ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

By Web DeskFirst Published Jan 28, 2019, 11:26 AM IST
Highlights

ಮೊದಲಿನಿಂದಲೂ ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ತನ್ನದೇ ಆದ ಪಾತ್ರ ನಿಭಾಯಿಸುತ್ತಲೇ ಬಂದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಇಲ್ಲಿ ಪ್ರಾಬಲ್ಯ ಮೆರೆದಿವೆ. ಜಾರಕಿಹೊಳಿ ಸಹೋದರರ ಜಿದ್ದಾಜಿದ್ದಿಯ ರಾಜಕಾರಣದಿಂದಾಗಿ ಈ ಬಾರಿ ಬೆಳಗಾವಿಯನ್ನೇ ಕೇಂದ್ರ ಸ್ಥಾನವಾಗಿಸಿಕೊಂಡಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಾನಾ ರೀತಿಯ ಲೆಕ್ಕಾಚಾರಗಳು ನಡೆದಿವೆ. ಕಾಂಗ್ರೆಸ್‌ನಲ್ಲಿಯ ಭಿನ್ನಾಭಿಪ್ರಾಯದ ಲಾಭ ಪಡೆಯಲು ಬಿಜೆಪಿ ಹವಣಿಸಿದೆ.

ಮಹಾಭಾರತ ಸಂಗ್ರಾಮ: ಬೆಳಗಾವಿ ಕ್ಷೇತ್ರ

ಬೆಳಗಾವಿ[ಜ.28]: ಪ್ರಸಕ್ತ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜಕೀಯ ವಲಯದಲ್ಲಿ ಹೆಚ್ಚು ತಲ್ಲಣ ಸೃಷ್ಟಿಸಿರುವುದರಲ್ಲಿ ‘ಸಕ್ಕರೆ ನಾಡು’ ಬೆಳಗಾವಿ ರಾಜಕಾರಣದ ಪಾತ್ರ ಮಹತ್ವದ್ದು.

ಮೊದಲಿನಿಂದಲೂ ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ತನ್ನದೇ ಆದ ಪಾತ್ರ ನಿಭಾಯಿಸುತ್ತಲೇ ಬಂದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಇಲ್ಲಿ ಪ್ರಾಬಲ್ಯ ಮೆರೆದಿವೆ. ಜಾರಕಿಹೊಳಿ ಸಹೋದರರ ಜಿದ್ದಾಜಿದ್ದಿಯ ರಾಜಕಾರಣದಿಂದಾಗಿ ಈ ಬಾರಿ ಬೆಳಗಾವಿಯನ್ನೇ ಕೇಂದ್ರ ಸ್ಥಾನವಾಗಿಸಿಕೊಂಡಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಾನಾ ರೀತಿಯ ಲೆಕ್ಕಾಚಾರಗಳು ನಡೆದಿವೆ. ಕಾಂಗ್ರೆಸ್‌ನಲ್ಲಿಯ ಭಿನ್ನಾಭಿಪ್ರಾಯದ ಲಾಭ ಪಡೆಯಲು ಬಿಜೆಪಿ ಹವಣಿಸಿದೆ. ಒಟ್ಟಾರೆ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳು ಈ ಕ್ಷೇತ್ರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ಕುತೂಹಲಕರವಾಗಿದೆ.

ಲೋಕಸಭಾ ಕ್ಷೇತ್ರ ಅರಭಾವಿ, ಗೋಕಾಕ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ ಯಲ್ಲಮ್ಮ ಹಾಗೂ ರಾಮದುರ್ಗ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು ಈವರೆಗೆ ಬಿಜೆಪಿಯ ಭದ್ರಕೋಟೆ ಎನಿಸಿದೆ. ಎಂಟು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಈಗಲೂ ಬಿಜೆಪಿಯದೇ ಪ್ರಾಬಲ್ಯವಿದೆ. ಬೆಳಗಾವಿ ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿ ಕನ್ನಡ ಹಾಗೂ ಮರಾಠಿ ಪ್ರಾಬಲ್ಯವಿದೆ. ಭಾಷೆ, ಪ್ರಾಂತೀಯ ಭಾವನಾತ್ಮಕತೆಗಳು ಕೂಡ ಇಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸುತ್ತವೆ ಎಂಬುದು ವಿಶೇಷ.

ಮರಾಠಿ ಭಾಷಿಕರು ಹಿಂದುತ್ವದತ್ತ ವಾಲುತ್ತಿರುವುದು ಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಗಿದ್ದರೂ ಹಾಲಿ ಸಂಸದ ಸುರೇಶ ಅಂಗಡಿ ಅವರ ವಿರುದ್ಧ ಅವರದ್ದೇ ಪಕ್ಷದ ಕಾರ್ಯಕರ್ತರು, ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಬದಲಿಸಬೇಕು ಎಂಬ ಚಳವಳಿ ಜಾಲತಾಣಗಳಲ್ಲಿ ಶುರುವಾಗಿದೆ. ಹಾಗಾಗಿ, ಬಿಜೆಪಿಯಲ್ಲಿಯೂ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಏನೇ ಆದರೂ ಇಲ್ಲಿ ಬಿಜೆಪಿ- ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯುತ್ತದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಲೋಕಸಭಾ ಚುನಾವಣೆ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟಬುತ್ತಿ. ಹಾಗಾಗಿ, ಮರಾಠಿ ಭಾಷಿಕರು ಸಹಜವಾಗಿಯೇ ಹಿಂದುತ್ವದತ್ತ ವಾಲಿ, ಕೇಸರಿ ಪಡೆಯ ಕೈ ಹಿಡಿಯುತ್ತಾರೆ.

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಹಾಗೆ ನೋಡಿದರೆ, ಜೆಡಿಎಸ್‌ಗೆ ಇಲ್ಲಿ ಭದ್ರ ನೆಲೆ ಇಲ್ಲ. ಕಾರ್ಯಕರ್ತರ ಸಂಖ್ಯೆ ಕೂಡ ಅಷ್ಟಕಷ್ಟೇ. ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿಯಲ್ಲಿದೆ. ಹಾಗಾಗಿ, ಚುನಾವಣಾ ಮೈತ್ರಿ ಆದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವುದು ಅನಿವಾರ್ಯವಾಗಬಹುದು.

ಸ್ವಪಕ್ಷದವರಿಂದಲೇ ಅಂಗಡಿಗೆ ವಿರೋಧ:

ಬಿಜೆಪಿ ಹಾಲಿ ಸಂಸದ ಸುರೇಶ ಅಂಗಡಿ ಅವರು ಸ್ವಪಕ್ಷದವರಿಂದಲೇ ವಿರೋಧ ಕಟ್ಟಿಕೊಳ್ಳುವಂತಾಗಿದೆ. ಕಾರ್ಯಕರ್ತರ ಕಡೆಗಣನೆ ಮಾಡಿರುವ ಆರೋಪ ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಂಗಡಿ ಹಠಾವೋ, ಬಿಜೆಪಿ ಬಚಾವೋ ಚಳವಳಿ ನಡೆದಿತ್ತು. ಅಂಗಡಿ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ತಮ್ಮ ನಾಯಕರ ಮೂಲಕ ಆಕಾಂಕ್ಷಿ ಅಭ್ಯರ್ಥಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಆದರೂ ಇಲ್ಲಿ ಪ್ರಬಲ, ಸೂಕ್ತ ಅಭ್ಯರ್ಥಿಗಳ ಕೊರತೆ ಹಾಲಿ ಸಂಸದ ಅಂಗಡಿ ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ದೊರೆಯುವ ಸಾಧ್ಯತೆಗಳು ಹೆಚ್ಚಿವೆ.

ಬಿಜೆಪಿ ಜಿಲ್ಲಾ ಗ್ರಾಮೀಣ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬಿಜೆಪಿ ರಾಷ್ಟ್ರೀಯ ರೈತಮೋರ್ಚಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಹಿರಿಯ ವಕೀಲ ಎಂ.ಬಿ.ಜಿರಲಿ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಈ ಮಧ್ಯೆ ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ ಅವರ ಹೆಸರು ಕೂಡ ಕೇಳಿಬರುತ್ತಿದೆ. ಅನುಕ್ರಮವಾಗಿ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹವಾದ ಮೇಲೆ ಗೆದ್ದು ಬಂದಿರುವ ಸಂಸದ ಸುರೇಶ ಅಂಗಡಿ ಅವರಿಗೆ ಈ ಬಾರಿ ಯಾವ ಹವಾ ಅವರ ಕೈಹಿಡಿಯುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕು.

ಕಾಂಗ್ರೆಸ್‌ನಿಂದ ವಿವೇಕ ರಾವ್‌ ಪಾಟೀಲ್‌?:

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪರಮಾಪ್ತ, ವಿಧಾನ ಪರಿಷತ್‌ ಸದಸ್ಯ ವಿವೇಕ ರಾವ್‌ ಪಾಟೀಲ್‌ ಅವರನ್ನು ಲೋಕಸಭೆಗೆ ಕಣಕ್ಕಿಳಿಸಲು ಸಿದ್ಧತೆ ಮಾಡಲಾಗುತ್ತಿದೆ. ಜಾರಕಿಹೊಳಿ ಸಹೋದರರ ಕೃಪಾಕಟಾಕ್ಷವೂ ಇವರ ಮೇಲಿದೆ. ವಿವೇಕ ರಾವ್‌ ಪಾಟೀಲ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್‌ನಲ್ಲಿ ವಿವೇಕರಾವ್‌ ಪಾಟೀಲ್‌ ಅವರನ್ನು ಹೊರತುಪಡಿಸಿದರೆ, ಬಿಜೆಪಿಗೆ ಸಡ್ಡು ಹೊಡೆಯುವ ಅಭ್ಯರ್ಥಿ ಯಾರೂ ಇಲ್ಲ.

ಅದರಂತೆ ಮಾಜಿ ಶಾಸಕ ಅಶೋಕ ಪಟ್ಟಣ, ರಾಜು ಸೇಠ್‌, ವಿನಯ ನಾವಲಗಟ್ಟಿ, ವಿ.ಎಸ್‌.ಸಾಧುನವರ ಅವರ ಹೆಸರು ಕೂಡ ಪ್ರಮುಖವಾಗಿ ಕೇಳಿಬರುತ್ತಿವೆ. ತಮಗೆ ಟಿಕೆಟ್‌ ನೀಡುವಂತೆ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ನಾಯಕರ ಮೂಲಕ ಹೈಕಮಾಂಡ್‌ಗೆ ಒತ್ತಡ ಹೇರತೊಡಗಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್‌ ಯಾವ ಅಭ್ಯರ್ಥಿಗೆ ಟಿಕೆಟ್‌ ನೀಡುತ್ತದೆ ಎಂಬುದು ನಿಗೂಢವಾಗಿದೆ.

ನೇಪಥ್ಯಕ್ಕೆ ಸೇರಿದ ಸಿದ್ನಾಳ

ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಸಂಸದ ಎಸ್‌.ಬಿ.ಸಿದ್ನಾಳ ರಾಜಕೀಯದಿಂದ ನೇಪಥ್ಯಕ್ಕೆ ಸೇರಿದಿದ್ದಾರೆ. ಇದೀಗ ತಮ್ಮ ಪುತ್ರರನ್ನು ರಾಜಕೀಯಕ್ಕೆ ಎಂಟ್ರಿ ಮಾಡಿಸಲು ಹೊರಟಿದ್ದಾರೆ. ಈವರೆಗೆ ಇಲ್ಲಿ ಒಟ್ಟು 15 ಚುನಾವಣೆ ನಡೆದಿವೆ. ಕಾಂಗ್ರೆಸ್‌ನ ಎಸ್‌.ಬಿ.ಸಿದ್ನಾಳ ಸತತವಾಗಿ ನಾಲ್ಕು ಬಾರಿ, ಕಾಂಗ್ರೆಸ್‌ನ ಬಲವಂತ ದಾತಾರ ಮತ್ತು ಬಿಜೆಪಿಯ ಸುರೇಶ ಅಂಗಡಿ ಸತತವಾಗಿ ತಲಾ ಮೂರು ಬಾರಿ, ಕಾಂಗ್ರೆಸ್‌ನ ಎ.ಕೆ.ಕೊಟ್ರಶೆಟ್ಟಿಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಕ್ಷೇತ್ರದಿಂದ ಆಯ್ಕೆಯಾದವರಲ್ಲಿ ಬಿಜೆಪಿಯ ಬಾಬಾಗೌಡ ಪಾಟೀಲ ಅವರೊಬ್ಬರಿಗೆ ಮಾತ್ರ ಕೇಂದ್ರದಲ್ಲಿ ಸಚಿವರಾಗುವ ಅವಕಾಶ ಲಭಿಸಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿಯ ಸುರೇಶ ಅಂಗಡಿ ವಿರುದ್ಧ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಅವರು ಪರಾಭವಗೊಂಡಿದ್ದರು.

