ಗ್ಯಾರಂಟಿಗಾಗಿ ಸಿಎಂ, ಡಿಸಿಎಂ ಬಡವರ ರಕ್ತ ಹೀರುತ್ತಿದ್ದಾರೆ: ಅಶೋಕ್ ಆಕ್ರೋಶ

Published : Jun 26, 2024, 04:45 AM IST
ಗ್ಯಾರಂಟಿಗಾಗಿ ಸಿಎಂ, ಡಿಸಿಎಂ ಬಡವರ ರಕ್ತ ಹೀರುತ್ತಿದ್ದಾರೆ: ಅಶೋಕ್ ಆಕ್ರೋಶ

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಎಲ್ಲ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂದುಕೊಂಡಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡಂಕಿಯನ್ನೂ ದಾಟಲು ಅದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ, ಕಾಂಗ್ರೆಸ್ ಸೋಲಿನ ಕೋಪಕ್ಕೆ ಈಗ ಬೆಲೆ ಏರಿಕೆ ಪರ್ವ ಶುರುವಾಗಿದೆ. ಇನ್ನು ಮೇಲೆ ರಾಜ್ಯದಲ್ಲಿ ಬೆಲೆ ಏರಿಕೆ ಗ್ಯಾರಂಟಿ ನೋಡಬಹುದು ಎಂದು ಕಿಡಿಕಾರಿದ ವಿಪಕ್ಷ ನಾಯಕ ಆರ್.ಅಶೋಕ್‌

ಬೆಳಗಾವಿ(ಜೂ.26): ರಾಜ್ಯದಲ್ಲಿ ಗ್ಯಾರಂಟಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಡವರ ರಕ್ತವನ್ನು ತಿಗಣೆ ರೀತಿಯಲ್ಲಿ ಹೀರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್‌ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರ್ನಾಟಕ ಸರ್ಕಾರ ಒಂದು ರೀತಿ ಹುಚ್ಚರ ಸಂತೆಯಾಗಿದೆ. ಮೊನ್ನೆಯಷ್ಟೇ ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿದ್ದಾರೆ. ಈಗ ಹಾಲಿನ ದರವನ್ನು ಲೀಟರ್​ಗೆ ₹2 ಏರಿಕೆ ಮಾಡಿದ್ದಾರೆ. ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಆಗದೇ ಬೆಲೆ ಏರಿಕೆ ಮಾಡಲಾಗುತ್ತಿದೆ. ಹಾಲಿನ ದರ, ತೈಲ ದರ ಹೆಚ್ಚಳ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಜು.3 ಇಲ್ಲವೇ ಜು.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಬಿಜೆಪಿಯಿಂದ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಸರ್ಕಾರಕ್ಕೆ ತಾಕತ್ತಿದ್ದರೆ ಜಿಪಂ, ಬಿಬಿಎಂಪಿ ಚುನಾವಣೆ ಘೋಷಿಸಲಿ: ಆರ್‌.ಅಶೋಕ್‌ ಸವಾಲು

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಎಲ್ಲ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂದುಕೊಂಡಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡಂಕಿಯನ್ನೂ ದಾಟಲು ಅದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ, ಕಾಂಗ್ರೆಸ್ ಸೋಲಿನ ಕೋಪಕ್ಕೆ ಈಗ ಬೆಲೆ ಏರಿಕೆ ಪರ್ವ ಶುರುವಾಗಿದೆ. ಇನ್ನು ಮೇಲೆ ರಾಜ್ಯದಲ್ಲಿ ಬೆಲೆ ಏರಿಕೆ ಗ್ಯಾರಂಟಿ ನೋಡಬಹುದು ಎಂದು ಕಿಡಿಕಾರಿದರು.

