಭೂಮಿ ಬೆಲೆ ಹೆಚ್ಚಿಸಿಕೊಳ್ಳಲು ಡಿಕೆಶಿಯಿಂದ ಷಡ್ಯಂತ್ರ: ಎಚ್.ಡಿ.ಕುಮಾರಸ್ವಾಮಿ

Kannadaprabha News   | Kannada Prabha
Published : May 24, 2025, 08:46 AM IST
Former CM HD Kumaraswamy

ಸಾರಾಂಶ

ಐತಿಹಾಸಿಕ ಮಹತ್ವ ಹೊಂದಿರುವ ರಾಮನಗರ ಹೆಸರನ್ನು ಕಿತ್ತುಹಾಕಿ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಮೇ.24): ಐತಿಹಾಸಿಕ ಮಹತ್ವ ಹೊಂದಿರುವ ರಾಮನಗರ ಹೆಸರನ್ನು ಕಿತ್ತುಹಾಕಿ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ ಎಂದು ಕಿಡಿಕಾರಿರುವ ಅವರು, ಮುಂದೆ ಪರಿಸ್ಥಿತಿ ಬದಲಾಗಲಿದೆ. ಆಗ ಇವರು ಇಟ್ಟಿರುವ ಹೆಸರೂ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದರು.

ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2007ರಲ್ಲಿ ನಾನು ತೀರ್ಮಾನ ಮಾಡುವಾಗ ಆಗ ವಿರೋಧ ಮಾಡಬಹುದಾಗಿತ್ತು, ಆಗ ಮಾಡಲಿಲ್ಲ. ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ರಾಮನಗರ ಕೊಟ್ಟಿದೆ. ಇಡೀ ಜಗತ್ತೇ ನಿಬ್ಬೆರಗಾಗುವ ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ್ದರು. ನೆಹರು ಅವರಿಗೆ ಸಡ್ಡು ಹೊಡೆದು ರಾಜಕೀಯ ಮಾಡಿದ್ದರು. ಅಂತಹ ಮಹನೀಯರ ಹೆಸರನ್ನಾದರೂ ಜಿಲ್ಲೆಗೆ ಇಡಬಹುದಿತ್ತು. ಅವರ ಹೆಸರು ಇಟ್ಟಿದ್ದರೆ ನಾನು ಅಭಿನಂದಿಸುತ್ತಿದ್ದೆ. ಕೆಂಗಲ್ ಅವರ ಹೆಸರಿಟ್ಟರೆ ಇವರ ಭೂಮಿಗಳಿಗೆ ಬೆಲೆ ಬರುವುದಿಲ್ಲವಲ್ಲ? ಎಂದು ಕಟುವಾಗಿ ಟೀಕಿಸಿದರು.

ರಾಮನಗರ ಹೆಸರನ್ನು ತೆಗೆದುಹಾಕಿ ಬೆಂಗಳೂರು ದಕ್ಷಿಣ ಎಂದು ಹೆಸರು ಇಟ್ಟುಕೊಂಡಿರುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಭೂಮಿಗಳ ಬೆಲೆ ಏರಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು. ಅವರು ಏತಕ್ಕಾಗಿ ಜಿಲ್ಲೆಯ ಹೆಸರು ಬದಲಿಸಿದ್ದಾರೆ? ಅದರ ಹಿಂದಿನ ದುರುದ್ದೇಶ ಏನಿದೆ? ಎಂಬುದು ಗೊತ್ತಿದೆ. ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗ ಅದಕ್ಕೆ ತಿರುಗಿಸಿ ಉತ್ತರ ಕೊಡಬೇಕೋ ಆಗ ಕೊಡುತ್ತೇನೆ ಎಂದರು. ಇಂತಹ ರಾಜಕಾರಣಕ್ಕೆ ನಾನು ಸೊಪ್ಪು ಹಾಕುವುದಿಲ್ಲ. ಇವರು ಕೇಂದ್ರ ಗೃಹ ಸಚಿವರಿಗೆ ಹೆಸರು ಬದಲಾವಣೆ ರಾಜ್ಯ ಸರ್ಕಾರ ಪ್ರಸ್ತಾಪ ಕಳಿಸಿದ್ದು, ಅದು ತಿರಸ್ಕೃತವಾಗಿದ್ದು ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮುಂದೆ ಬದಲಾಗಲಿದೆ: ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ? ಇವರು ಮಾಡಿದ್ದು ಮುಂದೆ ಬದಲಾಗಲಿದೆ. ಅದೂ ನನಗೆ ಗೊತ್ತಿದೆ. ಹೇಳಿ ಕೇಳಿ ಈ ವ್ಯಕ್ತಿ ರಿಯಲ್ ಎಸ್ಟೇಟ್ ವ್ಯಾಪಾರಿ. ಏನೆಲ್ಲಾ ತಂತ್ರಗಾರಿಕೆ ಹೂಡಿದರೆ ತಮ್ಮ ಜಮೀನುಗಳಿಗೆ ಬೆಲೆ ಬರುತ್ತಿದೆ ಎನ್ನವುದು ಅವರಿಗೆ ಗೊತ್ತಿದೆ. ರಾಮನಗರ ಜಿಲ್ಲೆಯಾದಾಗಲೇ ರೈತರ ಭೂಮಿಗೆ ಬೆಲೆ ಬಂದಿರಲಿಲ್ಲವೇ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು. ನನ್ನ ಜಮೀನಿಗೆ ಬೆಲೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಆ ಜಮೀನನ್ನು ಕೂಡ ಕಿತ್ತುಕೊಳ್ಳಲು ಕುತಂತ್ರ ಮಾಡಿದ್ದಾರೆ ಇವರು. 40 ವರ್ಷಗಳ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್ಐಟಿ ಅಂತ ರಚನೆ ಮಾಡಿಕೊಂಡು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನನಗೆ ಕಿರುಕುಳ ಕೊಡುತ್ತಿದ್ದಾರೆ. ಇದರ ವಿರುದ್ಧ ನಾನೂ ಕಾನೂನು ಹೋರಾಟ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಇವರು ನನ್ನ ವಿರುದ್ಧ ಕಿರುಕುಳ, ಕುತಂತ್ರ ಮಾಡುತ್ತಿದ್ದಾರೆ. ಹೀಗೆಯೇ ಅವರು ಮಾಡುತ್ತಿರಲಿ, ಇವರು ಲೂಟಿ ಹೊಡೆದಿರುವ ಶೇ.50ರಷ್ಟು ಸರ್ಕಾರಿ ಭೂಮಿಗಳಿವೆ. ಇವರು ಏನೆಲ್ಲಾ ಅನ್ಯಾಯ, ಅಕ್ರಮ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು? ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನೀಡಲಾದ ಜಾಗ ನುಂಗಿದ್ದು ಯಾರು ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಂದ್ವ ನೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಕೇಂದ್ರ ಸಚಿವ ಕುಮಾರಸ್ವಾಮಿ, ಸಿದ್ದಾರಾಮಯ್ಯ ಅವರು ತಾವು ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ದುರಂತವೆಂದರೆ, ದಲಿತರ ಭೂಮಿ ಕಬಳಿಸಿದವರನ್ನೇ ತಮ್ಮ ಜತೆಯಲ್ಲಿ ಇಟ್ಟುಕೊಂಡಿದ್ದಾರೆ! ಈಗ ನೋಡಿದರೆ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿದ್ದಾರೆ. ಇದು ಈ ಸರ್ಕಾರದಲ್ಲಿ ನಡೆಯುತ್ತಿರುವ ದಲಿತ ವಿರೋಧಿ ನೀತಿ ಎಂದು ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