ಮಧ್ಯಪ್ರದೇಶ ‘ಕೈ’ಡ್ರಾಮಾ: ಬಿಜೆಪಿ ಕುದುರೆ ವ್ಯಾಪಾರ ತಪ್ಪಿಸಲು ಬೆಂಗಳೂರಿಗೆ ಬಂದಿದ್ದ ಕೈ ಶಾಸಕರು ಏರ್‌ಪೋರ್ಟ್‌ನಿಂದಲೇ ವಾಪಸ್ ಹೋಗಿದ್ದೇಕೆ?

Kannadaprabha News   | Kannada Prabha
Published : Jun 10, 2026, 06:19 AM IST
MP Election madhya pradesh

ಸಾರಾಂಶ

ರಾಜ್ಯಸಭಾ ಚುನಾವಣೆ ಹಿನ್ನೆಲೆ ಕುದುರೆ ವ್ಯಾಪಾರ ತಡೆಯಲು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‌ಗೆ ಸ್ಥಳಾಂತರಿಸಲು ಯೋಜಿಸಲಾಗಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವೇ ತಿರಸ್ಕೃತಗೊಂಡಿದ್ದರಿಂದ ಈ ಯೋಜನೆ ವಿಫಲಗೊಂಡು, ಪಕ್ಷಕ್ಕೆ ತೀವ್ರ ಮುಜುಗರ

ಭೋಪಾಲ್‌/ರಾಮನಗರ (ಜೂ.10): ರಾಜ್ಯಸಭಾ ಚುನಾವಣೆ(MP Rajyasabha Election) ಸಂಬಂಧ ಮಂಗಳವಾರ ಮಧ್ಯಪ್ರದೇಶ(Madhyapradesh)ದ ರಾಜಧಾನಿ ಭೋಪಾಲ್‌ನಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಬಿಜೆಪಿ ಮೇಲೆ ಕುದುರೆ ವ್ಯಾಪಾರದ ಆರೋಪ ಮಾಡಿದ್ದ ಕಾಂಗ್ರೆಸ್‌ ತನ್ನ 60ಕ್ಕೂ ಹೆಚ್ಚು ಶಾಸಕರನ್ನು ರಕ್ಷಿಸುವ ಸಲುವಾಗಿ ಬೆಂಗಳೂರಿಗೆ ಕಳುಹಿಸಿಕೊಡುವ ಯತ್ನ ನಡೆಸಿದ್ದಾಗಲೇ, ಅತ್ತ ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರವೇ ರದ್ದಾಗಿದೆ.

ಹೀಗಾಗಿ ಒಂದೆಡೆ ಶಾಸಕರ ಸ್ವೀಕಾರಕ್ಕೆ ಸಜ್ಜಾಗಿದ್ದ ಕರ್ನಾಟಕ ರಾಮನಗರ ಜಿಲ್ಲೆ ಬಿಡದಿಯ ರೆಸಾರ್ಟ್‌ನಲ್ಲಿ ಮೌನ ಮನೆ ಮಾಡಿದ್ದರೆ, ಅತ್ತ ಇರುವ ಏಕೈಕ ಸ್ಥಾನವನ್ನೂ ಕೈಚೆಲ್ಲುವ ಮೂಲಕ ಕಾಂಗ್ರೆಸ್‌ ಭಾರೀ ಮುಜುಗರ ಅನುಭವಿಸಿದೆ.

ಏನಾಯ್ತು?:

ಮಧ್ಯಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ 3 ಸ್ಥಾನಗಳಿಗೆ ಜೂ.18ರಂದು ಚುನಾವಣೆಗೆ ನಿಗದಿಯಾಗಿದೆ. ಪ್ರತಿ ಅಭ್ಯರ್ಥಿ ಗೆಲುವಿಗೆ ಮೊದಲ ಪ್ರಾಶಸ್ತ್ಯದ 58 ಮತ ಬೇಕು. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 164 ಶಾಸಕರನ್ನು ಹೊಂದಿದ್ದು, 2 ಸ್ಥಾನ ಸುಲಭವಾಗಿ ಗೆಲ್ಲಬಹುದು. ಈ ಸ್ಥಾನಕ್ಕೆ ಅದು ತರುಣ್‌ ಚುಗ್‌ ಮತ್ತು ರಾಜೇಶ್ ಅಗರ್‌ವಾಲ್‌ರನ್ನು ಕಣಕ್ಕೆ ಇಳಿಸಿತ್ತು. ಇದರ ಜೊತೆಗೆ 3ನೇ ಅಭ್ಯರ್ಥಿಯಾಗಿ ಮಹೇಶ್‌ ಕೇವತ್ ಕಣಕ್ಕೆ ಇಳಿಸಿತ್ತು.

ಮತ್ತೊಂದೆಡೆ 64 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌, ಮೀನಾಕ್ಷಿ ನಟರಾಜನ್‌ ಅವರನ್ನು ಕಣಕ್ಕೆ ಇಳಿಸಿತ್ತು. ಈ ನಡುವೆ ತನ್ನ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ ಮಧ್ಯಪ್ರದೇಶ ಕಾಂಗ್ರೆಸ್‌ ಘಟಕ, ಇದನ್ನು ತಪ್ಪಿಸಲು 60ಕ್ಕೂ ಹೆಚ್ಚು ಶಾಸಕರನ್ನು ಕಾಂಗ್ರೆಸ್‌ ಆಡಳಿತದ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ರವಾನಿಸಲು ಯೋಜಿಸಿತ್ತು.

ಈ ಯೋಜನೆಯಂತೆ 35 ಶಾಸಕರು ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡ ಮೊದಲ ತಂಡ ವಿಶೇಷ ವಿಮಾನದಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತ್ತು.

ನಾಮಪತ್ರ ತಿರಸ್ಕೃತ:

ಈ ನಡುವೆ ಕಾಂಗ್ರೆಸ್‌ ಪರವಾಗಿ ನಾಮಪತ್ರ ಸಲ್ಲಿಸಿದ್ದ ರಾಹುಲ್‌ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಮಂಗಳವಾರ ತಿರಸ್ಕರಿಸಿದ್ದಾರೆ. ಮೀನಾಕ್ಷಿ ಅವರು ನಾಮಪತ್ರದ ಜೊತೆಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ತೆಲಂಗಾಣದಲ್ಲಿ ದಾಖಲಾದ ಕ್ರಿಮಿನಲ್‌ ಪ್ರಕರಣದ ಬಗ್ಗೆ ಉಲ್ಲೇಖಿಸಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಮಹೇಶ್‌ ದೂರು ನೀಡಿದ್ದರು. ಇದನ್ನು ಪರಿಗಣಿಸಿ ರಿಟರ್ನಿಂಗ್‌ ಆಫೀಸರ್‌, ಮೀನಾಕ್ಷಿ ಅವರ ನಾಮಪತ್ರವನ್ನೇ ತಿರಸ್ಕರಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಭಾರೀ ಮುಜುಗರಕ್ಕೆ ಈಡಾಗಿದೆ.

ಏರ್ಪೋರ್ಟ್‌ಗೆ ಬಂದು ವಾಪಸ್‌:

ನಾಮಪತ್ರ ತಿರಸ್ಕೃತಗೊಂಡ ಸುದ್ದಿ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಲು ಭೋಪಾಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದ 29 ಹೆಚ್ಚು ಶಾಸಕರು ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿದ್ದಾರೆ.

ಭಾರೀ ಸಿದ್ಧತೆ:

ಮಧ್ಯಪ್ರದೇಶದಿಂದ ಆಗಮಿಸುವ ಶಾಸಕರು ಮತ್ತು ಅವರ ಕುಟುಂಬ ವರ್ಗಕ್ಕೆಂದೇ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿಕ ವಂಡರ್‌ ಲಾ ರೆಸಾರ್ಟ್‌ನಲ್ಲಿ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮಂಗಳವಾರ ಬೆಳಗ್ಗೆಯೇ ವಂಡರ್ ಲಾಗೆ ಬಂದು ಹೋಟೆಲ್ ನಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದ್ದರು. ಸ್ಥಳೀಯ ಶಾಸಕ ಎಚ್.ಸಿ.ಬಾಲಕೃಷ್ಣ ಅವರೊಂದಿಗೆ ಚರ್ಚೆ ನಡೆಸಿದ್ದರು. ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ನ ಎಲ್ಲ ರೂಮ್ ಗಳು ಬುಕ್ ಆಗಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯಸಭಾ ಟಿಕೆಟ್‌ಗೆ ಗೌಡರು ಅರ್ಜಿಯನ್ನೇ ಹಾಕಿಲ್ಲ: ಕಾಂಗ್ರೆಸ್‌ನ 'ಮೈತ್ರಿ ಒಡೆಯುವ' ಆಟಕ್ಕೆ ಬ್ರೇಕ್ ಹಾಕಿದ ಹೆಚ್‌ಡಿ ಕುಮಾರಸ್ವಾಮಿ!
'RSS ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ..' ಪ್ರಿಯಾಂಕ್ ಖರ್ಗೆ ಟೀಕೆಗೆ ಪೂಜಾರಿ ತಿರುಗೇಟು!