ಸರ್ಕಾರ ದಿವಾಳಿಯಾಗಿದೆ. ಖಜಾನೆಯಲ್ಲಿ ಹಣ ಇಲ್ಲದೆ ಪಾಪರ್ ಆಗಿದೆ. ನೌಕರರಿಗೆ ಸಂಬಳ ಕೊಡಲೂ ಅವರ ಬಳಿ ಹಣವಿಲ್ಲ. ಮದ್ಯ, ತೈಲ ಬೆಲೆ ಏರಿಕೆ ಬಳಿಕ ಈಗ ಜನಸಾಮಾನ್ಯರಿಗೆ ಕಾಫಿ, ಟೀ ಕುಡಿಯಲು ಕೂಡ ಸಿದ್ದರಾಮಯ್ಯ ಸರ್ಕಾರ ಕಲ್ಲು ಹಾಕಿದೆ. ಬೆಳಗ್ಗೆ ಮಕ್ಕಳಿಗೆ ಹಾಲು ಕುಡಿಯಲು ಹೊರೆಯಾದರೆ, ಸಂಜೆ ಕೆಲಸ ಮಾಡಿ ಬರುವವರಿಗೆ ಆಲ್ಕೋಹಾಲ್ ಕುಡಿಯಲು ಹೊರೆಯಾಗಿದೆ ಎಂದರು.

ವಿಪಕ್ಷ ನಾಯಕ ಅಶೋಕ್‌ ಈಗ ನಿದ್ರೆಯಿಂದ ಎದ್ದಿದ್ದಾರೆ: ಸಚಿವ ಡಾ.ಶರಣಪ್ರಕಾಶ ಪಾಟೀಲ್

ಈ ಸರ್ಕಾರ ಬಹಳ ದಿನ ಉಳಿಯಲ್ಲ. ನಾಲ್ಕು ರಾಜ್ಯಗಳ ಚುನಾವಣೆಗೆ ಕಪ್ಪ ಕಾಣಿಕೆ ಕೊಡಲು ಬೆಲೆ ಏರಿಕೆ ಮಾಡಲಾಗಿದೆ. ಈ ಹಣದಿಂದ ರಾಹುಲ್ ಗಾಂಧಿಗೆ ಕಪ್ಪ ಕಾಣಿಕೆ ಕೊಡಲಿದ್ದಾರೆ. ಈ ರೀತಿ ಲೂಟಿ ಹೊಡೆಯುವ ಲೂಟಿಕೊರ ತಂಡಕ್ಕೆ ಮುಂಬರುವ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ‌ ಎಂದು ಹರಿಹಾಯ್ದರು.

ಸಿದ್ದು ಅವರೇ ಡಿ.ಕೆ.ಸುರೇಶರನ್ನು ಸೋಲಿಸಿದರು

ಸಿದ್ದರಾಮಯ್ಯನವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಈಗ ಡಿಸಿಎಂ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಡಿ.ಕೆ.ಸುರೇಶ ಅವರನ್ನು ಸೋಲಿಸಿದ್ದಾರೆ. ಸಿಎಂ ಸ್ಥಾನ ಗಟ್ಟಿ ಮಾಡಿಕೊಳ್ಳಲು ಈಗವರು ಡಿಸಿಎಂ ಸ್ಥಾನ ಹೆಚ್ಚಳದ ಆಟ ಆಡುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಡಿಕೆಶಿಯವರು ಚನ್ನಪಟ್ಟಣಕ್ಕೆ ಹೆಜ್ಜೆ ಇಟ್ಟಿರಲಿಲ್ಲ. ಈಗ ಚುನಾವಣೆಗಾಗಿ ಅಲ್ಲಿಗೆ ಹೊರಟಿದ್ದಾರೆ. ಲೋಕಸಭೆ ‌ಚುನಾವಣೆಯಲ್ಲಿ ಚನ್ನಪಟ್ಟಣದಲ್ಲೇ ಬಿಜೆಪಿಗೆ 20 ಸಾವಿರ ಲೀಡ್ ಬಂದಿದೆ. ಚನ್ನಪಟ್ಟಣದ ಜನ ಡಿ.ಕೆ.ಶಿವಕುಮಾರ, ಡಿ.ಕೆ.ಸುರೇಶರನ್ನು ಬೆಂಬಲಿಸಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾನ, ಮಾರ್ಯಾದೆ ಹೋಗಿದೆ. ಹೀಗಿದ್ದರೂ ಚನ್ನಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಡಿಕೆಶಿಯ ನಾಟಕ ಚನ್ನಪಟ್ಟಣದಲ್ಲಿ ನಡೆಯಲ್ಲ, ಮೈತ್ರಿ ಅಭ್ಯರ್ಥಿಯೇ ಅಲ್ಲಿ ಗೆಲ್ಲುವುದು ಎಂದು ಭವಿಷ್ಯ ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು