ದಲಿತ ಸಿಎಂ ಆಗಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಇದರಲ್ಲಿ ಹೊಸದೇನೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಿಂದಲೂ ನಾವು (ದಲಿತರು) 99ಕ್ಕೆ ಔಟ್ ಆಗುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ (ಮಾ.09): ದಲಿತ ಸಿಎಂ ಆಗಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಇದರಲ್ಲಿ ಹೊಸದೇನೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಿಂದಲೂ ನಾವು (ದಲಿತರು) 99ಕ್ಕೆ ಔಟ್ ಆಗುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗೇ ಅಂದಿನಿಂದಲೂ ದಲಿತರು ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆ. ದಲಿತರು ಸಿಎಂ ಆಗಬೇಕೆಂಬ ಬೇಡಿಕೆ ಕಾಂಗ್ರೆಸ್‌ನಲ್ಲಿ ಅಷ್ಟೇ ಅಲ್ಲ. ಬಿಜೆಪಿ, ಜೆಡಿಎಸ್‌ನಲ್ಲೂ ಇದೆ. ಆದರೆ ಇದುವರೆಗೆ ದಲಿತರು ಯಾವುದೇ ಪಕ್ಷದಲ್ಲಿ ಸಿಎಂ ಆಗಲು ಸಾಧ್ಯವಾಗಿಲ್ಲ ಎಂದರು.
ದಲಿತರಿಗೆ ಸಿಎಂ ಸಿಗಬೇಕೆಂದು ಬೇಡಿಕೆಯಿಟ್ಟಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೇಳಿಕೆ ಸಮರ್ಥಿಸಿಕೊಂಡ ಅವರು, ಕಳೆದ 20 ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ, 2013ರಲ್ಲಿ ಡಾ.ಜಿ.ಪರಮೇಶ್ವರ ಅವರು ಸಿಎಂ ಆಗಬೇಕೆಂಬ ಕೂಗು ಇತ್ತು. ಆದರೆ ಅವರಿಬ್ಬರಿಗೂ ಸಿಎಂ ಆಗುವ ಭಾಗ್ಯ ಸಿಗಲಿಲ್ಲ. ನಾನು ಅನೇಕ ಸಮಾವೇಶಗಳಲ್ಲಿ ದಲಿತರು ಸಿಎಂ ಆಗಲೇಬೇಕೆಂದು ಹೇಳಿದ್ದೇನೆ ಎಂದರು.
ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುವುದು ನಿಶ್ಚಿತ: ಸಂಸದ ಅನಂತಕುಮಾರ ಹೆಗಡೆ
ಲೋಕಸಭೆ ಚುನಾವಣೆ ನಂತರ ದನಿ ಎತ್ತುತ್ತೇವೆ: ಎಸ್ಸಿ, ಎಸ್ಟಿ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ನಮ್ಮ ಕಡೆ ಸೈನಿಕರು ಜಾಸ್ತಿ ಇದ್ದಾರೆ. ಸೈನಿಕರನ್ನು ಲೀಡ್ ಮಾಡುವ ಕ್ಯಾಪ್ಟನ್ ಇಲ್ಲ. ಕ್ಯಾಪ್ಟನ್ ಪಾತ್ರಗಳನ್ನು ರೆಡಿ ಮಾಡಬೇಕಿದೆ. ಹೈಕಮಾಂಡ್ ಎದುರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದೇವೆ. ಈ ಕುರಿತು ಲೋಕಸಭೆ ಚುನಾವಣೆ ನಂತರ ದಲಿತ ಸಿಎಂ ಬಗ್ಗೆ ದನಿ ಎತ್ತುತ್ತೇವೆ. ಈಗ ಲೋಕಸಭೆಯಲ್ಲಿ ಹೆಚ್ಚಿನ ಸೀಟು ಗೆಲ್ಲಲು ಆದ್ಯತೆ ನೀಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಷ್ಟೇ ಅಲ್ಲ. ಬಿಜೆಪಿಯಲ್ಲಿ ಗೋವಿಂದ ಕಾರಜೋಳ, ಜೆಡಿಎಸ್‌ನಲ್ಲಿ ಎಚ್.ಕೆ. ಕುಮಾರಸ್ವಾಮಿ ಅವರಿಗೂ ಸಿಎಂ ಆಗುವ ಅವಕಾಶ ಇತ್ತು. ಆದರೆ ಬಿಜೆಪಿ, ಜೆಡಿಎಸ್‌ನಲ್ಲೂ ದಲಿತ ನಾಯಕರು ಹೈಕಮಾಂಡ್ ಎದುರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ ಎಂದರು.
ಎರಡನೇ ಪಟ್ಟಿಯಲ್ಲಿ ಹೆಸರು: ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಲೋಕಸಭೆ ಅಭ್ಯರ್ಥಿಗಳ ಹೆಸರು 1ನೇ ಪಟ್ಟಿಯಲ್ಲಿ ಆಗಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆಯಾಗುತ್ತದೆ. ಈ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ಜಿಲ್ಲೆಯ ಎಲ್ಲ ರಾಜಕಾರಣಿಗಳು ಎರಡ್ಮೂರು ದಿನಗಳಲ್ಲಿ ಇನ್ನೊಂದು ಸಭೆ ಮಾಡಲು ಸೂಚಿಸಿದ್ದಾರೆ. ಜಿಲ್ಲೆಯ ಎಲ್ಲಾ ನಾಯಕರು ಸಹಮತದಿಂದ ಅಭ್ಯರ್ಥಿಗಳನ್ನು ಸೂಚಿಸುತ್ತೇವೆ ಎಂದು ಹೇಳಿದರು.
ಕಡೂರು ಕ್ಷೇತ್ರದ ಅಲ್ಪಸಂಖ್ಯಾತರ ಅಭಿವೃದ್ದಿಗೆ 5 ಕೋಟಿ :ಶಾಸಕ ಕೆ.ಎಸ್.ಆನಂದ್
ಇನ್ನೂ ಅಂತಿಮ ಆಗಿಲ್ಲ: ಯಾವುದೇ ಅಭ್ಯರ್ಥಿಗಳನ್ನು ವೀಕ್ ಎಂದು ಹೇಳಲು ಆಗಲ್ಲ. ದೊಡ್ಡ ಸಮುದಾಯ ಇದ್ದಾಗ ಗೆದ್ದ ಉದಾಹರಣೆಗಳು ಇವೆ. ಜಿಲ್ಲೆಯಲ್ಲಿ ಕುರುಬ ಸಮುದಾಯದ ಶಾಸಕರು ಇಲ್ಲ. ಅವರಿಗೂ ಅವಕಾಶ ಸಿಕ್ಕಿಲ್ಲ ಎಂಬ ದೃಷ್ಟಿಯಿಂದ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಒಂದನ್ನು ಕುರುಬ ಸಮುದಾಯಕ್ಕೆ ನೀಡಬೇಕೆಂದು ಚರ್ಚೆ ನಡೆದಿದೆ. ಆದರೆ, ಇನ್ನೂ ಅಂತಿಮವಾಗಿಲ್ಲ ಎಂದರು. ನಿಗಮ, ಮಂಡಳಿಗಳ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ನಿರಾಶೆಯಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಯಾರು ನಿರಾಶೆಯಾಗಿಲ್ಲ. ಬೆಳಗಾವಿಯ ಬುಡಾ, ಕಾಡಾದಲ್ಲಿ ಅವಕಾಶ ಇದೆ. ಆ ಎರಡು ಸ್ಥಾನಗಳನ್ನು ಸ್ಥಳೀಯರಿಗೆ ನೀಡಲಾಗುವುದೆಂದು ಹೇಳಿದರು.