Loksabha Elections 2024: ಕಾಂಗ್ರೆಸ್‌ ಟಿಕೆಟ್‌ ಯಾರಿಗೆ: ರಮಾನಾಥ ರೈ, ಪದ್ಮರಾಜ್‌, ಸೊರಕೆ?

By Kannadaprabha News  |  First Published Mar 9, 2024, 3:36 PM IST

ಲೋಕಸಭಾ ಚುನಾವಣೆಯ ಟಿಕೆಟ್‌ಗಾಗಿ ದಕ್ಷಿಣ ಕನ್ನಡ ಕಾಂಗ್ರೆಸ್‌ ಪಾಳೆಯದಲ್ಲಿ ಈ ಬಾರಿ ತೀರ ಫೈಟ್‌ ಇಲ್ಲದಿದ್ದರೂ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ಗರಿಗೆದರಿದೆ. 


ಸಂದೀಪ್‌ ವಾಗ್ಲೆ

ಮಂಗಳೂರು (ಮಾ.09): ಲೋಕಸಭಾ ಚುನಾವಣೆಯ ಟಿಕೆಟ್‌ಗಾಗಿ ದಕ್ಷಿಣ ಕನ್ನಡ ಕಾಂಗ್ರೆಸ್‌ ಪಾಳೆಯದಲ್ಲಿ ಈ ಬಾರಿ ತೀರ ಫೈಟ್‌ ಇಲ್ಲದಿದ್ದರೂ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ಗರಿಗೆದರಿದೆ. ಮಾಜಿ ಸಚಿವ ರಮಾನಾಥ ರೈ ಹೆಸರು ಮುಂಚೂಣಿಯಲ್ಲಿದ್ದು, ಇನ್ನೋರ್ವ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಯುವ ನಾಯಕ ಪದ್ಮರಾಜ್‌ ಆರ್‌. ಹೆಸರೂ ಕೇಳಿಬರುತ್ತಿದೆ. ಈ ಮೂವರಲ್ಲಿ ಅಭ್ಯರ್ಥಿ ಆಗುವವರಾರು ಎಂಬುದಷ್ಟೇ ಈ ಕ್ಷಣದ ಕುತೂಹಲ.

Tap to resize

Latest Videos

ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ಚುನಾವಣಾ ವೀಕ್ಷಕ ಮಧು ಬಂಗಾರಪ್ಪ ಅವರು ಪಕ್ಷದ ಮುಖಂಡರು, ಮುಂಚೂಣಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ್ದರು. ಈ ವೇಳೆ ಬಹುತೇಕ ಕಾರ್ಯಕರ್ತರು ರಮಾನಾಥ ರೈ ಅವರನ್ನು ಸೂಚಿಸಿದ್ದರು. ಉಳಿದಂತೆ ಸೊರಕೆ, ಹರೀಶ್‌ ಕುಮಾರ್‌, ಪದ್ಮರಾಜ್‌, ಇನಾಯತ್‌ ಆಲಿ, ಇಫ್ತೀಕರ್‌ ಅಲಿ, ವಿವೇಕ್‌ರಾಜ್‌ ಪೂಜಾರಿ ಹೆಸರನ್ನೂ ಬೆಂಬಲಿಗರು ಸೂಚಿಸಿದ್ದರು. ಕೊನೆಯದಾಗಿ ಹೈಕಮಾಂಡ್‌ ಎದುರು ಈಗ ಮೂವರು ಮುಖಂಡರ ಹೆಸರು ಬಂದಿದೆ. ಅತಿ ಶೀಘ್ರದಲ್ಲಿ ಘೋಷಣೆಯಾಗುವ ನಿರೀಕ್ಷೆಯೂ ಇದೆ.

ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುವುದು ನಿಶ್ಚಿತ: ಸಂಸದ ಅನಂತಕುಮಾರ ಹೆಗಡೆ

ರಮಾನಾಥ ರೈ ನಿಲ್ತಾರಾ?: ಕಳೆದ ವಿಧಾನಸಭಾ ಚುನಾವಣೆ ಬಳಿಕ ರಮಾನಾಥ ರೈ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಕಾರ್ಯಕರ್ತರ ಒತ್ತಾಯ ಹೆಚ್ಚಿದ್ದರಿಂದ ಸ್ಪರ್ಧೆಗೆ ಒಲವು ತೋರಿಸಿರುವುದು ಇತ್ತೀಚಿನ ಬೆಳವಣಿಗೆ. ರೈ ಸ್ಪರ್ಧೆಗೆ ನಿಂತರೆ ಮಾತ್ರ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಭರವಸೆ ಹೈಕಮಾಂಡ್‌ಗಿದೆ. ಪಕ್ಷದ ಆಂತರಿಕ ವಿಶ್ಲೇಷಣೆಯಲ್ಲೂ ಬಿಜೆಪಿಗೆ ತೀರ ಫೈಟ್‌ ನೀಡುವ ಏಕೈಕ ಅಭ್ಯರ್ಥಿಯಾಗಿ ರೈ ಹೊರಹೊಮ್ಮಿದ್ದಾರೆ. ಆದರೆ ಇದುವರೆಗೆ ಅವರು ಸ್ಪರ್ಧಾಕಾಂಕ್ಷಿಯಾಗಿ ಹೈಕಮಾಂಡ್‌ ಬಳಿ ಟಿಕೆಟ್‌ ಕೇಳಿಲ್ಲ ಎಂದು ಪಕ್ಷದ ನಾಯಕರು ಹೇಳುತ್ತಾರೆ. ಕೊನೆ ಹಂತದಲ್ಲಿ ಹೈಕಮಾಂಡ್‌ ಸೂಚಿಸಿದರೆ ರಮಾನಾಥ ರೈ ಸ್ಪರ್ಧೆ ಮಾಡುವುದು ಖಚಿತವಾಗಲಿದೆ.

