
ರಟ್ಟೀಹಳ್ಳಿ (ಅ.11): ಪ್ರತಿಯೊಬ್ಬರ ಜೀವನಾಡಿಯಾದ ಗಂಗಾ ಮಾತೆಗೆ ಪೂಜಿಸಿ ನಾಡಿನ ಸಮೃದ್ಧಿಗಾಗಿ ಸ್ಮರಣೆ ಮಾಡಿ ಬಾಗಿನ ಅರ್ಪಣೆ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಕಾನೂನು ನ್ಯಾಯ, ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಮದಗ ಮಾಸೂರಿನ ಮದಗದ ಕೆಂಚಮ್ಮನ ಕೆರೆಗೆ ಶುಕ್ರವಾರ ನಡೆದ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಶಿವಶರಣೆ ಮದಗದ ಕೆಂಚಮ್ಮ ದೇವಿ ತನ್ನ ನಾಡಿನ ಸಮೃದ್ಧಿಗಾಗಿ ತನ್ನ ಜೀವ ಅರ್ಪಣೆ ಮಾಡುವ ಮೂಲಕ ಕೆರೆಗೆ ಶಕ್ತಿ ತುಂಬಿದ ತಾಯಿಯನ್ನು ಬಾಗಿನ ಅರ್ಪಣೆ ಮೂಲಕ ಸ್ಮರಣೆ ಮಾಡಿಕೊಳ್ಳುವ ಮೂಲಕ ಧನ್ಯತಾಭಾವ ವ್ಯಕ್ತಪಡಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ಆ ನಿಟ್ಟಿನಲ್ಲಿ ಕೆರೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸದಾ ಸಿದ್ಧವಿದೆ ಎಂದರು.
ಬ್ರಿಟಿಷರ ಕಾಲದಿಂದಲೂ ಕೆಂಚಮ್ಮನ ಕೆರೆ ಅಭಿವೃದ್ಧಿಗಾಗಿ ವಾದ ವಿವಾದಗಳು, ಚಿಂತನೆ ಇದ್ದು, ಸ್ವಾತಂತ್ರ್ಯ ನಂತರ ಗಡಿಭಾಗದ ಅಂಚಿನಲ್ಲಿರುವ ಕಾರಣ ಹಾಗೂ ಇನ್ನೂ ಅನೇಕ ಕಾರಣಗಳಿಂದ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲೇ ಉಳಿದಿದ್ದನ್ನು ನಮ್ಮ ಸರಕಾರ ಬೃಹತ್ ನೀರಾವರಿ ಇಲಾಖೆಗೆ ನೀಡಿದ್ದು ಅತ್ಯಂತ ಹೆಮ್ಮೆ ಎನ್ನಿಸುತ್ತಿದೆ ಹಾಗೂ ಕೆರೆ ಅಭಿವೃದ್ಧಿಗಾಗಿ ಅನೇಕ ಹೋರಾಟಗಳು ನಡೆದಿದ್ದು ಅದರ ಫಲವಾಗಿ 52 ಕೋಟಿ ವೆಚ್ಚದಲ್ಲಿ ಕೆರೆಯ ಎಡ ದಂಡೆ ಮತ್ತು ಬಲ ದಂಡೆ ಅಭಿವೃದ್ಧಿಪಡಿಸಲಾಗುತ್ತಿದೆ.
