ಇಬ್ಬರನ್ನೂ ದೆಹಲಿಗೆ ಕರೆಸುತ್ತೇವೆ ಅಂತ ವರಿಷ್ಠರು ಹೇಳಿದ್ದಾರೆ : ಡಿಕೆ

Kannadaprabha News   | Kannada Prabha
Published : Dec 21, 2025, 05:53 AM IST
DK Shivakumar

ಸಾರಾಂಶ

ಹೈಕಮಾಂಡ್‌ ನಾಯಕರು ನನಗೆ ಮತ್ತು ಮುಖ್ಯಮಂತ್ರಿಯವರಿಗೆ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದಿದ್ದಾರೆ. ಕಾಯುತ್ತೇವೆ. ಕರೆದಾಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ಹೈಕಮಾಂಡ್‌ ನಾಯಕರು ನನಗೆ ಮತ್ತು ಮುಖ್ಯಮಂತ್ರಿಯವರಿಗೆ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದಿದ್ದಾರೆ. ಕಾಯುತ್ತೇವೆ. ಕರೆದಾಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ‘ಹೈಕಮಾಂಡ್‌ ನಾಯಕರು ನನ್ನ ಪರವಾಗಿದ್ದಾರೆ. ಸಿಎಂ ಸ್ಥಾನಕ್ಕೆ ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ, ನನ್ನನ್ನು ಅಲುಗಾಡಿಸಲು ಯಾರಿಂದಲೂ ಆಗುವುದಿಲ್ಲ’ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಮರುದಿನವೇ ಡಿಕೆಶಿ ಈ ಮಾತುಗಳನ್ನು ಆಡಿರುವುದು ಕುತೂಹಲ ಕೆರಳಿಸಿದೆ.

ಶನಿವಾರ ದೆಹಲಿ ನಾಯಕರು ನಿಮಗೆ ಆಹ್ವಾನ ನೀಡಿದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌ ಅವರು, ದೆಹಲಿಗೆ ಹೋಗಿ ಹೈಕಮಾಂಡ್‌ ನಾಯಕರ ಭೇಟಿ ಮಾಡುವುದಿದ್ದರೆ ಎಲ್ಲರಿಗೂ ತಿಳಿಸಿಯೇ ಹೋಗುತ್ತೇವೆ. ನಾನು ಕದ್ದುಮುಚ್ಚಿ ಹೋಗುವುದಿಲ್ಲ. ಮಾಧ್ಯಮದವರಿಗೆ ತಿಳಿಸದೆ ಏನೂ ಮಾಡುವುದಿಲ್ಲ ಎಂದರು.

ಚಾರ್ಜ್‌ಶೀಟ್‌ ಕೋರ್ಟಲ್ಲಿ ತಿರಸ್ಕೃತ

ಇನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ. ಸಲ್ಲಿಸಿದ್ದ ಚಾರ್ಜ್‌ಶೀಟ್‌ ಕೋರ್ಟಲ್ಲಿ ತಿರಸ್ಕೃತಗೊಂಡಿದ್ದು, ಈಗ ಒಂದು ಎಫ್ಐಆರ್ ಬಾಕಿ ಉಳಿದುಕೊಂಡಿದೆ. ನಮ್ಮ ಮೇಲೆ ಯಾವ ರೀತಿ ದಬ್ಬಾಳಿಕೆ ನಡೆಯುತ್ತಿದೆ ಎಂದು ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ನಾಗಸಾಧುಗಳ ಭೇಟಿ ಕುರಿತ ಪ್ರಶ್ನೆಗೆ, ನಾಗಸಾಧುಗಳು ಮನೆಗೆ ಹುಡುಕಿಕೊಂಡು ಬಂದು ಆಶೀರ್ವಾದ ಮಾಡಿದ್ದಾರೆ. ಮನೆಗೆ ಬಂದವರನ್ನು ಬೇಡ ಎನ್ನಲು ಆಗುವುದಿಲ್ಲ. ರಾಜಕೀಯದಲ್ಲಿರುವ ಕಾರಣ ಸಾಧು ಸಂತರು, ಸ್ವಾಮೀಜಿಗಳು, ಹಿರಿಯರು ಸೇರಿ ಎಲ್ಲಾ ರೀತಿಯ ಜನರೂ ನಮಗೆ ಬೇಕು. ನಮ್ಮ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿದೆ. ವಕ್ಫ್, ಚರ್ಚ್ ಸೇರಿ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಿದ್ದು ಆಪ್ತ ರಾಜಣ್ಣ ಜತೆ ಡಿಕೆಶಿ ಭೇಟಿ ಕುತೂಹಲ - ಕುರ್ಚಿ ಕಿತ್ತಾಟ ನಡುವೆಯೇ ಮಾತುಕತೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಎನ್‌.ರಾಜಣ್ಣ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಶನಿವಾರ ರಾತ್ರಿ ನಗರದ ಖಾಸಗಿ ಅತಿಥಿ ಗೃಹದಲ್ಲಿ ಉಪ ಮುಖ್ಯಮಂತ್ರಿ ಅವರನ್ನು ರಾಜಣ್ಣ ಭೇಟಿ ಮಾಡಿ ಕೆಲಕಾಲ ಸಮಾಲೋಚನೆ ನಡೆಸಿದರು.

ಸಚಿವ ಸ್ಥಾನ ತ್ಯಜಿಸಿದ ನಂತರ ಸದಾ ಸಿದ್ದರಾಮಯ್ಯ ಪರ ಮಾತನಾಡುತ್ತಿದ್ದ ಎನ್‌.ರಾಜಣ್ಣ ಅವರು, ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಇದೀಗ ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದೆ.ಕೆಲದಿನಗಳ ಹಿಂದೆ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದು ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಗುದ್ದಾಟದ ನಡುವೆ ಈ ಇಬ್ಬರು ನಾಯಕರ ಭೇಟಿ ಅಚ್ಚರಿ ತರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಜೆಪಿ ವಿರುದ್ಧ ‘ಚಿಲುಮೆ’ ಅಸ್ತ್ರಕ್ಕೆ ಸರ್ಕಾರ ಸಜ್ಜು
ಜರ್ಮನಿಯಲ್ಲಿ ಭಾರತ ವಿರೋಧಿಗಳ ಜತೆ ರಾಗಾ ಭೇಟಿ: ಬಿಜೆಪಿ ಆರೋಪ