ಕಾಂಗ್ರೆಸ್‌- ಬಿಜೆಪಿ ಎದುರಾಳಿ

ಈ ಕ್ಷೇತ್ರದ ಇತಿಹಾಸದ ಪುಟವನ್ನು ತಿರುವಿ ನೋಡಿದರೆ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಬಿಜೆಪಿ ಪ್ರಬಲ ಹಿಡಿತದಲ್ಲಿದೆ. ಈ ಹಿಂದೆ ಮೈಸೂರು ರಾಜ್ಯದ ಅಧೀನದಲ್ಲಿದ್ದಾಗಿನಿಂದಲೂ 1957 ರಿಂದ 1991ರವರೆಗೆ ಕಾಂಗ್ರೆಸ್‌ ಪಾಲಾಗಿದ್ದ ಈ ಕ್ಷೇತ್ರ 1996ರಲ್ಲಿ ಜೆಡಿಎಸ್‌ ಪಾಲಾಯಿತು. 1998ರಲ್ಲಿ ಬಿಜೆಪಿ ಗೆದ್ದರೂ ಮುಂದೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿಡಿತ ಸಾಧಿಸಿತು. ಅದಾದ ಬಳಿಕ 2004ರಿಂದ ಸತತವಾಗಿ ಮೂರು ಬಾರಿ ಬಿಜೆಪಿ ಈ ಕ್ಷೇತ್ರವನ್ನು ಭದ್ರಪಡಿಸಿಕೊಂಡಿದೆ. ಇಲ್ಲಿ ಕಾಂಗ್ರೆಸ್‌- ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತ ಬಂದಿದೆ.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಐದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರು

ಬೆಳಗಾವಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಅರಬಾವಿ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಸವದತ್ತಿ ಯಲ್ಲಮ್ಮ, ರಾಮದುರ್ಗ ಕ್ಷೇತ್ರಗಳು ಬಿಜೆಪಿ ಶಾಸಕರಿದ್ದರೆ, ಗೋಕಾಕ, ಬೈಲಹೊಂಗಲ, ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ರೇಸ್‌ನಲ್ಲಿ ಯಾರು?

ಬಿಜೆಪಿ: ಹಾಲಿ ಸಂಸದ ಸುರೇಶ ಅಂಗಡಿ, ಶಂಕರಗೌಡ ಪಾಟೀಲ, ಎಂ.ಬಿ.ಜಿರಲಿ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಜಗಜಂಪಿ,

ಕಾಂಗ್ರೆಸ್‌: ವಿಧಾನ ಪರಿಷತ್‌ ಸದಸ್ಯ ವಿವೇಕ ರಾವ್‌ ಪಾಟೀಲ್‌, ಮಾಜಿ ಶಾಸಕ ಅಶೋಕ ಪಟ್ಟಣ, ರಾಜು ಸೇಠ್‌, ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಡಾ.ವಿ.ಎಸ್‌.ಸಾಧುನವರ, ಶಿವುಕಾಂತ ಸಿದ್ನಾಳ.

ಜೆಡಿಎಸ್‌: ನಾಸೀರ ಬಾಗವಾನ್‌, ಶಿವನಗೌಡ ಪಾಟೀಲ, ಫೈಜುಲ್ಲಾ ಮಾಡಿವಾಲೆ, ಪಿ.ಎಫ್‌.ಪಾಟೀಲ್‌.

-ಶ್ರೀಶೈಲ ಮಠದ

click me!