ಶಾಸಕ ಯು.ಬಿ. ಬಣಕಾರ ಹಾಗೂ ಹೋರಾಟ ಸಮಿತಿಯ ಅಧ್ಯಕ್ಷರು, ಸದಸ್ಯರು ಕೆರೆಯ ಅಭಿವೃದ್ಧಿಗಾಗಿ ಸಂಪೂರ್ಣ ಹೂಳು ತೆಗೆಯುವುದು, ಶಿಕಾರಿಪುರ ರಸ್ತೆಯಿಂದ ಜಲಪಾತದವರೆಗೆ ಡಾಂಬರೀಕರಣ, ಎಡ ಮತ್ತು ಬಲ ದಂಡೆಯ ಮೇಲ್ಸೇತುವೆ ನವೀಕರಣ ಸೇರಿದಂತೆ ಅನೇಕ ಬೇಡಿಕೆಗಳಿದ್ದು, ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಬಳಿ ಬೇಡಿಕೆಗಳ ಈಡೇರಿಕೆಗಾಗಿ ಸರಕಾರದ 2.5 ವರ್ಷದ ಅವಧಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ರಟ್ಟೀಹಳ್ಳಿಯ ಸಂಚಾರಿ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಕಾಯಂ ಕೋರ್ಟ್ ಮಾಡುವಂತೆ ಮನವಿ ಮಾಡಿದ್ದು ಪ್ರಸ್ತುತ 3 ದಿನ ನಡೆಯುವ ಕೋರ್ಟ್ ಕಲಾಪವನ್ನು ಕಾಯಂ ಕೋರ್ಟ್ ಆಗಿ ವಾರದ 6 ದಿನ ಕಾರ್ಯ ಕಲಾಪ ಮಾಡುವಂತೆ 2-3 ದಿನದಲ್ಲಿ ನಿರ್ಣಯ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು. ಶಾಸಕ ಯು.ಬಿ. ಬಣಕಾರ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಕೆರೆ ಕಟ್ಟೆಗಳು ತುಂಬಿ ಹರಿಯುವ ಸಂದರ್ಭದಲ್ಲಿ ರೈತರ ಹಾಗೂ ನಾಡಿನ ಸಮೃದ್ಧಿಗಾಗಿ ಗಂಗಾ ಮಾತೆಗೆ ಬಾಗಿನ ಅರ್ಪಣೆ ಮಾಡುವ ಸಂಪ್ರದಾಯ ಇದ್ದು, ಆ ನಿಟ್ಟಿನಲ್ಲಿ ಅಧಿಕಾರ ಇರಲಿ, ಇರದಿರಲಿ ಮುಂದುವರೆಸಿಕೊಂಡು ಬಂದಿದ್ದು, ಈ ಬಾರಿ ಕಾನೂನು ಮತ್ತು ಸಂಸದೀಯ ಸಚಿವರು ಬಾಗಿಯಾಗಿದ್ದು ನಮ್ಮೆಲ್ಲರ ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದರು.
ಮದಗದ ಕೆಂಚಮ್ಮನ ಎಡ ಮತ್ತು ಬಲದಂಡೆ ಅಭಿವೃದ್ಧಿಗಾಗಿ 52 ಕೋಟಿ ಹಣ ಟೆಂಡರ್ ಆಗಿದ್ದು ನಂತರ ಇನ್ನು 2 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ ಸೇರಿದಂತೆ ಸಚಿವ ಸಂಪುಟದ ಸಚಿವರನ್ನು ಕರೆಸಿ ತಾಲೂಕಿನ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಳನ್ನು ಸ್ಮರಣೆ ಮಾಡುವಂತ ಅತೀ ದೊಡ್ಡ ಕಾರ್ಯಕ್ರಮ ಮಾಡುವ ಉದ್ದೇಶವನ್ನು ಹೊಂದಿದ್ದು ಕಾರಣ ಎರಡು ತಾಲೂಕಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ತಿಪ್ಪಾಯಿಕೊಪ್ಪ ಮಠದ ಮಹಾಂತ ಮಂದಾರ ಶ್ರೀಗಳು ಆಶೀರ್ವಚನ ನೀಡಿದರು. ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ್, ಆನಂದಸ್ವಾಮಿ ಗಡ್ಡದೇವರಮಠ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಮೇಶಪ್ಪ ಬಸೇಗಣ್ಣಿ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ್, ಎ.ಕೆ. ಪಾಟೀಲ್, ಸಾಹಿತಿ ನಿಂಗಪ್ಪ ಚಳಗೇರಿ ಮುಂತಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.