ಬಿಲ್ಲವ ಅಭ್ಯರ್ಥಿಗಳಿಗೆ ಒಲಿಯಲಿದೆಯೇ?: ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಿರುವ ಕಾರಣ ಬಿಲ್ಲವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ಬಗ್ಗೆಯೂ ಪಕ್ಷದಲ್ಲಿ ಚಿಂತನೆ ನಡೆದಿದೆ. ಒಂದು ವೇಳೆ ಉಡುಪಿಯಲ್ಲಿ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಟಿಕೆಟ್‌ ನೀಡಿದರೆ ದಕ್ಷಿಣ ಕನ್ನಡದ ಟಿಕೆಟ್‌ ಬಿಲ್ಲವರ ಪಾಲಾಗಲಿದೆ ಎನ್ನುವ ಲೆಕ್ಕಾಚಾರ ನಡೆದಿದೆ. ಈ ರೀತಿ ಆದರೆ ಮುಂಚೂಣಿಯಲ್ಲಿರುವವರೇ ವಿನಯ ಕುಮಾರ್ ಸೊರಕೆ ಮತ್ತು ಪದ್ಮರಾಜ್‌. ತಿಂಗಳ ಹಿಂದಷ್ಟೆ ಕಾಂಗ್ರೆಸ್‌ ಮುಖಂಡರು ಸಭೆ ನಡೆಸಿ ಯಾರನ್ನು ಬೆಂಬಲಿಸಬೇಕು ಎಂಬ ಚರ್ಚೆ ನಡೆದಿತ್ತು. 

ಬಿಲ್ಲವರಿಗೆ ಅಥವಾ ಹೊಸ ಮುಖಗಳಿಗೆ ಟಿಕೆಟ್‌ ನೀಡುವುದಾದರೆ ಪದ್ಮರಾಜ್‌ ಅವರನ್ನು ಬೆಂಬಲಿಸುವುದೆಂದು ಆಂತರಿಕ ತೀರ್ಮಾನ ಮಾಡಿರುವ ಮಾಹಿತಿ ದೊರೆತಿದೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹತ್ತಿರದ ಸಂಬಂಧಿಕರೂ ಆಗಿರುವ ಪದ್ಮರಾಜ್‌, ಬಿಲ್ಲವ ಸಂಘಟನೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಕುದ್ರೋಳಿ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜನಪ್ರಿಯರಾಗಿರುವ ಅವರನ್ನು ನಿಲ್ಲಿಸುವಂತೆ ಸಮುದಾಯದ ಒತ್ತಾಯವೂ ಇದೆ. ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಕೂಡ ಸ್ಪರ್ಧಾಕಾಂಕ್ಷಿಯಾಗಿದ್ದು, ಹೈಕಮಾಂಡ್‌ ಮಟ್ಟದಲ್ಲಿ ಟಿಕೆಟ್‌ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ. ಆಕಾಂಕ್ಷಿಗಳ ನಡುವೆ ತೀರ ಫೈಟ್‌ ಇಲ್ಲದಿರುವುದರಿಂದ ಸೊರಕೆ ಅವರನ್ನೂ ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಬೋಸರಾಜು

ಪುತ್ತಿಲ ಸ್ಪರ್ಧೆ ಘೋಷಣೆಯಿಂದ ಕೈ ಆಸೆಗೆ ಚಿಗುರು!: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್‌ ಪುತ್ತಿಲ ಅವರ ಪಕ್ಷೇತರ ಸ್ಪರ್ಧೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಬಿಜೆಪಿ- ಪುತ್ತಿಲ ನಡುವಿನ ತಿಕ್ಕಾಟದಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಈಗ ಕೆಲ ದಿನಗಳ ಹಿಂದಷ್ಟೆ ಬಿಜೆಪಿ ಜತೆಗಿನ ಸಂಧಾನ ವಿಫಲವಾಗಿ ಪುತ್ತಿಲ ಲೋಕಸಭೆಗೆ ಸ್ಪರ್ಧಿಸುವ ನಿರ್ಧಾರ ಘೋಷಣೆ ಮಾಡಿದ್ದರು. ಒಂದು ವೇಳೆ ಚುನಾವಣೆಗೆ ನಿಂತಲ್ಲಿ, ಕೈ ಪಾಳೆಯದಲ್ಲಿ ಮತ್ತೆ ಗೆಲುವಿನ ಸಣ್ಣ ಆಸೆ ಮೂಡಿಸಿದೆ.

click me!