
ಭೋಪಾಲ್(ಜೂ.14): ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಾಕ್ಸಮರ ಇದೀಗ ಶಿಸ್ತು ಮೀರುತ್ತಿರುವುದು ಹೊಸದೇನಲ್ಲ. ಆರೋಪ-ಪ್ರತ್ಯಾರೋಪ ತಾರಕಕ್ಕೇರಿದ ಹಲವು ಉದಾಹರಣೆಗಳಿವೆ. ಚುನಾವಣೆ ವೇಳೆ ನೀಡಿದ ಹೇಳಿಕೆಯಿಂದ ಕೇಸು, ಕೋರ್ಟ್ ಅಲೆದಾಡುತ್ತಿರುವ ನಾಯಕರ ಸಂಖ್ಯೆ ಕಡಿಮೆ ಇಲ್ಲ. ಇದೀಗ ಮಧ್ಯಪ್ರದೇಶ ಚುನಾವಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕನ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಮೋದಿ ಬರಲಿ, ಮೋದಿ ಅಪ್ಪನೇ ಬರಲಿ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರುಣ್ ಯಾದವ್ ಹೇಳಿದ್ದಾರೆ. ಅರುಣ್ ಯಾದವ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಭಾರತದ ಪ್ರಧಾನಿಯ ದಿವಂಗತ ತಂದೆಗೆ ಅವಮಾನ ಮಾಡಿದ್ದಾರೆ. ಪ್ರಧಾನಿಯ ದಿವಗಂತ ತಂದೆಯನ್ನು ರಾಜಕಿಯ ತೆವಲಿಗೆ ಎಳೆದು ತಂದಿರುವುದ ಮಹಾ ತಪ್ಪು ಎಂದು ಬಿಜೆಪಿ ಹೇಳಿದೆ.
ಮಧ್ಯಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದಂತೆ, ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ. ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದಿದ್ದಾರೆ. ಮಧ್ಯಪ್ರದೇಶದಲ್ಲಿ ಮೋದಿ ಅಲೆ ನಡೆಯಲ್ಲ. ಬಿಜೆಪಿಯ ಯಾವುದೇ ಪ್ರಯತ್ನಗಳು ಕೈಗೂಡಲ್ಲ. ಚುನಾವಣಾ ಪ್ರಚಾರಕ್ಕೆ, ಚುನಾವಣೆ ಗೆಲ್ಲಿಸಲು ಮೋದಿಯೇ ಬರಲಿ, ನಡ್ಡಾಜಿ ಬರಲಿ, ಬಿಜೆಪಿ ಹಿರಿಯ ನಾಯಕರೆಲ್ಲಾ ಬರಲಿ, ಬೇಕಾದರೆ ಮೋದಿ ಅಪ್ಪನೇ ಬರಲಿ. ಆದರೆ ಈ ಬಾರಿ ಗೆಲುವು ಮಾತ್ರ ಕಾಂಗ್ರೆಸ್ ಪಾಲಾಗಲಿದೆ ಎಂದು ಅರುಣ್ ಯಾದವ್ ಹೇಳಿದ್ದಾರೆ.
ಮಧ್ಯಪ್ರದೇಶ: 220 ತಿಂಗಳ ಬಿಜೆಪಿ ಆಡಳಿತದಲ್ಲಿ 225 ಹಗರಣ: ಪ್ರಿಯಾಂಕಾ ವಾಗ್ದಾಳಿ
ರಾಜಕೀಯ ಹೇಳಿಕೆಗೆ ಪ್ರಧಾನಿ ಮೋದಿ ತಂದೆ ಉಲ್ಲೇಖಿಸಿರುವುದು ಯಾಕೆ? ಎಂದು ಕಾಂಗ್ರೆಸ್ ನಾಯಕನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಅಡಿಯಲ್ಲಿ ಆಯ್ಕೆಯಾದ ಪ್ರಧಾನಿ. ಪ್ರಧಾನಿ ಮೋದಿಯ ತಂದೆಯ ಕುರಿತು ಹೇಳಿಕೆ ಯಾಕೆ? ಟೀಕೆಗೆ ಸ್ವಾಗತ, ಆದರೆ ದ್ವೇಷದ ರಾಜಕಾರಣವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
2003ರಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಆದರೆ 2018ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕ ಬಂದಿತ್ತು. ಕಮಲನಾಥ್ ಸರ್ಕಾರ ಮಧ್ಯಪ್ರದೇಶದಲ್ಲಿ 18 ತಿಂಗಳು ಆಡಳಿತ ನಡೆಸಿತ್ತು. 2020ರಲ್ಲಿ ಕಾಂಗ್ರೆಸ್ ಪ್ರಮುಖ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿಕೊಂಡರು. ಇತ್ತ ಕಾಂಗ್ರೆಸ್ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿತ್ತು. ಶಿವರಾಜ್ ಸಿಂಗ್ ಚವ್ಹಾಣ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಭೋಪಾಲ್: ಪ್ರಮುಖ ಕಡತಗಳಿದ್ದ ಸರ್ಕಾರಿ ಕಟ್ಟಡಕ್ಕೆ ಬೆಂಕಿ
ಇತ್ತ ಮಧ್ಯಪ್ರದೇಶ ಬಿಜೆಪಿ ಸರ್ಕಾರ ಇದೀಗ ಭರ್ಜರಿ ಕೊಡುಗೆ ಘೋಷಿಸುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಸರ್ಕಾರ ಜನರಿಗಾಗಿ ಮತ್ತೊಂದು ಯೋಜನೆಯನ್ನು ಘೋಷಣೆ ಮಾಡಿದ್ದು, ರೈತರಿಗೆ ನೀಡಲಾಗುತ್ತಿದ್ದ ವಾರ್ಷಿಕ ಆರ್ಥಿಕ ಸಹಾಯವನ್ನು 6 ಸಾವಿರ ರು.ಗೆ ಹೆಚ್ಚಳ ಮಾಡಿದೆ.ಮುಖ್ಯಮಂತ್ರಿ ಕಿಸಾನ್ ಕಲ್ಯಾಣ್ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ ಆರ್ಥಿಕ ಸಹಾಯಧನವನ್ನು 4 ಸಾವಿರ ರು.ನಿಂದ 6 ಸಾವಿರ ರು.ಗೆ ಹೆಚ್ಚಳ ಮಾಡಲಾಗಿದೆ. ಇದನ್ನು ವಾರ್ಷಿಕವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ 6 ಸಾವಿರ ರು. ಸಹಾಯಧನದ ಜೊತೆಗೆ ಇದನ್ನು ನೀಡಲಾಗುತ್ತಿದೆ. ಹೀಗಾಗಿ ರೈತರಿಗೆ ನೀಡಲಾಗುವ ವಾರ್ಷಿಕ ಸಹಾಯಧನ 12 ಸಾವಿರ ರು.ಗೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.