ಮೈಸೂರಿಗೂ ಪ್ರಧಾನಿ ಮೋದಿಗೂ ಎರಡು ದಶಕಗಳ ನಂಟು!

By Kannadaprabha NewsFirst Published Apr 13, 2024, 3:59 PM IST
Highlights

20 ವರ್ಷಗಳಲ್ಲಿ 12 ಬಾರಿ ಭೇಟಿ, ನಾಲ್ಕು ಸಲ ವಾಸ್ತವ್ಯ. ಮೊದಲ ಬಾರಿ ಪುರಭವನ, ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಚಾರ ಭಾಷಣ

ಅಂಶಿ ಪ್ರಸನ್ನಕುಮಾರ್

 ಮೈಸೂರು (ಏ.13): ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮೈಸೂರಿಗೂ ಎರಡು ದಶಕಗಳ ನಂಟು.  ಹೌದು ಅವರು ಈ 20 ವರ್ಷಗಳ ಅವಧಿಯಲ್ಲಿ 12 ಬಾರಿ ಮೈಸೂರಿಗೆ ಭೇಟಿ ನೀಡಿದ್ದಾರೆ. ಬಹುತೇಕ ಬಾರಿ ಅವರು ಬಂದಿರುವುದು ಚುನಾವಣಾ ಪ್ರಚಾರಕ್ಕಾಗಿ.

ಸಾಮಾನ್ಯವಾಗಿ ಪ್ರಧಾನಿಯವರು ರಾಜ್ಯಗಳಿಗೆ ಭೇಟಿ ನೀಡಿದಾಗ ಆಯಾ ರಾಜ್ಯಗಳ ರಾಜಧಾನಿಯ ರಾಜಭವನದಲ್ಲಿ ವಾಸ್ತವ್ಯ ಹೂಡುತ್ತಾರೆ. ಆದರೆ ಮೋದಿಯವರು ನಾಲ್ಕು ಬಾರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು ವಿಶೇಷ.

ಸಿಎಂ ಆಗಿದ್ದಾಗ ಮೂರು ಬಾರಿ...

ಅವರು ಮೊದಲ ಬಾರಿ ಮೈಸೂರಿಗೆ ಭೇಟಿ ನೀಡಿದ್ದು 2004 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ. ಅಂದು ಪುರಭವನ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು.

ಎರಡನೇ ಬಾರಿ ಗುಜರಾತ್ ಸಿಎಂ ಆಗಿದ್ದಾಗ 2009ರ ದಸರಾ ಸಂದರ್ಭದಲ್ಲಿ ಸೆ.28 ರಂದು ಪಂಜಿನ ಕವಾಯತಿನಲ್ಲಿ ಭಾಗವಹಿಸಿದ್ದರು. ಆಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹಾಗೂ ಶೋಭಾ ಕರಂದ್ಲಾಜೆ ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. ಮರುದಿನ ಅಂದರೆ ಸೆ.29 ರಂದು ಸುತ್ತೂರಿನಲ್ಲಿ ಬಿಜೆಪಿ ಏರ್ಪಡಿಸಿದ್ದ ಸಹ ಚಿಂತನಾ ಶಿಬಿರದಲ್ಲೂ ಭಾಗವಹಿಸಿದ್ದರು.

ಇದಾದ ನಂತರ ಮೋದಿ ಅವರು ಮೈಸೂರಿಗೆ ಮತ್ತೆ ಬಂದಿದ್ದು 2014ರ ಏ.8 ರಂದು. ವಿಶೇಷ ವಿಮಾನದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ಅದೇ ರೀತಿ ವಾಪಸ್ ಆಗಿದ್ದರು. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪ್ ಸಿಂಹ ಪರ ಪ್ರಚಾರ ಮಾಡಿದ್ದರು.

ಪ್ರಧಾನಿಯಾಗಿ ಒಂಭತ್ತನೇ ಭೇಟಿ

2016ರ ಜ.2 ರಂದು ಪ್ರಧಾನಿಯಾಗಿ ಮೊದಲ ಭೇಟಿ ನೀಡಿದ್ದರು. ಅಂದೇ ಮೈಸೂರಿಗೆ ಆಗಮಿಸಿ, ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಸುತ್ತೂರು ಮಠ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜನ್ಮ ಶತಮಾನೋತ್ಸವ ಉದ್ಘಾಟನೆಯಲ್ಲಿ ಭಾಗವಹಿಸಿ, ಲಲಿತಮಹಲ್ ಹೋಟೆಲಲ್ಲಿ ವಾಸ್ತವ್ಯ ಹೂಡಿದ್ದರು. ಜ.3 ರಂದು ಮೈಸೂರು ವಿಶ್ವವಿದ್ಯಾನಿಲಯವು ಶತಮಾನೋತ್ಸವ ಅಂಗವಾಗಿ ಏರ್ಪಡಿಸಿದ್ದ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ನ 103ನೇ ಅಧಿವೇಶನ ಉದ್ಘಾಟಿಸಿ, ದೆಹಲಿಗೆ ವಾಪಸ್ ಆಗಿದ್ದರು.

2018ರ ಫೆ. 18 ರಂದು ರಾತ್ರಿ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿ, ರ್ಯಾಡಿಸನ್ ಬ್ಲೂ ಹೋಟೆಲಲ್ಲಿ ವಾಸ್ತವ್ಯ ಹೂಡಿದ್ದರು. ಮರುದಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್‌ನಲ್ಲಿ ಭಾಗವಹಿಸಿ, ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ಶ್ರವಣಬೆಳಗೊಳಕ್ಕೆ ತೆರಳಿದ್ದರು. ಅಲ್ಲಿಂದ ಮಧ್ಯಾಹ್ನ ನಗರಕ್ಕೆ ವಾಪಸ್ ಆಗಿ, ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ, ಬಿಜೆಪಿ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.

2018ರ ವಿಧಾನಸಭಾ ಚುನಾವಣೆ ಕಾಲಕ್ಕೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಗೆ ಭೇಟಿ ನೀಡಿ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಕೊಡಗಿಗೆ ಹೋಗುವಾಗ ಮೈಸೂರು ವಿಮಾನ ನಿಲ್ದಾಣದ ಮೂಲಕ ತೆರಳಿದ್ದರು.

2022 ಜೂ.20 ರಂದು ಮೈಸೂರಿಗೆ ಆಗಮಿಸಿ, ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದಿಸಿದ್ದರು. ಚಾಮುಂಡಿಬೆಟ್ಟ ತಪ್ಪಲಿನ ಸುತ್ತೂರು ಶ್ರೀಮಠಕ್ಕೆ ಭೇಟಿ ನೀಡಿ,ವೇದ ಪಾಠ ಶಾಲಾ ಕಟ್ಟಡ ಉದ್ಘಾಟಿಸಿ, ಯೋಗ ಹಾಗೂ ಭಕ್ತಿ ಕುರಿತ ಸ್ಮರಣ ಗ್ರಂಥ ಬಿಡುಗಡೆ ಮಾಡಿದ್ದರು. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ರ್ಯಾಡಿಸನ್ ಬ್ಲೂ ಹೋಟೆಲಲ್ಲಿ ವಾಸ್ತವ್ಯ ಹೂಡಿದ್ದರು.

ಜೂ.21 ರಂದು ಬೆಳಗ್ಗೆ ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ವಸ್ತು ಪ್ರದರ್ಶನ ವೀಕ್ಷಿಸಿದ್ದರು. ಮೈಸೂರು ರಾಜವಂಶಸ್ಥರನ್ನು ಭೇಟಿ ಮಾಡಿದ್ದರು. ನಂತರ ದೆಹಲಿಗೆ ವಾಪಸ್ ಆಗಿದ್ದರು.

2023ರ ಮಾ.12 ರಂದು ಮಂಡ್ಯದಲ್ಲಿ ದಶಪಥ ಉದ್ಘಾಟನೆಗಾಗಿ ಮೈಸೂರಿಗೆ ವಿಮಾನದಲ್ಲಿ ಬಂದು ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ತೆರಳಿದ್ದರು. ನಂತರ ಹೆಲಿಕಾಪ್ಟರ್ನಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ಧಾರವಾಡಕ್ಕೆ ತೆರಳಿದ್ದರು.

2023ರ ಏ.8 ರಂದು ವಿಶೇಷ ವಿಮಾನದಲ್ಲಿ ಆಗಮಿಸಿ, ರ್ಯಾಡಿಸನ್ ಬ್ಲೂ ಹೋಟೆಲಲ್ಲಿ ವಾಸ್ತವ್ಯ ಹೂಡಿದ್ದರು. ಏ.9 ರಂದು ಬೆಳಗ್ಗೆ ಹೆಲಿಕಾಪ್ಟರ್‌ನಲ್ಲಿ ಬಂಡೀಪುರಕ್ಕೆ ತೆರಳಿ, ಸಫಾರಿ ನಡೆಸಿದ್ದರು. ನಂತರ ಮದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡಿಗೆ ತೆರಳಿ, ದಿ ಎಲಿಪೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದಿದ್ದ ಹಿನ್ನೆಲೆಯಲ್ಲಿ ಅನಾಥ ಆನೆಗಳನ್ನು ರಕ್ಷಣೆ ಮಾಡುತ್ತಿರುವ ಬೆಳ್ಳಿ ಹಾಗೂ ಬೊಮ್ಮ ದಂಪತಿಯನ್ನು ಭೇಟಿ ಮಾಡಿ, ಅಭಿನಂದಿಸಿದ್ದರು. ಅಲ್ಲಿಂದ ಮೈಸೂರಿಗೆ ವಾಪಸ್ ಆಗಿ, ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆದ ಬಂಡೀಪುರ ಹುಲಿ ಯೋಜನೆಯ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಿದ್ಗರು. ನಂತರ ವಿಶೇಷ ವಿಮಾನದಲ್ಲಿ ನಗರದಿಂದ ದೆಹಲಿಗೆ ತೆರಳಿದ್ದರು.

ಅದೇ ವರ್ಷದ ಏ.30 ರಂದು ವಿಶೇಷ ಹೆಲಿಕಾಪ್ಟರ್‌ನಲ್ಲಿ ಮೈಸೂರು ವಿವಿ ಓವೆಲ್ ಮೈದಾನಕ್ಕೆ ಬಂದಿಳಿದು, ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ಐದು ಕಿ.ಮೀ. ರೋಡ್ ಶೋ ನಡೆಸಿದ್ದರು. ಅದೇ ವರ್ಷದ ಮೇ 7 ರಂದು ಸಂಜೆ ನಂಜನಗೂಡಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಶ್ರೀಕಂಠೇಶ್ವರ ದೇಗುಲಕ್ಕೂ ಭೇಟಿ ನೀಡಿದ್ದರು.

ಇದೀಗ ಏ.14 ರಂದು ನಗರಕ್ಕೆ ಆಗಮಿಸಿ, ಸಂಜೆ 4ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ನಂತರ ಮಂಗಳೂರಿಗೆ ತೆರಳುವರು.

click me!