48 ವರ್ಷ ಬಳಿಕ ಇಂದು ಲೋಕಸಭೆ ಸ್ಪೀಕರ್‌ ಚುನಾವಣೆ

Published : Jun 26, 2024, 06:15 AM IST
48 ವರ್ಷ ಬಳಿಕ ಇಂದು ಲೋಕಸಭೆ ಸ್ಪೀಕರ್‌ ಚುನಾವಣೆ

ಸಾರಾಂಶ

ಹೊಸ ಸಂಸತ್ತಿನಲ್ಲಿ ಆಸನಗಳ ಹಂಚಿಕೆ ಮುಗಿದಿಲ್ಲ ಹಾಗೂ ಎಲೆಕ್ಟ್ರಾನಿಕ್‌ ಮತದಾನ ವ್ಯವಸ್ಥೆ ಕೂಡ ಜಾರಿಗೆ ಬಂದಿಲ್ಲ. ಬುಧವಾರ ಬೆಳಗ್ಗೆ 11ಕ್ಕೆ ಚೀಟಿ ಮೂಲಕ ಸಂಸದರು ಮತ ಚಲಾವಣೆ ಮಾಡಲಿದ್ದಾರೆ. ಎನ್‌ಡಿಎ ಕೂಟಕ್ಕೆ ಬಹುಮತ ಇರುವ ಹಿನ್ನೆಲೆಯಲ್ಲಿ ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಆಯ್ಕೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.  

ನವದೆಹಲಿ(ಜೂ.26):  18ನೇ ಲೋಕಸಭೆಯ ಸ್ಪೀಕರ್‌ ಆಯ್ಕೆ ಮಂಗಳವಾರ ನಾಟಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ವಿರುದ್ಧ ಪ್ರತಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಇದರಿಂದಾಗಿ 1976ರ ಬಳಿಕ ಅಂದರೆ 48 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಲೋಕಸಭೆಯ ಮುಖ್ಯಸ್ಥ ಹುದ್ದೆಗೆ ಬುಧವಾರ ಬೆಳಗ್ಗೆ 11ಕ್ಕೆ ಚುನಾವಣೆ ನಡೆಯಲಿದೆ.

ಮಿತ್ರಪಕ್ಷಗಳಾದ ತೆಲುಗುದೇಶಂ ಹಾಗೂ ಜೆಡಿಯು ಕಣ್ಣಿಟ್ಟಿದ್ದವು ಎಂದು ಹೇಳಲಾಗಿದ್ದ ಸ್ಪೀಕರ್‌ ಸ್ಥಾನವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, 17ನೇ ಲೋಕಸಭೆಯಲ್ಲಿ ಐದು ವರ್ಷಗಳ ಕಾಲ ಸ್ಪೀಕರ್‌ ಆಗಿದ್ದ ತನ್ನ ಸಂಸದ ಓಂ ಬಿರ್ಲಾ ಅವರನ್ನು ಎನ್‌ಡಿಎ ಸ್ಪೀಕರ್‌ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಈ ನಡುವೆ, ಸಂಪ್ರದಾಯದಂತೆ ಆಡಳಿತ ಪಕ್ಷದವರು ಸ್ಪೀಕರ್‌ ಹುದ್ದೆ ಅಲಂಕರಿಸಿದರೆ ಪ್ರತಿಪಕ್ಷದವರನ್ನು ಉಪಸ್ಪೀಕರ್‌ ಮಾಡಬೇಕು ಎಂದು ಇಂಡಿಯಾ ಷರತ್ತು ಇಟ್ಟಿತಾದರೂ, ಅದಕ್ಕೆ ಸರ್ಕಾರ ಒಪ್ಪಿಲ್ಲ. ಹೀಗಾಗಿ ಹಿರಿಯ ಸಂಸದ ಕೋಡಿಕುನ್ನಿಲ್‌ ಸುರೇಶ್‌ ಅವರು ‘ಇಂಡಿಯಾ’ ಅಭ್ಯರ್ಥಿಯಾಗಿದ್ದಾರೆ.

ಬಿಜೆಪಿ ಅಧ್ಯಕ್ಷರ ರೇಸ್‌ನಲ್ಲಿ ತಾವ್ಡೆ, ಸ್ಮೃತಿ, ಬನ್ಸಲ್‌ ಸೇರಿ ಐವರು

ಹೊಸ ಸಂಸತ್ತಿನಲ್ಲಿ ಆಸನಗಳ ಹಂಚಿಕೆ ಮುಗಿದಿಲ್ಲ ಹಾಗೂ ಎಲೆಕ್ಟ್ರಾನಿಕ್‌ ಮತದಾನ ವ್ಯವಸ್ಥೆ ಕೂಡ ಜಾರಿಗೆ ಬಂದಿಲ್ಲ. ಬುಧವಾರ ಬೆಳಗ್ಗೆ 11ಕ್ಕೆ ಚೀಟಿ ಮೂಲಕ ಸಂಸದರು ಮತ ಚಲಾವಣೆ ಮಾಡಲಿದ್ದಾರೆ. ಎನ್‌ಡಿಎ ಕೂಟಕ್ಕೆ ಬಹುಮತ ಇರುವ ಹಿನ್ನೆಲೆಯಲ್ಲಿ ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಆಯ್ಕೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಮನವೊಲಿಕೆಗೆ ಕಸರತ್ತು:

ಸರ್ವಸಮ್ಮತದಿಂದ ಸ್ಪೀಕರ್‌ ಅವರನ್ನು ಆಯ್ಕೆ ಮಾಡಲು ಮಂಗಳವಾರ ಆಡಳಿತ- ಪ್ರತಿಪಕ್ಷಗಳ ನಡುವೆ ಸಭೆ ನಡೆಯಿತು. ಸಂಸತ್ತಿನ ರಾಜನಾಥ ಸಿಂಗ್‌ ಅವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಸರ್ಕಾರದ ಕಡೆಯಿಂದ ರಾಜನಾಥ, ಅಮಿತ್‌ ಶಾ, ಜೆ.ಪಿ. ನಡ್ಡಾ, ಪ್ರತಿಪಕ್ಷಗಳ ಪಾಳೆಯದಿಂದ ಕಾಂಗ್ರೆಸ್ಸಿನ ಕೆ.ಸಿ.ವೇಣುಗೋಪಾಲ್‌ ಹಾಗೂ ಡಿಎಂಕೆಯ ಟಿ.ಆರ್‌. ಬಾಲು ಪಾಲ್ಗೊಂಡಿದ್ದರು. ಬಿರ್ಲಾ ಅವರನ್ನು ಬೆಂಬಲಿಸಲು ಸಿದ್ಧರಿದ್ದೇವೆ. ಆದರೆ ಉಪಸ್ಪೀಕರ್ ಸ್ಥಾನವನ್ನು ನಮಗೆ ಕೊಡಬೇಕು ಎಂದು ವಿಪಕ್ಷ ನಾಯಕರು ಷರತ್ತು ವಿಧಿಸಿದರು. ಈ ಷರತ್ತಿಗೆ ಸರ್ಕಾರ ಒಪ್ಪದ ಕಾರಣ, ಎರಡೂ ಬಣಗಳು ಸ್ಪರ್ಧೆಗೆ ನಿರ್ಧರಿಸಿದವು. ಮಂಗಳವಾರವೇ ಓಂ ಬಿರ್ಲಾ ಹಾಗೂ ಕೋಡಿಕುನ್ನಿಲ್‌ ಸುರೇಶ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಬಿಜೆಪಿ: ಪುರಂದೇಶ್ವರಿಗೆ ಸ್ಪೀಕರ್‌ ಹುದ್ದೆ?

ಬಿರ್ಲಾ ಅವರು ಮೂರನೇ ಬಾರಿ, ಕೋಡಿಕುನ್ನಿಲ್‌ ಅವರು 8ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕೋಡಿಕುನ್ನಿಲ್‌ ಅವರು ಕೇರಳದವರಾಗಿದ್ದು, ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸ್ಪೀಕರ್‌ ಸ್ಥಾನಕ್ಕೆ ಇತಿಹಾಸದಲ್ಲೇ ಮೂರನೇ ಬಾರಿ ಚುನಾವಣೆ

ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಈವರೆಗೆ 2 ಬಾರಿ ಮಾತ್ರ ಚುನಾವಣೆ ನಡೆದಿವೆ. 1952ರಲ್ಲಿ ಜಿ.ವಿ.ಮಾವಲಂಕರ್ ಹಾಗೂ ಶಂಕರ್ ಶಾಂತಾರಾಮ್‌ ಅವರು ಸ್ಪರ್ಧೆ ಮಾಡಿದ್ದರಿಂದ ಚುನಾವಣೆ ಆಗಿತ್ತು. ಮಾವಲಂಕರ್‌ ಅವರು 394 ಮತಗಳನ್ನು ಪಡೆದು ವಿಜೇತರಾದರೆ, ಶಾಂತಾರಾಮ್‌ ಅವರು ಕೇವಲ 55 ಮತಗಳನ್ನು ಗಳಿಸಿದ್ದರು. ತುರ್ತು ಪರಿಸ್ಥಿತಿಯ ವೇಳೆ ಅಂದರೆ 1976ರಲ್ಲಿ ಬಲಿರಾಮ್‌ ಭಗತ್‌ ಹಾಗೂ ಜಗನ್ನಾಥ ರಾವ್‌ ಅವರು ಸ್ಪೀಕರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಭಗತ್‌ ಅವರು 344 ಮತಗಳೊಂದಿಗೆ ಆಯ್ಕೆಯಾಗಿದ್ದರೆ, ಜಗನ್ನಾಥರಾವ್‌ ಅವರು 58 ಮತ ಪಡೆದು ಪರಾಜಿತರಾಗಿದ್ದರು. ಇದೀಗ ಮೂರನೇ ಬಾರಿಗೆ ಚುನಾವಣೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಬೆಂಗಳೂರಿನ ಹಲವೆಡೆ ಇಂದು ಪವರ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?