ಕಾಂಗ್ರೆಸ್‌ ಕೊಟ್ಟ ಖಾಲಿ ಚೊಂಬನ್ನು ಮೋದಿ ಅಕ್ಷಯಪಾತ್ರೆ ಮಾಡಿದರು: ಎಚ್‌.ಡಿ.ದೇವೇಗೌಡ

By Kannadaprabha NewsFirst Published Apr 21, 2024, 4:23 AM IST
Highlights

ರಾಜ್ಯ ಕಾಂಗ್ರೆಸ್‌ನ ಖಾಲಿ ಚೊಂಬು ಜಾಹೀರಾತಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತೀವ್ರ ಹರಿಹಾಯ್ದಿದ್ದಾರೆ. ಈ ದೇಶದ ಸಂಪತ್ತನ್ನು ಲೂಟಿ ಮಾಡಿ ಖಾಲಿ ಚೊಂಬು ಕೊಟ್ಟವರು ಕಾಂಗ್ರೆಸ್ಸಿಗರು. ಅದನ್ನು ಅಕ್ಷಯ ಪಾತ್ರೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ತಿರುಗೇಟು ನೀಡಿದ್ದಾರೆ. 

ಚಿಕ್ಕಬಳ್ಳಾಪುರ (ಏ.21): ರಾಜ್ಯ ಕಾಂಗ್ರೆಸ್‌ನ ಖಾಲಿ ಚೊಂಬು ಜಾಹೀರಾತಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತೀವ್ರ ಹರಿಹಾಯ್ದಿದ್ದಾರೆ. ಈ ದೇಶದ ಸಂಪತ್ತನ್ನು ಲೂಟಿ ಮಾಡಿ ಖಾಲಿ ಚೊಂಬು ಕೊಟ್ಟವರು ಕಾಂಗ್ರೆಸ್ಸಿಗರು. ಅದನ್ನು ಅಕ್ಷಯ ಪಾತ್ರೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ತಿರುಗೇಟು ನೀಡಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ಹರಿಹಾಯ್ದರು.

ಮೋದಿ ಅವರ ಎದುರೇ ಚೊಂಬು ಜಾಹೀರಾತು ಪ್ರದರ್ಶಿಸಿ ಆಕ್ರೋಶ ಹೊರಹಾಕಿದ ದೇವೇಗೌಡ, ದೇಶದ ಸಂಪತ್ತು ಲೂಟಿ ಮಾಡಿ ಆ ಚೊಂಬನ್ನು ಯಾರು, ಯಾರ ಕೈಗೆ ಕೊಟ್ಟರು? ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ? ಎಂದು ವ್ಯಂಗ್ಯವಾಡಿದರು. ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಮನಮೋಹನ್‌ ಸಿಂಗ್‌ ಸರ್ಕಾರ ಟೋಲ್‌ಗೇಟ್‌, 2ಜಿ ಸ್ಪೆಕ್ಟ್ರಂ ಸೇರಿ ಹಲವು ಭ್ರಷ್ಟಾಚಾರ ಮಾಡಿತು. 

ದೇಶದ ಸಂಪತ್ತನ್ನು ಖಾಲಿ ಮಾಡಿ 2014ರಲ್ಲಿ ಮನಮೋಹನ್‌ ಸಿಂಗ್ ಸರ್ಕಾರ ನರೇಂದ್ರ ಮೋದಿ ಅವರ ಕೈಗೆ ಖಾಲಿ ಚೊಂಬು ಕೊಟ್ಟಿತು. ಆ ಖಾಲಿ ಚೊಂಬನ್ನು ಇಂದು ಪ್ರಧಾನಿ ಮೋದಿ ಅವರು ಅಕ್ಷಯ ಪಾತ್ರೆ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಎಲ್ಲ ವರ್ಗದ ಜನರನ್ನು ಮೇಲೆತ್ತುವ ಕೆಲಸ ಮಾಡಿದ ಮಹಾನುಭಾವ ನರೇಂದ್ರ ಮೋದಿ. ನೀವು ಇದೀಗ ಮೋದಿ ಬಗ್ಗೆ ಮಾತನಾಡುತ್ತೀರಾ? ಲೂಟಿ ಮಾಡಿ ಬರೀ ಖಾಲಿ ಚೊಂಬು ತೋರಿಸ್ತೀರಾ? ನಿಮಗೆ ನಾಚಿಕೆ ಆಗಬೇಕು ಎಂದು ಹರಿಹಾಯ್ದರು.

ಕಾಂಗ್ರೆಸ್‌ದು ಕುಟುಂಬ ರಾಜಕಾರಣ ಆದರೆ ಬಿಎಸ್‌ವೈ, ಗೌಡ್ರದ್ದು?: ಸಚಿವ ಕೆ.ಜೆ.ಜಾರ್ಜ್

28 ಸ್ಥಾನ ಗೆಲ್ಲಿಸಿಕೊಟ್ಟು ಕಾವೇರಿ, ಕೃಷ್ಣೆ ನೀರು ಕೇಳೋಣ: ಚಿಕ್ಕಬಳ್ಳಾಪುರ, ಕೋಲಾರ ಸೇರಿ ಹತ್ತು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಇದೆ. ಅದಕ್ಕಾಗಿ ಮೊದಲು 28 ಸ್ಥಾನ ಗೆಲ್ಲಿಸಿ ಕಳುಹಿಸೋಣ. ಆ ಮೇಲೆ ಕೃಷ್ಣಾ, ಕಾವೇರಿ ನೀರು ಕೊಡಿ ಎಂದು ಕೇಳೋಣ ಎಂದು ದೇವೇಗೌಡ ಇದೇ ವೇಳೆ ಹೇಳಿದರು. ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ಐದು ಗ್ಯಾರಂಟಿಗಳಂತೆ, ಈಗ ಮತ್ತೆ ಇಪ್ಪತ್ತೈದು ಗ್ಯಾರಂಟಿ ಕೊಡ್ತಾರಂತೆ. ಹತ್ತು ವರ್ಷದಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್‌ಗೆ ಈ ದೇಶದ ಅಧಿಕಾರ ಬೇಕಂತೆ ಎಂದು ವ್ಯಂಗ್ಯವಾಡಿದರು. ಎನ್‌ಡಿಎ ಒಕ್ಕೂಟ 400 ಸ್ಥಾನ ಗೆಲ್ಲುವ ಗುರಿ ಮುಟ್ಟಲು ರಾಜ್ಯದಿಂದ 28 ಸ್ಥಾನಗಳನ್ನು ಗೆಲ್ಲಿಸಿ ನಮ್ಮ ಕಾಣಿಕೆ ಒಪ್ಪಿಸುತ್ತೇವೆ ಎಂದು ಭರವಸೆ ನೀಡಿದರು.

click me!