ದಾವಣಗೆರೆ ಲೋಕಸಭಾ ಟಿಕೆಟ್ ಯಾರಿಗೆ? ಸತತ 4 ಸಲ ಗೆದ್ದಿರುವ ಸಿದ್ದೇಶ್ವರ ಮತ್ತೆ ಸ್ಪರ್ಧೆ?

By Kannadaprabha News  |  First Published Jan 24, 2024, 6:13 AM IST

ಕಾಂಗ್ರೆಸ್ಸಿನ ಭದ್ರಕೋಟೆಯನ್ನೇ ಕೈವಶ ಮಾಡಿಕೊಂಡಿದ್ದ ಬಿಜೆಪಿಯಲ್ಲಿ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮನೆಯೊಂದು ಹಲವಾರು ಬಾಗಿಲು ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌, ಹುರಿಯಾಳು ಯಾರೆಂಬ ಗುಟ್ಟನ್ನು ಎಲ್ಲಿಯೂ ಬಿಟ್ಟು ಕೊಡದೆ ಗೌಪ್ಯತೆ ಕಾಯ್ದುಕೊಂಡಿದೆ.


ನಾಗರಾಜ ಎಸ್.ಬಡದಾಳ್‌

ದಾವಣಗೆರೆ (ಜ.24) ಕಾಂಗ್ರೆಸ್ಸಿನ ಭದ್ರಕೋಟೆಯನ್ನೇ ಕೈವಶ ಮಾಡಿಕೊಂಡಿದ್ದ ಬಿಜೆಪಿಯಲ್ಲಿ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮನೆಯೊಂದು ಹಲವಾರು ಬಾಗಿಲು ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌, ಹುರಿಯಾಳು ಯಾರೆಂಬ ಗುಟ್ಟನ್ನು ಎಲ್ಲಿಯೂ ಬಿಟ್ಟು ಕೊಡದೆ ಗೌಪ್ಯತೆ ಕಾಯ್ದುಕೊಂಡಿದೆ.

Tap to resize

Latest Videos

ಬಿಜೆಪಿಯಲ್ಲಿ ಸತತವಾಗಿ 4 ಸಲ ಗೆಲುವು ಕಂಡ ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮತ್ತೆ ತಮ್ಮ ಬದ್ಧವೈರಿ ಶಾಮನೂರು ಕುಟುಂಬಕ್ಕೆ ಸಡ್ಡು ಹೊಡೆಯಲು ಸಜ್ಜಾಗುತ್ತಿದ್ದಾರೆ. ಈ ಬೀಗರ ಕದನದಲ್ಲಿ ಎದುರಾಳಿ ಯಾರೆಂಬುದೇ ಕುತೂಹಲ ಹುಟ್ಟಿಸಿದೆ. ಬಿಜೆಪಿಗೆ ಇಲ್ಲಿ ಜೆಡಿಎಸ್ ಸಹ ಆಸರೆಯಾಗಲಿದೆ. ಸಾಂಪ್ರದಾಯಿಕ ವೈರಿಗಳಾದ ಬಿಜೆಪಿ, ಕಾಂಗ್ರೆಸ್‌ ವೈರತ್ವದ ಜೊತೆ ಇಲ್ಲಿ ಶಾಮನೂರು-ಸಿದ್ದೇಶ್ವರ ಕುಟುಂಬದ ರಾಜಕೀಯ ವೈರತ್ವವೂ ಜಿದ್ದಾಜಿದ್ದಿ ಚುನಾವಣೆಗೆ ಕಾರಣವಾಗುತ್ತಿದೆ.

ಎಂದೂ ಕಾಣದ ಕೋತಿರಾಯ ಆಂಜಯೇಯ ವಿಗ್ರಹ ಪ್ರತಿಷ್ಠಾಪನೆ ವೇಳೆ ಪ್ರತ್ಯಕ್ಷ! ತಣಿಗೆರೆ ಗ್ರಾಮದಲ್ಲಿ ಅಚ್ಚರಿ!

2004ರಲ್ಲಿ ಮೊದಲ ಸಲ ಸ್ಪರ್ಧಿಸಿದ ಜಿ.ಎಂ.ಸಿದ್ದೇಶ್ವರ ವಿಜಯದ ಪತಾಕೆ ಹಾರಿಸಿದರು. ಬಳಿಕ, 2009, 2014, 2019ರಲ್ಲಿಯೂ ಗೆದ್ದು, ಸತತ ನಾಲ್ಕು ಸಲ ವಿಜಯದ ನಗೆ ಬೀರಿದರು. ಆ ಮೂಲಕ ಕಾಂಗ್ರೆಸ್ಸಿನ ಭದ್ರಕೋಟೆಯಲ್ಲಿ ಬಿಜೆಪಿ ಬಲವಾಗಿ ಬೇರೂರುವಂತೆ ಮಾಡಿದರು. ಈಗ 2024ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಗೆ ವಯೋಮಿತಿ ಮಾನದಂಡ ಪ್ರಯೋಗ ಮಾಡಿ, ಕೈಸುಟ್ಟುಕೊಂಡ ಬಿಜೆಪಿಯ ರಾಷ್ಟ್ರೀಯ ನಾಯಕರು ಈ ಚುನಾವಣೆಯಲ್ಲಿ ಅಂತಹ ಪ್ರಯೋಗಕ್ಕೆ ಕೈಹಾಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.

ಆದಾಗ್ಯೂ, ವಯೋಮಿತಿ ಮಾನದಂಡದಲ್ಲಿ ಸಿದ್ದೇಶ್ವರಗೆ ಟಿಕೆಟ್ ತಪ್ಪಿದರೆ ಅವರ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್‌ ಕೊಡುವ ಸಾಧ್ಯತೆಯೂ ಇದೆ. ಜೊತೆಗೆ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಡಾ.ಟಿ.ಜಿ.ರವಿಕುಮಾರ, ಕೆ.ಬಿ.ಕೊಟ್ರೇಶ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಯಡಿಯೂರಪ್ಪ ಕೃಪೆ ಯಾರಿಗೋ ಅಂತಹವರಿಗೆ ಟಿಕೆಟ್ ಸಾಧ್ಯತೆ ಹೆಚ್ಚು ಎಂಬುದು ರಹಸ್ಯವೇನಲ್ಲ.

ಇದೇ ವೇಳೆ, ಕಾಂಗ್ರೆಸ್‌ನಲ್ಲಿಯೂ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಶಾಮನೂರು ಶಿವಶಂಕರಪ್ಪನವರ ಕಿರಿಯ ಸೊಸೆ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನರ ಹೆಸರು ಮುಂಚೂಣಿಯಲ್ಲಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಎಚ್.ಬಿ.ಮಂಜಪ್ಪ ಪರವೂ ಕೆಲವರು ಬ್ಯಾಟ್ ಬೀಸಿದ್ದಾರೆ. ಕಳೆದ ಕೆಲವು ವಾರಗಳಿಂದ ಕ್ಷೇತ್ರಾದ್ಯಂತ ಪಾದಯಾತ್ರೆ ಕೈಗೊಂಡ ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ಬಗ್ಗೆಯೂ ಕೂಗು ಕೇಳಿ ಬರುತ್ತಿದೆ.

 

ಲೋಕಸಭೆ ಚುನಾವಣೆ 2024: ಹಾಸನದಲ್ಲಿ ಪ್ರಜ್ವಲ್‌ಗೆ ಕಾಂಗ್ರೆಸ್‌ನಿಂದ ಪ್ರಬಲ ಎದುರಾಳಿ ಯಾರು?

ಇನ್ನು, ಹಿಂದುಳಿದ ವರ್ಗಕ್ಕೆ ಟಿಕೆಟ್ ನೀಡಬೇಕೆಂದರೆ ಎಚ್.ಬಿ.ಮಂಜಪ್ಪ, ಜಿ.ಬಿ.ವಿನಯಕುಮಾರ ಮಧ್ಯೆ ಪೈಪೋಟಿ ಏರ್ಪಡಲಿದೆ. ಮತ್ತೊಂದು ಕಡೆ ದಿವಂಗತ ಚನ್ನಯ್ಯ ಒಡೆಯರ್ ಪುತ್ರ ಶಿವಕುಮಾರ ಒಡೆಯರ್ ಸಹ ಟಿಕೆಟ್‌ಗೆ ಪ್ರಯತ್ನಿಸಿದ್ದಾರೆ. ಹಾಗಾಗಿಯೇ ಕಾಂಗ್ರೆಸ್ ಏನೇ ಮಾಡಿದರೂ, ಅಳೆದು ತೂಗಿ, ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿದೆ.

ಶಾಮನೂರು ಕುಟುಂಬದಿಂದಲೇ ಯಾರಾದರೂ ಸ್ಪರ್ಧೆ ಮಾಡಬೇಕೆಂದರೆ ಸ್ವತಃ ಎಸ್ಸೆಸ್ ಮಲ್ಲಿಕಾರ್ಜುನ ಕಣಕ್ಕೆ ಇಳಿಯಬಹುದು ಅಥವಾ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಕಣಕ್ಕಿಳಿಸಬಹುದು. ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಗೌಪ್ಯವಾಗಿಯೇ ಇದೆ.

click me!