
ಬೆಂಗಳೂರು (ಮಾ.27): ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಸ್ಪರ್ಧಿಸಲಿರುವ ಮೂರು ಕ್ಷೇತ್ರಗಳ ಪೈಕಿ ಹಾಸನ ಮತ್ತು ಮಂಡ್ಯಕ್ಕೆ ಅಭ್ಯರ್ಥಿಗಳು ಅಖೈರಾಗಿದ್ದು, ಕೋಲಾರ ಕ್ಷೇತ್ರವೊಂದು ಕೊನೆಯ ಕ್ಷಣದಲ್ಲಿ ಕಗ್ಗಂಟಾಗಿ ಪರಿಣಮಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಜೆಡಿಎಸ್‌ಗೆ ಲಭ್ಯವಾಗಿರುವ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಆಯ್ಕೆ ಕುರಿತು ಚರ್ಚೆ ನಡೆಸಲಾಗಿದೆ. ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಕುಮಾರಸ್ವಾಮಿ ಅವರು ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದು ನಿಚ್ಚಳವಾಗಿದೆ. ಆದರೆ, ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ.
ಈ ಮೊದಲು ಮಲ್ಲೇಶ್ ಬಾಬು ಅವರ ಹೆಸರನ್ನು ಕೋಲಾರ ಕ್ಷೇತ್ರಕ್ಕೆ ಅಂತಿಮಗೊಳಿಸಲಾಗಿತ್ತು. ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡ ಅವರೂ ಮಲ್ಲೇಶ್‌ಬಾಬು ಪರ ಒಲವು ಹೊಂದಿದ್ದರು. ಆದರೆ, ಶಾಸಕ ಸಮೃದ್ಧಿ ಮಂಜುನಾಥ್ ಮತ್ತು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ, ಬಿಜೆಪಿಯ ಹಾಲಿ ಸಂಸದ ಮುನಿಸ್ವಾಮಿ ಕೂಡ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಟಿಕೆಟ್ ಸಂಬಂಧ ಚರ್ಚೆ ನಡೆಸಿರುವುದು ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಬುಧವಾರ ದೇವೇಗೌಡರೊಂದಿಗೆ ಚರ್ಚೆ ನಡೆಸಿದ ಬಳಿಕ ಪಟ್ಟಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.
ನನಗೀಗ ಹೊಸ ಜೀವನ ಸಿಕ್ಕಿದೆ: ಹೃದಯದ ಶಸ್ತ್ರಚಿಕಿತ್ಸೆ ಬಳಿಕ ಎಚ್‌ಡಿಕೆ ಹೇಳಿದಿಷ್ಟು..
28 ಸ್ಥಾನ ಗೆಲ್ಲಲು ಶ್ರಮ: ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ವಿಶ್ವಾಸದೊಂದಿಗೆ ಉಭಯ ಪಕ್ಷಗಳ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು. ಮೈತ್ರಿ ಪಕ್ಷಗಳ ಗೆಲುವಿಗೆ ರಣತಂತ್ರ ರೂಪಿಸುವುದರ ಜತೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಚುನಾವಣೆ ಮುಗಿಯುವವರೆಗೆ ರಾಜ್ಯಮಟ್ಟದ ಮುಖಂಡರು, ಸ್ಥಳೀಯ ಮಟ್ಟದ ನಾಯಕರು, ಕಾರ್ಯಕರ್ತರು ಎಲ್ಲರೂ ಶ್ರಮವಹಿಸಬೇಕು. ಅಲ್ಲದೇ, ಉಭಯ ಪಕ್ಷಗಳು ಸಮನ್ವಯ ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು ಎಂಬ ಸಂದೇಶವನ್ನುಕೋರ್ ಕಮಿಟಿ ಸಭೆಯಲ್ಲಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಣಾಳಿಕೆ ಕುರಿತು ಚರ್ಚೆ: ಮೇಕೆದಾಟು ಯೋಜನೆ ಸಂಬಂಧ ಡಿಎಂಕೆ ಪ್ರಣಾಳಿಕೆಯಲ್ಲಿ ವಿರೋಧಿಸಿರುವ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಈಗಾಗಲೇ ಡಿಎಂಕೆ ಪಕ್ಷದ ಪ್ರಣಾಳಿಕೆಗೆ ಪ್ರತಿಯಾಗಿ ಯೋಜನೆ ಜಾರಿಗೊಳಿಸುವ ಕುರಿತು ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗುವುದು ಎಂದಿದ್ದಾರೆ. ಈ ಕುರಿತು ಸಭೆಯಲ್ಲಿ ಚರ್ಚೆಸಲಾಗಿದ್ದು, ಯೋಜನೆ ಸಂಬಂಧ ಯಾವೆಲ್ಲಾ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂಬುದರ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂ.ಗ್ರಾ.ದಲ್ಲಿ ಡಿ.ಕೆ.ಬ್ರದರ್ಸ್‌ರಿಂದ ಕುಕ್ಕರ್ ಹಂಚಿಕೆ: ಕುಮಾರಸ್ವಾಮಿ ಗಂಭೀರ ಆರೋಪ
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಲೋಕಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳ ನಾಯಕರು ವಿಶ್ವಾಸದೊಂದಿಗೆ ಭಾಗವಹಿಸುವಿಕೆ ಇರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು ಮತ್ತು ಮುಖಂಡರ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಲೋಕಸಭೆ ಚುನಾವಣೆ ಯಾವ ರೀತಿ ನಡೆಸಬೇಕು ಎಂಬುದರ ಕುರಿತು ತಿಳಿಸಲಾಗಿದೆ. ಜೆಡಿಎಸ್‌ಗೆ ಮೂರು ಸ್ಥಾನಗಳು ಸಿಕ್ಕಿದ್ದು, ಮೂರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುತ್ತೇವೆ. ದೇಶದ ಜನರ ಭಾವನೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ ಬರುವ ವಾತಾವರಣ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.