ಕೊಳ್ಳೆ ಹೊಡೆದು ಖಜಾನೆಯನ್ನೇ ಖಾಲಿ ಮಾಡಿದ ಬಿಜೆಪಿ: ಶಾಸಕ ಸಿ.ಎಸ್.ನಾಡಗೌಡ

By Kannadaprabha News  |  First Published Dec 27, 2023, 11:59 PM IST

ತಂದೆ ಮಾಡಿದ ಸಾಲ ಮಕ್ಕಳು ತೀರಿಸುವ ಹಾಗೆ ಹಿಂದಿನ ಬಿಜೆಪಿ ಸರ್ಕಾರ ಮಾಡಿಟ್ಟ ಸಾಲವನ್ನು ನಮ್ಮ ಕಾಂಗ್ರೆಸ್ ಸರ್ಕಾರ ತೀರಿಸುವ ಪರಿಸ್ಥಿತಿ ಬಂದಿದೆ. ಸರ್ಕಾರದ ಯಾವುದೇ ಇಲಾಖೆಯನ್ನು ಬಿಡದೇ ಖಜಾನೆಯನ್ನೇ ಖಾಲಿ ಮಾಡಿ ಕೊಳ್ಳೆ ಹೊಡೆದು ಹೋಗಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಆರೋಪಿಸಿದರು. 


ಮುದ್ದೇಬಿಹಾಳ (ಡಿ.27): ತಂದೆ ಮಾಡಿದ ಸಾಲ ಮಕ್ಕಳು ತೀರಿಸುವ ಹಾಗೆ ಹಿಂದಿನ ಬಿಜೆಪಿ ಸರ್ಕಾರ ಮಾಡಿಟ್ಟ ಸಾಲವನ್ನು ನಮ್ಮ ಕಾಂಗ್ರೆಸ್ ಸರ್ಕಾರ ತೀರಿಸುವ ಪರಿಸ್ಥಿತಿ ಬಂದಿದೆ. ಸರ್ಕಾರದ ಯಾವುದೇ ಇಲಾಖೆಯನ್ನು ಬಿಡದೇ ಖಜಾನೆಯನ್ನೇ ಖಾಲಿ ಮಾಡಿ ಕೊಳ್ಳೆ ಹೊಡೆದು ಹೋಗಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಆರೋಪಿಸಿದರು. ಪಟ್ಟಣದ ಹುಡ್ಕೋ ಬಡಾವಣೆಯಲ್ಲಿನ ಗೃಹ ಕಚೇರಿಯಲ್ಲಿ ಭಾನುವಾರ ಪಕ್ಷದ ತಾಲೂಕು ಎಸ್ಸಿ, ಎಸ್ಟಿ ಘಟಕದ ನೂತನ ಅಧ್ಯಕ್ಷ ಶ್ರೀಕಾಂತ ಚಲವಾದಿ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಜೆ.ವಿಜಯಕರಗೆ ಸನ್ಮಾನಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಬಡವರ, ದೀನ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ, ರೈತರ ಪರ ಕಾಳಜಿ ಇರುವ ಪಕ್ಷ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಇದನ್ನು ಸಹಿಸದ ಬಿಜೆಪಿಯವರು ಜನರಿಗೆ ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

Latest Videos

undefined

ಸಿದ್ದರಾಮಯ್ಯ ಸರ್ಕಾರ ಗೊಂದಲದ ಗೂಡಾಗಿದೆ: ಕೋಟ ಶ್ರೀನಿವಾಸ ಪೂಜಾರಿ

ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕಾಣದ ಬರ ಆವರಿಸಿದೆ. ಮುಂಗಾರು, ಹಿಂಗಾರು ಮಳೆ ಇಲ್ಲದೆ ತೀವ್ರ ಬರಗಾಲ ಎದುರಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಬಡಜನರಿಗೆ ನಮ್ಮ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ರಾಜ್ಯದಿಂದ ಸಂಗ್ರಹಗೊಂಡ ತೆರಿಗೆಯಿಂದ ನಮ್ಮ ಪಾಲಿನ ಹಣ ನಮಗೆ ಕೊಡುವಲ್ಲಿ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಡಾ.ಬಿ.ಆರ್.ಅಂಬೇಡ್ಕರ್ ಸಾರ್ವತ್ರಿಕ ಸಮಾನತೆಯ ಆಧಾರದ ಮೇಲೆ ರಚಿಸಿದ ದೇಶದ ಸಂವಿಧಾನಕ್ಕೆ ಧಕ್ಕೆ ಉಂಟಾಗಲಿದೆ ಎಂಬುದನ್ನು ಜನರ ಮನಸ್ಸಲ್ಲಿ ಮೂಡಿಸಬೇಕಿದೆ ಎಂದರು.

ರಾಜ್ಯದಲ್ಲಿ ಈ ಹಿಂದಿದ್ದ ಬಿಜೆಪಿ ಸರ್ಕಾರದಲ್ಲಿ ಅನುದಾನ ಮಂಜೂರು ಮಾಡದೇ ಬೇಕಾಬಿಟ್ಟಿ ಕಾಗದ ಪತ್ರ ತಯಾರಿಸಿ ಅವೈಜ್ಞಾನಿಕವಾಗಿ ಎಸ್ಸಿ, ಎಸ್ಟಿ ವರ್ಗದವರ ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿ ಕಾಮಗಾರಿ ಕೈಗೊಂಡು ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡದೆ ಹೋಗಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪೆಟ್ಟಾಗಿದೆ. ಜೊತೆಗೆ ಗುತ್ತಿಗೆದಾರರು ತೀರಾ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಯೋಜನೆ ತಿದ್ದುಪಡಿ ಮಾಡಿ ಅನುದಾನ ಹೆಚ್ಚಿಸಿ ಸಮಾನತೆಯ ಆಧಾರದ ಮೇಲೆ ಎಲ್ಲ ವರ್ಗದವರಿಗೂ ನ್ಯಾಯ ಸಿಗುವಂತೆ ಮಾಡಲಾಗಿದೆ. ಹಂತಹಂತವಾಗಿ ಗುತ್ತಿಗೆದಾರರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ಮಾರ್ಚ್ ಬಜೆಟ್‌ನಲ್ಲಿ ರಸ್ತೆ, ಮನೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು. ನೀರಾವರಿಗಾಗಿ ಸುಮಾರು ₹ 1 ಲಕ್ಷ ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಸಹೋದರನ ಮೇಲೆ ನೂರಾರು ಮರ ಕಡಿದ ಆರೋಪ: ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣಾವಣೆಯಲ್ಲಿ ಭ್ರಷ್ಟ ಹಾಗೂ ಕೋಮುಭಾವನೆ ಸೃಷ್ಟಿಸುವ ಕೇಂದ್ರ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಎಲ್ಲ ಕಾರ್ಯಕರ್ತರ ಹಾಗೂ ಮುಖಂಡರ ಜವಾಬ್ದಾರಿಯಾಗಿದೆ ಎಂದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ವೈ.ಎಚ್. ವಿಜಯಕರ, ವಿಜೇಂದ್ರ ಇಲಕಲ್ಲ, ಬಹಾದ್ದೂರ್‌ ರಾಠೋಡ, ಲಕ್ಷ್ಮಣ ಲಮಾಣಿ, ರಾಜೇಂದ್ರಗೌಡ ರಾಯಗೊಂಡ, ಯಲ್ಲಪ್ಪ ಚಲವಾದಿ, ಗೋಪಿ ಮಡಿವಾಳರ ಸೇರಿದಂತೆ ಹಲವರು ಇದ್ದರು.

click me!