Loksabha Election: ಜೆಡಿಎಸ್ ಅಭ್ಯರ್ಥಿ ಕಾದುನೋಡುತ್ತಿದೆ ಕಾಂಗ್ರೆಸ್: ಮತ್ತೆ ರಮ್ಯಾ ಹೆಸರು ಚರ್ಚೆಗೆ

By Kannadaprabha News  |  First Published Jan 13, 2024, 10:03 PM IST

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ನಿಂದ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಸ್ಪರ್ಧೆಗೆ ಉತ್ಸುಕರಾಗಿರುವಾಗಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ. 


ಮಂಡ್ಯ ಮಂಜುನಾಥ

ಮಂಡ್ಯ (ಜ.12): ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ನಿಂದ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಸ್ಪರ್ಧೆಗೆ ಉತ್ಸುಕರಾಗಿರುವಾಗಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ಕಣಕ್ಕಿಳಿಯಬಹುದಾದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಾದುನೋಡುವ ತಂತ್ರವನ್ನು ಅನುಸರಿಸುತ್ತಿದೆ. ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಇನ್ನೂ ಸೀಟು ಹಂಚಿಕೆಯಾಗಿಲ್ಲ. ಆದರೂ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತ ಎಂದು ಭಾವಿಸಲಾಗಿದೆ. 

Tap to resize

Latest Videos

ಹಾಗಾಗಿ ಆ ಪಕ್ಷದ ಕೆಲವು ಮಾಜಿ ಶಾಸಕರು ಎಚ್.ಡಿ. ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಯುವಂತೆ ಬೆಂಬಲಿಗರ ಜೊತೆಗೂಡಿ ಒತ್ತಡ ಹೇರುತ್ತಿದ್ದಾರೆ. ಇದು ಕುಮಾರಸ್ವಾಮಿ ಮಂಡ್ಯ ಕ್ಷೇತ್ರ ಪ್ರತಿನಿಧಿಸುವರೆಂಬ ಗಾಳಿಸುದ್ದಿಗೆ ರೆಕ್ಕೆ-ಪುಕ್ಕ ಮೂಡಿದಂತಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯವಾಗಿ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲುವ ಅಭ್ಯರ್ಥಿಗಳು ಕಾಣಸಿಗುತ್ತಿಲ್ಲ. ಪಕ್ಷದ ವರಿಷ್ಠರು, ನಾಯಕರಿಂದ ಅಭ್ಯರ್ಥಿಗೆ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಆದರೆ, ವರ್ಚಸ್ವಿ ಅಭ್ಯರ್ಥಿಗಳು ಸಿಗದಿರುವುದು ಕಾಂಗ್ರೆಸ್‌ಗೆ ತಲೆನೋವು ತಂದಿದೆ. ಅದಕ್ಕಾಗಿ ಜೆಡಿಎಸ್ ಅಭ್ಯರ್ಥಿ ಯಾರಾಗುವರೆಂಬುದನ್ನು ಆಧರಿಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಕುಸಿಯುವ ಆತಂಕದಲ್ಲಿ ಕೊಡಗಿನ ಕಿರಂಗದೂರು ಸರ್ಕಾರಿ ಶಾಲೆ: 42ಕ್ಕೆ ಇಳಿದ ವಿದ್ಯಾರ್ಥಿಗಳ ಸಂಖ್ಯೆ!

ಲೋಕಸಭಾ ಚುನಾವಣೆಗೆ ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು ಅಖಾಡ ಪ್ರವೇಶಿಸುತ್ತಾರೆಂಬ ಮಾತುಗಳು ಪಕ್ಷದೊಳಗೆ ದಟ್ಟವಾಗಿ ಕೇಳಿಬರುತ್ತಿವೆ. ಸಿ.ಎಸ್.ಪುಟ್ಟರಾಜು ಅಭ್ಯರ್ಥಿಯಾದರೆ ಅವರಿಗೆ ಪ್ರತಿಸ್ಪರ್ಧಿಯಾಗಿ ಯಾರನ್ನು ಕಣಕ್ಕಿಳಿಸಬೇಕು, ಅಂತಿಮ ಹಂತದಲ್ಲಿ ಎಚ್.ಡಿ.ಕುಮಾರಸ್ವಾಮಿಯೇ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದರೆ ಆಗ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಬಗ್ಗೆ ಎರಡೂ ಸನ್ನಿವೇಶಗಳನ್ನು ಮುಂದಿಟ್ಟುಕೊಂಡು ಸಮಾಲೋಚನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಚಲುವರಾಯಸ್ವಾಮಿಗೆ ಸವಾಲು: ಲೋಕಸಭಾ ಚುನಾವಣೆಯನ್ನು ಗೆಲ್ಲುವುದಕ್ಕೆ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಸಚಿವರಿಗೆ ಆರು ಟಾಸ್ಕ್‌ಗಳನ್ನು ನೀಡಿದೆ. ಈ ಟಾಸ್ಕ್‌ಗಳನ್ನು ಎದುರಿಸಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಸವಾಲಾಗಿದೆ. ಕೆಲ ದಿನಗಳ ಹಿಂದೆ ಮಂಡ್ಯ ಲೋಕಸಭಾ ಅಭ್ಯರ್ಥಿ ನಿರ್ಧಾರವಾಗಿದೆ. ಸೂಕ್ತ ಸಮಯದಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ. ಆದರೆ, ಅಭ್ಯರ್ಥಿ ಯಾರೆಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡದಿರುವುದು ವಿಪಕ್ಷದವರಿಗೆ ಟಾಂಗ್ ನೀಡುವ ತಂತ್ರವೆಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ಎಚ್‌ಡಿಕೆ ಕಣಕ್ಕಿಳಿಯುವ ವದಂತಿಯನ್ನು ನಂಬಿ ಸ್ಥಳೀಯವಾಗಿ ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧಿಸುವುದಕ್ಕೆ ಯಾರೂ ಉತ್ಸಾಹವನ್ನು ತೋರುತ್ತಿಲ್ಲ. ಇದರಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದೆ. ವರ್ಚಸ್ಸಿನ ಜೊತೆಗೆ ಹಣಬಲವಿರುವ ಅಭ್ಯರ್ಥಿಗಾಗಿ ಹುಡುಕಾಟ ಮುಂದುವರೆದಿದೆ. ಹಿಂದೆ ನಡೆದ ಚುನಾವಣೆಗಳಲ್ಲೆಲ್ಲಾ ಜೆಡಿಎಸ್ ವಿರೋಧಿಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಕಾಂಗ್ರೆಸ್ ಗೆಲುವಿಗೆ ಚಲುವರಾಯಸ್ವಾಮಿ ರೂಪಿಸಿದ್ದ ತಂತ್ರಗಾರಿಕೆಗಳೆಲ್ಲಾ ಯಶಸ್ಸು ಕಂಡಿದೆ. ಈಗ ಲೋಕಸಭೆ ಗೆಲ್ಲುವುದಕ್ಕೆ ಅದೇ ಚಾಣಕ್ಯ ತಂತ್ರ ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗಿದೆ.

ಮುಂಬೈಗೆ ತೆರಳಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರನ್ನು ಭೇಟಿಯಾಗಿರುವ ಚಲುವರಾಯಸ್ವಾಮಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಕ್ಕೆ ನಿಲ್ಲುವಂತೆ ಕೋರಿದ್ದಾರೆ. ಜೆಡಿಎಸ್‌ನಿಂದ ಅತೃಪ್ತರಾಗಿ ಪಕ್ಷದಿಂದ ಹೊರಗಿರುವವರ ಸಂಪರ್ಕವನ್ನು ಸಾಧಿಸಿ ಅವರಿಂದಲೂ ಚುನಾವಣೆಗೆ ನೆರವಿನ ಹಸ್ತ ಚಾಚುವಂತೆ ಮನವಿ ಮಾಡುತ್ತಾ ಎಲ್ಲೆಡೆಯಿಂದ ಕಾಂಗ್ರೆಸ್ ಕಡೆಗೆ ಮತಬ್ಯಾಂಕ್ ಸೃಷ್ಟಿಸುವ ಪ್ರಯತ್ನದಲ್ಲಿ ಸದ್ದಿಲ್ಲದೆ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೆ ರಮ್ಯಾ ಹೆಸರು ಚರ್ಚೆಗೆ: ದಶಕದ ಹಿಂದೆ ಲೋಕಸಭೆ ಉಪ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಸಂಸದೆ ರಮ್ಯಾ ಅವರನ್ನು ಕರೆತರುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆ ಎದುರಾದಾಗಲೆಲ್ಲಾ ರಮ್ಯಾ ಹೆಸರು ಕೇಳಿಬರುವುದು ಸಾಮಾನ್ಯವಾಗಿದೆ. ಅದೊಂದು ರೀತಿ ಹುಲಿ ಬಂತು ಹುಲಿ ಎಂಬ ಕತೆಯಂತಾಗಿದೆ. ಆದರೆ, ರಮ್ಯಾ ಮಾತ್ರ ಮಂಡ್ಯದತ್ತ ಮುಖ ಮಾಡುತ್ತಿಲ್ಲ. ಅವರ ಮತದಾರರ ಗುರುತಿನ ಚೀಟಿ ಮಂಡ್ಯದಲ್ಲಿದ್ದರೂ ಎರಡು ಚುನಾವಣೆಗಳಿಂದ ಹಕ್ಕು ಚಲಾಯಿಸಲು ಬಂದಿಲ್ಲ. ಈ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರಕ್ಕೆ ರಮ್ಯಾ ಅವರನ್ನು ಕರೆತರುವ ಬಗ್ಗೆ ಪಕ್ಷದೊಳಗೆ ಚರ್ಚೆಗಳು ನಡೆದಿವೆ.

ಚಿತ್ರನಟಿಯಾಗಿದ್ದ ರಮ್ಯಾ ಸೆಲೆಬ್ರಿಟಿಯೂ ಆಗಿದ್ದಾರೆ. ೬ ತಿಂಗಳು ಸಂಸದೆಯಾಗಿದ್ದ ಅವಧಿಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಗಮನಸೆಳೆಯುವ ಕೊಡುಗೆ ನೀಡಿದ್ದಾರೆ. ಅವರನ್ನು ಕಣಕ್ಕಿಳಿಸಿದರೆ ಮತದಾರರು ಅವರ ಬಗ್ಗೆ ಒಲವು ತೋರಬಹುದು. ಎಚ್‌ಡಿಕೆ ಸ್ಪರ್ಧಿಸಿದರೆ ಸಮರ್ಥವಾಗಿ ಎದುರಿಸಬಹುದು ಎಂಬ ದಿಕ್ಕಿನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರು ಚಿಂತಿಸುತ್ತಿದ್ದಾರೆ. ಆದರೆ, ರಮ್ಯಾ ಮಂಡ್ಯವನ್ನು ಪ್ರತಿನಿಧಿಸುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರ ವಿರೋಧವಿದೆ. ರಮ್ಯಾ ಕೂಡ ರಾಜಕಾರಣಕ್ಕೆ ಬರುವುದಕ್ಕೆ ಹೆಚ್ಚಿನ ಒಲವು ತೋರುತ್ತಿಲ್ಲ. ಆದರೂ ಅವರ ಮನವೊಲಿಸಲು ಹಲವರು ಸಿದ್ದರಾಗಿದ್ದಾರೆ ಎಂಬ ಬಗ್ಗೆಯೂ ಪಕ್ಷದ ಪಾಳಯದಿಂದ ಮಾತುಗಳು ಕೇಳಿಬರುತ್ತಿವೆ.

ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಪಟ್ಟು: ಸಂಸದೆ ಸುಮಲತಾ ಅವರನ್ನು ಕಾಂಗ್ರೆಸ್ ಕಡೆಗೆ ಸೆಳೆಯುವ ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗುತ್ತಿವೆ. ಎಚ್‌ಡಿಕೆಯನ್ನು ಕಣಕ್ಕಿಳಿದರೆ ಸಮರ್ಥವಾಗಿ ಎದುರಿಸುವರೆಂಬ ಭಾವನೆ ಕಾಂಗ್ರೆಸ್‌ನವರಲ್ಲಿದೆ. ಸುಮಲತಾ ಕೈಪಾಳಯಕ್ಕೆ ಬರುವುದಕ್ಕೆ ಪಕ್ಷದ ಕೆಲ ನಾಯಕರು ಅಡ್ಡಿಯಾಗಿದ್ದಾರೆಂದೂ ಹೇಳಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರು ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿರುವುದರಿಂದ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. 

ಸಂಸದ ಪ್ರಜ್ವಲ್‌ರ ವಿಡಿಯೋ ಇದೆ, ಸಮಯ ಬಂದಾಗ ಬಿಡುಗಡೆ: ಬಿಜೆಪಿ ವಕ್ತಾರ ದೇವರಾಜೇಗೌಡ

ಆದರೆ, ಮಂಡ್ಯವನ್ನು ಬಿಜೆಪಿ ಬಹುತೇಕ ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆಗಳಿರುವುದರಿಂದ ಅವರು ಕ್ಷೇತ್ರ ವಂಚಿತರಾಗುತ್ತಿದ್ದಾರೆ. ಮಂಡ್ಯ ಕ್ಷೇತ್ರವನ್ನೇ ಪ್ರತಿನಿಧಿಸಲು ಸುಮಲತಾ ಪಟ್ಟು ಹಿಡಿದಿರುವುದರಿಂದ ಅವರೀಗ ಪರ್ಯಾಯ ಆಯ್ಕೆಗಳತ್ತ ಚಿತ್ತ ಹರಿಸುತ್ತಿದ್ದಾರೆ. ಅವರ ಚಿತ್ತ ಕಾಂಗ್ರೆಸ್‌ನತ್ತ ಹರಿಯುತ್ತಿದ್ದರೂ ಬಿಜೆಪಿ ವರಿಷ್ಠರು ಸೂಕ್ತ ಸ್ಥಾನ-ಮಾನ ನೀಡುವ ಭರವಸೆಯೊಂದಿಗೆ ಪಕ್ಷದೊಳಗೆ ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸುತ್ತಿದ್ದಾರೆ. ಇದರ ನಡುವೆ ಬಿಜೆಪಿ ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಾದರೂ ಕಣಕ್ಕಿಳಿಯುವ ಸಂದೇಶವನ್ನೂ ಬೆಂಬಲಿಗರ ಮೂಲಕ ರವಾನಿಸಿರುವುದು ಕುತೂಹಲ ಕೆರಳಿಸಿದೆ.

click me!