
ಮೈಸೂರು (ಏ.15): ಬಿಜೆಪಿಯಲ್ಲಂತೂ ನಮ್ಮವರಿಗೆ ಅವಕಾಶವಿಲ್ಲ. ಜೆಡಿಎಸ್ ಇನ್ಮುಂದೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ನನಗೆ ಶಕ್ತಿ ತುಂಬಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಮೈಸೂರಿನ ರಿಯೋ ಮೆರೆಡಿಯನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಮೈಸೂರು- ಕೊಡಗು ಜಿಲ್ಲಾ ಒಕ್ಕಲಿಗ ಜನಾಂಗದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸ್ವಲ್ಪ ದಿನ ಕಾಯಿರಿ, ದೆಹಲಿಯಲ್ಲಿ ಏನಾಗಬೇಕೋ ಆ ತೀರ್ಮಾನ ಆಗಿದೆ. ಆ ಬಗ್ಗೆ ಚರ್ಚೆ ಬೇಡ. ನೀವು ನನ್ನ ಬೆಂಬಲವಾಗಿ ನಿಂತುಕೊಳ್ಳಿ ಸಾಕು ಎಂದು ಕೋರಿದರು.
ಮೈಸೂರಿನಲ್ಲಿ ನಮ್ಮ ಸಮಾಜದವರಿಗೆ ರಕ್ಷಣೆ ಇಲ್ಲ, ನಾಯಕತ್ವದ ಪ್ರಶ್ನೆಯೂ ಇದೆ ಎನ್ನುವುದು ನನಗೆ ಗೊತ್ತಿದೆ. ಈಗ ಸಚಿವ ಕೆ. ವೆಂಕಟೇಶ್, ಶಾಸಕ ಕೆ. ಹರೀಶ್ ಗೌಡ ಮುಂದಾಳತ್ವ ವಹಿಸಿಕೊಂಡಿದ್ದಾರೆ. ನಾನು ಮೈಸೂರಿನ ಅಳಿಯ. ನನಗೂ ದೊಡ್ಡ ಜವಾಬ್ದಾರಿ ಇದೆ. ಮೈಸೂರಿನಲ್ಲಿ ಲಕ್ಷ್ಮಣ ಸೋಲಿಸಿದರೆ ನನಗೆ ಹಾಗೂ ಒಕ್ಕಲಿಗ ಸಚಿವರಿಗೆ ಬಹಳ ತೊಂದರೆ ಆಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.
Lok Sabha Elections 2024: ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು?: ಎಚ್.ಡಿ.ದೇವೇಗೌಡ
ಮೈಸೂರಿನಲ್ಲಿ 47 ವರ್ಷಗಳ ನಂತರ ಒಕ್ಕಲಿಗ ಸಮಾಜದ ವ್ಯಕ್ತಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಅಭ್ಯರ್ಥಿ ರೈತ ಕುಟುಂಬದ ಹಿನ್ನೆಲೆಯ ಸಾಮಾನ್ಯ ಕಾರ್ಯಕರ್ತ. ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಹೆಚ್ಚು ಹೇಳಿಕೊಳ್ಳದಿರಬಹುದು. ಆದರೆ, ಸಮಾಜಕ್ಕೆ ಎಲ್ಲೆಲ್ಲಿ ಸಹಾಯ ಮಾಡಬೇಕೋ ಮಾಡಿದ್ದೇನೆ. ಈಗ ಮೈಸೂರು ಕ್ಷೇತ್ರವನ್ನು ಕಳೆದುಕೊಂಡರೆ ಮುಂದೆ ನಮಗೆ ಸಿಗುವುದಿಲ್ಲ ಎನ್ನುವುದನ್ನು ಮರೆಯಬೇಡಿ ಎಂದು ಅವರು ಹೇಳಿದರು.
ಕುಮಾರಸ್ವಾಮಿ ಸಿಎಂ ಮಾಡಿದೇವು: ನಾನು ಬೆಳೆದು ಬಿಡುತ್ತೇನೆ ಎಂಬ ದೃಷ್ಟಿಯಿಂದ ಸೋಲಿಸಲು ಸ್ವತಃ ಕುಮಾರಸ್ವಾಮಿಯೇ ನನ್ನ ವಿರುದ್ಧ ಸ್ಪರ್ಧಿಸಿದ್ದರು. ಬೇರೆ ಕಡೆ ಅವಕಾಶವಿದ್ದರೂ ಸ್ಪರ್ಧಿಸಲಿಲ್ಲ. ದ್ವೇಷವನ್ನೆಲ್ಲ ಮರೆತು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೇವು. ಆದರೆ, ಉಳಿಸಿಕೊಳ್ಳಬೇಕಾಗಿದ್ದುದು ಯಾರ ಜವಾಬ್ದಾರಿ ಆಗಿತ್ತು ಎಂದು ಅವರು ಪ್ರಶ್ನಿಸಿದರು.
ಪರಿಸ್ಥಿತಿ ಸರಿ ಇಲ್ಲ ಅಮೆರಿಕಾಕ್ಕೆ ಹೋಗಬೇಡಿ ಎಂದು ಹೇಳಿದರೂ ಕುಮಾರಸ್ವಾಮಿ ಕೇಳಲಿಲ್ಲ. ಫೈವ್ ಸ್ಟಾರ್ ಹೋಟೆಲ್ ನಲ್ಲಿ ಬೀಗ ಹಾಕಿಕೊಂಡು ಕುಳಿತುಕೊಂಡರೆ ಹೇಗೆ ರಾಜಕಾರಣ ಮಾಡಲಾಗುತ್ತದೆ? ನಾನು ವಿಷ ಹಾಕಿದೆ ಎಂದು ಈಗ ಹೇಳುತ್ತಾರೆ. ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳಬೇಡಿ ಎಂದು ನಾವೇನಾದರೂ ಹೇಳಿದ್ದಾ? ನಾವೇನೂ ಅವರನ್ನು ಮುಗಿಸಬೇಕಾಗಿಲ್ಲ. ಜೆಡಿಎಸ್ ನ ಬಿಜೆಪಿಯವರೇ ಮುಗಿಸುತ್ತಾರೆ ಎಂದು ಅವರು ಹೇಳಿದರು.
ಪ್ರಜ್ವಲ್ ರೇವಣ್ಣ ಪರ ವಿಜಯೇಂದ್ರ ಮತಯಾಚನೆ: ಕಾಂಗ್ರೆಸ್ ವಿರುದ್ಧ ಗುಡುಗಿದ ಬಿಜೆಪಿ ರಾಜ್ಯಾಧ್ಯಕ್ಷ!
ಹಾಸನದಲ್ಲಿ ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲಿನ ಜನರೇ ಮೈತ್ರಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕುಮಾರಸ್ವಾಮಿ ನನ್ನ ತಮ್ಮನ (ಡಿ.ಕೆ. ಸುರೇಶ್) ವಿರುದ್ಧವೇ ಸ್ಪರ್ಧಿಸಬೇಕಿತ್ತು. ಅಲ್ಲಿ ಅವರೇ ಶಾಸಕ ಆಗಿದ್ದಾರಲ್ಲವೇ? ಮಂಡ್ಯದಲ್ಲಿ ಸಿ.ಎಸ್. ಪುಟ್ಟರಾಜುಗೆ ಹೇಳಿ ಹೇಳಿ ಕೊನೆಗೆ ಅವರೇ ಸ್ಪರ್ಧಿಸಿದ್ದಾರೆ. ಅಲ್ಲಿ ಕಾರ್ಯಕರ್ತರಿಗೆ ಬೆಳೆಯಲು ಅವಕಾಶವಿಲ್ಲ ಎಂದು ಅವರು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.