ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಲು ಸಹಕರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿದರು.
ಹಿರಿಯೂರು (ಏ.11): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಲು ಸಹಕರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿದರು. ತಾಲೂಕಿನ ಸೂರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಡಳಿತವನ್ನು ದೇಶದ ಜನತೆ ನೋಡಿದ್ದಾರೆ. ಬರಗಾಲ ಬಂದಂತಹ ಸಂದರ್ಭ ದಲ್ಲೂ ಬಡವರನ್ನು ಕೈ ಬಿಡದೇ ಕಾಪಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ.
ಇದುವರೆಗೂ ಯಾರ ಖಾತೆಗೂ 15 ಲಕ್ಷ ದುಡ್ದು ಬಿದ್ದಿಲ್ಲ ಮತ್ತು ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಸುಳ್ಳು ಹೇಳಿ ಅಧಿಕಾರ ಪಡೆಯುವುದನ್ನೇ ರಾಜಕಾರಣ ಮಾಡಿಕೊಂಡಿರುವ ವಿರೋಧಿಗಳಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ಈಗಾಗಲೇ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಜನಮನ ಗೆದ್ದಿದೆ. ಸರ್ಕಾರಕ್ಕೆ ಹೊರೆಯಾಗುತ್ತದೆ ಎಂಬ ಸತ್ಯ ಗೊತ್ತಿದ್ದರೂ ಸಹ ಮಾತು ತಪ್ಪಬಾರದು, ಬಡವರಿಗೆ ಅನ್ಯಾಯವಾಗಬಾರದು ಎಂದು ನಮ್ಮ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿತು.
undefined
ಶೇ.76 ರಷ್ಟು ಜನರು ಗ್ಯಾರಂಟಿ ಯೋಜನೆಗಳನ್ನು ಒಪ್ಪಿದ್ದಾರೆ. ಮತದಾರರು ನೆನಪಿಡ ಬೇಕು. ಕಾಂಗ್ರೆಸ್ ಪಕ್ಷ ಮಾತ್ರ ನಿಮ್ಮ ಸಂಕಷ್ಟಗಳನ್ನು ಬಗೆಹರಿಸುವ ಪಕ್ಷವಾಗಿದೆ. ಗ್ಯಾರಂಟಿಯ ಜಾರಿಯ ನಡುವೆಯೂ ಈಗ ಮತ್ತೆ ಅಭಿವೃದ್ಧಿ ಪರ್ವ ಶುರುವಾಗಿದೆ. ಹಾಗಾಗಿ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ಸಮಯ ಬಂದಿದೆ. ಇಡೀ ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಇದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದ ಅಂತರದಲ್ಲಿ ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಕಾರ್ಯಕರ್ತರು ಯುದ್ಧದೋಪಾದಿಯಲ್ಲಿ ಕೆಲಸ ಮಾಡಬೇಕು.
ಸರ್ಕಾರ ರಚಿಸುವಷ್ಟು ಕ್ಷೇತ್ರಗಳಲ್ಲೂ ಕಾಂಗ್ರೆಸ್ ನಿಂತಿಲ್ಲ: ಪ್ರಲ್ಹಾದ್ ಜೋಶಿ ಲೇವಡಿ
ಗ್ಯಾರಂಟಿ ಯೋಜನೆಗಳ ಸಾರ್ಥಕತೆ ಮತ್ತು ಅದರ ಅನುಕೂಲಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಮುಖಂಡರುಗಳಾದ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಚಂದ್ರಪ್ಪ, ರಂಗಯ್ಯ, ಭೂತಾ ಭೋವಿ ಹಾಗೂ ಪಂಚಾಯ್ತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.