ಮೈಸೂರು ರಾಜವಂಶಸ್ಥ ಯದುವೀರ್‌ ರಾಜಕೀಯ ಪ್ರವೇಶ: ಈ ಹಿಂದೆಯೂ 4 ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ರಾಜವಂಶಸ್ಥರು

By Kannadaprabha News  |  First Published Mar 14, 2024, 6:43 AM IST

ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಕುತುಹಲ ಕೆರಳಿಸಿದ್ದ ಮೈಸೂರು- ಕೊಡಗು ಲೊಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕೊನೆಗೂ ಹೊರಬಿದ್ದಿದ್ದು, ನಿರೀಕ್ಷೆಯಂತೆ ರಾಜವಂಶಸ್ಥ ಯದುವೀರ್‌ ಒಡೆಯರ್‌ಗೆ ಟಿಕೆಟ್‌ ನೀಡಲಾಗಿದೆ.


ಅಂಶಿ ಪ್ರಸನ್ನಕುಮಾರ್

ಮೈಸೂರು (ಮಾ.14): ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಕುತುಹಲ ಕೆರಳಿಸಿದ್ದ ಮೈಸೂರು- ಕೊಡಗು ಲೊಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕೊನೆಗೂ ಹೊರಬಿದ್ದಿದ್ದು, ನಿರೀಕ್ಷೆಯಂತೆ ರಾಜವಂಶಸ್ಥ ಯದುವೀರ್‌ ಒಡೆಯರ್‌ಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಎರಡು ಬಾರಿ ಗೆದ್ದಿರುವ ಹಾಲಿ ಸಂಸದ ಪ್ರತಾಪ್‌ ಸಿಂಹ ಅವರ ಬದಲು ಈ ಬಾರಿ ರಾಜವಂಶಸ್ಥರಿಗೆ ಮಣೆ ಹಾಕಲಾಗಿದೆ. ಹಾಗೆ ನೋಡಿದರೆ ಮೈಸೂರು ಕ್ಷೇತ್ರದಲ್ಲಿ ರಾಜವಂಶಸ್ಥರು ಚುನಾವಣಾ ಅಖಾಡಕ್ಕಿಳಿಯುತ್ತಿರುವುದು ಇದೇ ಮೊದಲಲ್ಲ. ಮೈಸೂರು ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. 

Tap to resize

Latest Videos

ತಲಾ ಒಂದು ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿ ಸೋತಿದ್ದರು ಕೂಡ. ಆದರೆ 2009ರ ಪುನರ್ ವಿಂಗಡಣೆ ನಂತರ ಕ್ಷೇತ್ರದ ಚಿತ್ರಣ ಸಂಪೂರ್ಣ ಬದಲಾಗಿ ಹೋಗಿದೆ. ಪುನರ್ ವಿಂಗಡಣೆಗೆ ಮೊದಲು ಎಚ್.ಡಿ.ಕೋಟೆ ಹಾಗೂ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. 2009ರಿಂದ ಎಚ್.ಡಿ. ಕೋಟೆಯು ಚಾಮರಾಜನಗರ ಕ್ಷೇತ್ರ, ಕೆ.ಆರ್.ನಗರವು ಪಕ್ಕದ ಮಂಡ್ಯ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ. ಇಡೀ ಕೊಡಗು ಜಿಲ್ಲೆ ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಬಂದಿದೆ. ಇದಲ್ಲದೇ ಮೈಸೂರು ತಾಲೂಕಿನ ಭಾಗಶಃ ಪ್ರದೇಶಗಳು ವರುಣ ವಿಧಾನಸಭಾ ಕ್ಷೇತ್ರವಾಗಿ ಚಾಮರಾಜನಗರ ಕ್ಷೇತ್ರಕ್ಕೆ ಸೇರಿವೆ.

ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಕಳ್ಳೆತ್ತುಗಳು: ಸಿಎಂ ಸಿದ್ದರಾಮಯ್ಯ

ಇದರಿಂದಾಗಿ ಈಗ ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿವೆ. 1984ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2,47,754 ಮತಗಳನ್ನು ಪಡೆದು ಗೆದ್ದಿದ್ದರು. ಜನತಾಪಕ್ಷದ ಕೆ.ಪಿ. ಶಾಂತಮೂರ್ತಿ- 1,83,144 ಮತಗಳನ್ನು ಪಡೆದು ಪರಾಭವಗೊಂಡಿದ್ದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಂದ ಸ್ಪರ್ಧಿಸಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 3,84,888 ಮತಗಳನ್ನು ಪಡೆದ ಗೆದ್ದರು. ಜನತಾಪಕ್ಷದ ಒಡಕಿನ ಪರಿಣಾಮ ಗೆಲವು ಸಾಧ್ಯವಾಯಿತು. ಜನತಾಪಕ್ಷದ ಡಿ.ಮಾದೇಗೌಡ- 1,35,524, ಜನತಾದಳದ ಪ. ಮಲ್ಲೇಶ್- 1,31,905 ಮತಗಳನ್ನು ಪಡೆದು ಸೋತಿದ್ದರು.

1991ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್ಸಿನ ಚಂದ್ರಪ್ರಭಾ ಅರಸು ಎದುರು ಸೋತರು. ಚಂದ್ರಪ್ರಭಾ- 2,25,881, ಒಡೆಯರ್- 2,08,999 ಮತಗಳನ್ನು ಪಡೆದಿದ್ದರು. ಒಡೆಯರು ಕೈಗೆ ಸಿಗುವುದಿಲ್ಲ ಎಂಬುದು ಈ ಸೋಲಿಗೆ ಕಾರಣವಾಗಿತ್ತು. 1996ರಲ್ಲಿ ಒಡೆಯರ್ ಕಾಂಗ್ರೆಸ್ ಅಭ್ಯರ್ಥಿಯಾಗಿ 2,58,299 ಮತಗಳನ್ನು ಪಡೆದು 3ನೇ ಬಾರಿ ಗೆದ್ದರು. ಈ ವೇಳೆ ಜನತಾದಳದ ಜಿ.ಟಿ. ದೇವೇಗೌಡರು 2,46,623 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದ್ದರು. 1998ರಲ್ಲಿ ಒಡೆಯರ್ ಸ್ಪರ್ಧಿಸಲಿಲ್ಲ. ಬಿಜೆಪಿಯ ಸಿ.ಎಚ್. ವಿಜಯಶಂಕರ್ ಗೆದ್ದಿದ್ದರು. 1999ರಲ್ಲಿ ಒಡೆಯರ್ ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿ, 3,38,051 ಮತಗಳನ್ನು ಪಡೆದು ಗೆದ್ದರು. ಬಿಜೆಪಿಯ ವಿಜಯಶಂಕರ್ 3,24,620 ಮತಗಳನ್ನು ಪಡೆದು ಪ್ರಬಲ ಸ್ಪರ್ಧೆ ನೀಡಿದ್ದರು.

2004ರಲ್ಲಿ ಮತ್ತೆ ಒಡೆಯರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ವಿಜಯಶಂಕರ್ ಎದುರು ಸೋತರು. ವಿಜಯಶಂಕರ್- 3,16,661 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಗುರುಸ್ವಾಮಿ- 3,06,292 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದ್ದರು. ಒಡೆಯರ್- 2,99, 227 ಮತಗಳಿಸಿ, ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಲೆ ಜೋರಾಗಿತ್ತು. 2009ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಸ್ವರೂಪವೇ ಬದಲಾಗಿ ಹೋಯಿತು. 2009ರಲ್ಲಿ ಕಡಿಮೆ ಅಂತರದಲ್ಲಿ ಕಾಂಗ್ರೆಸ್ಸಿನ ವಿಶ್ವನಾಥ್ ಗೆದ್ದರೆ, 2014, 2019ರಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಸತತ ಎರಡು ಗೆಲವು ದಾಖಲಿಸಲು ಸಾಧ್ಯವಾಯಿತು. ಬಿಜೆಪಿಗೆ ಪರೋಕ್ಷವಾಗಿ ಜೆಡಿಎಸ್ ಬೆಂಬಲವೂ ಈ ಗೆಲುವಿಗೆ ಕಾರಣ.

ಜೆಡಿಎಸ್ ಎಲ್ಲಿದೆ? ಬಿಜೆಪಿ ಸ್ಪೋಕ್ಸ್ ಪರ್ಸನ್ ಆದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್

ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿರುವ ಕಾರಣ ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧೆ ಎದುರಾಗಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಒಕ್ಕಲಿಗರಿಗೆ ಟಿಕೆಟ್ ನೀಡಿ, ಬಿಜೆಪಿಯನ್ನು ಹೇಗಾದರೂ ಮಾಡಿ ಸೋಲಿಸುವ ಯತ್ನ ನಡೆಯುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೆಸರು ಕೂಡಾ ಪ್ರಬಲವಾಗಿ ಕೇಳಿಬರುತ್ತಿದೆ. 2004ರ ನಂತರ ಕರ್ನಾಟಕದ ರಾಜಕಾರಣ ಜಾತಿ, ಹಣ ಕೇಂದ್ರೀತ ಆಗಿರುವುದರಿಂದ ಫಲಿತಾಂಶ ಯಾವ ರೀತಿಯಾಗಬಹುದು ಎಂಬ ಕುತೂಹಲ ಉಂಟಾಗಿದೆ.

click me!