ಕಾಂಗ್ರೆಸ್ ತೀರಾ ಕಡಿಮೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ದೇಶದಲ್ಲಿ ಸರ್ಕಾರ ರಚಿಸುವ ಶಕ್ತಿ, ಯೋಗ್ಯತೆ ಕಾಂಗ್ರೆಸ್ ಗಿಲ್ಲ. ಅನ್ಯ ಪಕ್ಷಗಳ, ಪಕ್ಷೇತರರ ಮೊರೆ ಹೋಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.
ಹುಬ್ಬಳ್ಳಿ (ಏ.11): ಕೇಂದ್ರದಲ್ಲಿ ಸರ್ಕಾರ ರಚನೆಗೆ ಕನಿಷ್ಠ 272 ಸದಸ್ಯರ ಬಲ ಬೇಕು. ಆದರೆ, ಕಾಂಗ್ರೆಸ್ ಅಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಿಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಸಂಶಿ ಜಿಪಂ ಕ್ಷೇತ್ರದಲ್ಲಿ ರಾತ್ರಿ ನಡೆದ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಚಿಸುವಷ್ಟು ಸಶಕ್ತವಾಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ತೀರಾ ಕಡಿಮೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ದೇಶದಲ್ಲಿ ಸರ್ಕಾರ ರಚಿಸುವ ಶಕ್ತಿ, ಯೋಗ್ಯತೆ ಕಾಂಗ್ರೆಸ್ ಗಿಲ್ಲ. ಅನ್ಯ ಪಕ್ಷಗಳ, ಪಕ್ಷೇತರರ ಮೊರೆ ಹೋಗುತ್ತದೆ. ಅಧಿಕಾರ, ಹಣದ ವ್ಯವಹಾರ ನಡೆಸಿ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಹೇಳಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದೇವೆ. ರಾಮ ನಮ್ಮನ್ನು ಆಶೀರ್ವದಿಸುತ್ತಾನೆ. ದೇಶದೊಳಗೆ ಟೆರರಿಸ್ಟ್ ಚಟುವಟಿಕೆ ನಡೆಸುವವರಿಗೆ ರಾವಣನಿಗಾದ ಗತಿಯನ್ನೂ ಮಾಡುತ್ತಾನೆ ಎಂದರು.
ಮಲಪ್ರಭಾ ನೀರು: ಕ್ಷೇತ್ರದ ಪ್ರತಿ ಮನೆಮನೆಗೂ ಮಲಪ್ರಭಾ ನೀರು ಕೊಡುವ ಕೆಲಸ ನಡೆದಿದೆ. ಪೈಪ್‌ಲೈನ್ ಹಾಕಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಸಲಾಗುತ್ತದೆ ಎಂದು ಭರವಸೆ ನೀಡಿದರು. ಪ್ರಚಾರ ಸಭೆಯಲ್ಲಿ ಶಾಸಕರಾದ ಎಂ.ಆರ್.ಪಾಟೀಲ್, ಮಂಡಲಾಧ್ಯಕ್ಷ ರವಿ ಗೌಡ ಪಾಟೀಲ್, ಜಿಲ್ಲಾಧ್ಯಕ್ಷ ನಿಂಗಪ್ಪ ಸುತ್ತಗಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಎನ್.ಎನ್.ಪಾಟೀಲ್, ಬರಮಣ್ಣ ಮುಳಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಉಮೇಶ್ ಹೆಬಸೂರು, ಜೆಡಿಎಸ್ ಮುಖಂಡರಾದ ಹಜರತಲಿ ಜೋಡಮನಿ ಹಾಗು ಪಕ್ಷದ ಪ್ರಮುಖರು ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Lok Sabha Election 2024: ಜಾತಿ ಆಧಾರದ ಮೇಲೆ ಚುನಾವಣೆ ನಡೆಯಲ್ಲ: ಪ್ರಲ್ಹಾದ್ ಜೋಶಿ
15ಕ್ಕೆ ಜೋಶಿ ನಾಮಪತ್ರ ಸಲ್ಲಿಕೆ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸತತ 5ನೇ ಬಾರಿ ಕಣಕ್ಕಿಳಿದಿರುವ ಪ್ರಹ್ಲಾದ ಜೋಶಿ ಏ. 15ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ನಗರದ ಚೆನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ವೃತ್ತ, ರಸ್ತೆಗಳಲ್ಲಿ ಹೆಚ್ಚಿನ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ.