ಚಲುವರಾಯಸ್ವಾಮಿಗೆ ಲೋಕಸಭೆ ಚುನಾವಣೆ ಸವಾಲು: ಫಲಿತಾಂಶ ವ್ಯತ್ಯಾಸವಾದರೆ ಸಚಿವ ಸ್ಥಾನ ಹೋಗುತ್ತಾ?

By Kannadaprabha News  |  First Published Dec 28, 2023, 12:30 AM IST

ಮುಂಬರುವ ಲೋಕಸಭಾ ಚುನಾವಣೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿ ಗೆಲ್ಲುವ ಅಭ್ಯರ್ಥಿಯ ಕೊರತೆ ಕೈಪಾಳಯವನ್ನು ತೀವ್ರವಾಗಿ ಕಾಡುತ್ತಿದೆ. 
 


ಮಂಡ್ಯ ಮಂಜುನಾಥ

ಮಂಡ್ಯ (ಡಿ.28): ಮುಂಬರುವ ಲೋಕಸಭಾ ಚುನಾವಣೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿ ಗೆಲ್ಲುವ ಅಭ್ಯರ್ಥಿಯ ಕೊರತೆ ಕೈಪಾಳಯವನ್ನು ತೀವ್ರವಾಗಿ ಕಾಡುತ್ತಿದೆ. ಪಕ್ಷವನ್ನು ಪ್ರತಿನಿಧಿಸಲಿರುವ ಅಭ್ಯರ್ಥಿ ಆಯ್ಕೆಗೆ ಗಂಭೀರ ಕಸರತ್ತು ಆರಂಭಗೊಂಡಿದೆ. ಒಮ್ಮೆ ಫಲಿತಾಂಶ ವ್ಯತ್ಯಾಸವಾದರೆ ಸಚಿವ ಸ್ಥಾನ ಕೈಬಿಟ್ಟುಹೋಗುವ ಆತಂಕವೂ ಸಹಜವಾಗಿಯೇ ಚಲುವರಾಯಸ್ವಾಮಿ ಅವರನ್ನು ಕಾಡುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ.ಆರ್.ಪೇಟೆ ಕ್ಷೇತ್ರವನ್ನು ಹೊರತುಪಡಿಸಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಶಾಸಕರು ಅಧಿಕಾರದಲ್ಲಿದ್ದಾರೆ. ಕ್ಷೇತ್ರದೊಳಗೆ ಬಲಿಷ್ಠ ಪ್ರಾಬಲ್ಯವನ್ನು ಹೊಂದಿರುವ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಹಾಗಾಗಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವುದು ಕೈಪಡೆಗೆ ಅನಿವಾರ್ಯವಾಗಿದೆ.

Latest Videos

undefined

ಸ್ಥಳೀಯರಲ್ಲಿ ಸಮರ್ಥರ ಕೊರತೆ: ಸಿನಿಮಾದವರು ಮಂಡ್ಯ ಕ್ಷೇತ್ರಕ್ಕೆ ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ನಾಯಕರಿಗೆ ಸ್ಥಳೀಯವಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳು ಸಿಗುತ್ತಿಲ್ಲ. ಸ್ಥಳೀಯವಾಗಿ ಹಲವು ಆಕಾಂಕ್ಷಿತರು ಸ್ಪರ್ಧೆಗೆ ತಾವು ಸಿದ್ಧ ಎಂದು ಹೇಳುತ್ತಿದ್ದರೂ ಅದರೊಳಗೆ ವರ್ಚಸ್ವಿ ನಾಯಕರು ಕಂಡುಬರದಿರುವುದು ನಾಯಕರಿಗೆ ತಲೆಬಿಸಿ ಉಂಟುಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಸಿಗದಿದ್ದರೆ ಸಚಿವ ಎನ್. ಚಲುವರಾಯಸ್ವಾಮಿ ಅವರೇ ಅಖಾಡ ಪ್ರವೇಶಿಸುವ ಅನಿವಾರ್ಯತೆ ಎದುರಾಗುವ ಸಾಧ್ಯತೆಗಳೂ ಇವೆ. ಇದನ್ನು ಗಮನದಲ್ಲಿಟ್ಟುಕೊಂಡು ಚಲುವರಾಯಸ್ವಾಮಿ ಅವರು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಬರ ಬರಲಿ ಎಂದು ರೈತರೇ ಬಯಸ್ತಾರೆ: ಸಚಿವ ಶಿವಾನಂದ ಪಾಟೀಲ ವಿವಾದಾತ್ಮಕ ಹೇಳಿಕೆ!

ರಮ್ಯಾ ಬರೋದು ಇಷ್ಟವಿಲ್ಲ: ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಆರು ತಿಂಗಳ ಅವಧಿಗೆ ಸಂಸದೆಯಾಗಿ ಸ್ಪರ್ಧಿಸಿ ಗೆದ್ದಿದ್ದ ನಟಿ ರಮ್ಯಾ ಅವರನ್ನು ಮತ್ತೊಮ್ಮೆ ಕ್ಷೇತ್ರಕ್ಕೆ ಕರೆತರುವ ಪ್ರಯತ್ನಗಳು ತೆರೆ-ಮರೆಯಲ್ಲಿ ಬಿರುಸಿನಿಂದ ಸಾಗಿವೆ. ಆದರೆ, ರಮ್ಯ ಕ್ಷೇತ್ರಕ್ಕೆ ವಾಪಸ್ ಬರುವುದು ಸ್ಥಳೀಯವಾಗಿ ಅನೇಕ ನಾಯಕರಿಗೆ ಇಷ್ಟವಿಲ್ಲ. ಸಿನಿಮಾ ನಟರು ಕ್ಷೇತ್ರಕ್ಕೆ ಬೇಡ ಎಂಬ ನಿಲುವಿಗೆ ಅಂಟಿಕೊಂಡಿರುವುದು ಮತ್ತೊಂದು ಕಾರಣವಾಗಿದೆ. ಒಮ್ಮೆ ರಮ್ಯಾ ಜಿಲ್ಲೆಗೆ ಬಂದು ಚುನಾವಣೆಯಲ್ಲಿ ಗೆದ್ದರೆ ರಾಜಕೀಯವಾಗಿ ವರಿಷ್ಠರಿಂದ ಕಡೆಗಣನೆಗೆ ಒಳಗಾಗುತ್ತೇವೆಂಬ ಭಯ ಸ್ಥಳೀಯ ನಾಯಕರನ್ನು ಬಾಧಿಸುತ್ತಿದೆ.

ಸಕ್ಸಸ್ ಆಗಿದ್ದ ಗೇಮ್ ಪ್ಲಾನ್: ೨೦೧೮ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಸೋತು ತನ್ನ ನೆಲೆಯನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್ ೨೦೨೩ರ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಈಗ ಇತಿಹಾಸ. ೨೦೧೯ರ ಲೋಕಸಭಾ ಚುನಾವಣೆಯಿಂದ ಆರಂಭಗೊಂಡು ಒಂದು ವಿಧಾನಸಭೆ ಉಪ ಚುನಾವಣೆ, ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ಷೇತ್ರದೊಳಗೆ ಬಲವಾಗಿ ಬೇರೂರಿದ್ದ ಜೆಡಿಎಸ್ ಪಕ್ಷವನ್ನು ಮಣಿಸುವಲ್ಲಿ ಚಲುವರಾಯಸ್ವಾಮಿ ನಡೆಸಿದ ಗೇಮ್ ಪ್ಲಾನ್ ದೊಡ್ಡದು. ಅದೇ ರೀತಿಯಲ್ಲಿ ೨೦೨೩ರ ಚುನಾವಣಾ ನೇತೃತ್ವ ವಹಿಸಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಈಗ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಮತ್ತು ಗೆಲ್ಲಿಸುವ ಗೇಮ್‌ಪ್ಲಾನ್ ಕೂಡ ಚಲುವರಾಯಸ್ವಾಮಿ ಹೆಗಲೇರಿದೆ. ಯಾರನ್ನಾದರೂ ಅಭ್ಯರ್ಥಿ ಮಾಡಿ ಗೆಲ್ಲಿಸಿಕೊಂಡು ಬರುವಂತೆ ಪಕ್ಷದ ನಾಯಕರು ಸೂಚಿಸಿರುವುದರಿಂದ ಚಲುವರಾಯಸ್ವಾಮಿ ಹಲವು ರಾಜಕೀಯ ಲೆಕ್ಕಾಚಾರಗಳೊಂದಿಗೆ ಸಮರ್ಥರನ್ನು ಕಣಕ್ಕಿಳಿಸುವುದಕ್ಕೆ ಶೋಧ ನಡೆಸುತ್ತಿದ್ದಾರೆ.

ಅಲ್ಲಲ್ಲಿ ಧನಲಕ್ಷ್ಮೀ ಪ್ರತ್ಯಕ್ಷ್ಯ..!: ಚಲುವರಾಯಸ್ವಾಮಿ ಅವರ ಪತ್ನಿ ಧನಲಕ್ಷ್ಮೀ ಆ.೧೫ರ ಸ್ವಾತಂತ್ರ್ಯದಿನಾಚರಣೆಯಿಂದ ಪತಿಯೊಂದಿಗೆ ಹೆಚ್ಚಾಗಿ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜನರಿಗೆ ಅವರನ್ನು ಪರಿಚಯಿಸುತ್ತಿರುವುದರ ಹಿಂದೆ ಪತ್ನಿಯನ್ನು ಲೋಕಸಭೆ ಕಣಕ್ಕಿಳಿಸುವ ತಂತ್ರಗಾರಿಕೆ ಇದೆಯೋ ಎಂಬ ಅನುಮಾನಗಳೂ ಹಲವರನ್ನು ಕಾಡುತ್ತಿವೆ. ಚಲುವರಾಯಸ್ವಾಮಿ ಅವರೇ ಚುನಾವಣೆ ಎದುರಿಸುವ ಸ್ಥಿತಿಯಲ್ಲಂತೂ ಇಲ್ಲ. ಏಕೆಂದರೆ, ಒಮ್ಮೆ ಫಲಿತಾಂಶ ವ್ಯತ್ಯಾಸವಾದರೆ ಸಾಕಷ್ಟು ಮುಜುಗರ, ರಾಜಕೀಯ ಹಿನ್ನಡೆ, ಸಚಿವ ಸ್ಥಾನ ಕಳೆದುಕೊಂಡು ಎಲ್ಲರ ನಿರ್ಲಕ್ಷ್ಯಕ್ಕೆ ಗುರಿಯಾಗಬೇಕಾಗುತ್ತದೆ. ಆ ದುಸ್ಸಾಹಸವನ್ನು ಮಾಡುವ ಸಾಧ್ಯತೆಗಳು ಸದ್ಯಕ್ಕೆ ಕಂಡುಬರುತ್ತಿಲ್ಲ.

ಸಿದ್ದರಾಮಯ್ಯ ಸರ್ಕಾರ ಗೊಂದಲದ ಗೂಡಾಗಿದೆ: ಕೋಟ ಶ್ರೀನಿವಾಸ ಪೂಜಾರಿ

ಮುಂಬೈನಲ್ಲಿ ಕೆಸಿಎನ್ ಭೇಟಿ; ಬೆಂಬಲ ಕೋರಿಕೆ: ಇನ್ನೊಂದೆಡೆ ಬಿಜೆಪಿ ಪಕ್ಷದಲ್ಲಿರುವ ಕೆ.ಸಿ.ನಾರಾಯಣಗೌಡರನ್ನು ಪಕ್ಷಕ್ಕೆ ಸೇರಿಸಿಕೊಂಡು ಲೋಕಸಭೆ ಟಿಕೆಟ್ ನೀಡುವ ಆಕಾಂಕ್ಷೆ ಚಲುವರಾಯಸ್ವಾಮಿ ಅವರಲ್ಲಿದ್ದರೂ ಕೆ.ಆರ್.ಪೇಟೆ ಕ್ಷೇತ್ರದವರು ಅವರನ್ನು ಬಹಿರಂಗವಾಗಿ ವಿರೋಧಿಸುತ್ತಿರುವುದರಿಂದ ಆ ಪ್ರಯತ್ನಕ್ಕೂ ಹಿನ್ನಡೆಯಾಗುತ್ತಿದೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಬರಲಾಗದಿದ್ದರೆ ಕ್ಷೇತ್ರದೊಳಗೆ ನಾರಾಯಣಗೌಡರ ಮತ ಬ್ಯಾಂಕ್‌ನ್ನು ಕಾಂಗ್ರೆಸ್ ಹಿಡಿತಕ್ಕೆ ಪಡೆಯುವ ಪ್ರಯತ್ನಕ್ಕೂ ಇಳಿದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮುಂಬೈಗೆ ಹೋಗಿದ್ದ ಚಲುವರಾಯಸ್ವಾಮಿ ಅವರು ಕೆ.ಸಿ.ನಾರಾಯಣಗೌಡರೊಂದಿಗೆ ರಾಜಕೀಯ ಮಾತುಕತೆ ನಡೆಸಿದ್ದಾರೆಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

click me!