ಲೋಕಸಭಾ ಟಿಕೆಟ್ ಭಿನ್ನಮತ ಶಮನಕ್ಕೆ ಬಿಎಸ್‌ವೈ ಸಾರಥ್ಯ: ಕೊಪ್ಪಳ, ಬಳ್ಳಾರಿ, ದಾವಣಗೆರೆಯಲ್ಲಿ ಯಶಸ್ವಿ?

By Kannadaprabha News  |  First Published Mar 27, 2024, 4:51 AM IST

ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಿಂದ ಪಕ್ಷದಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಪರಿಹರಿಸಲು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಂದಾಳತ್ವ ವಹಿಸಿದ್ದಾರೆ.


ಬೆಂಗಳೂರು (ಮಾ.27): ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಿಂದ ಪಕ್ಷದಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಪರಿಹರಿಸಲು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಂದಾಳತ್ವ ವಹಿಸಿದ್ದಾರೆ. ಈ ಮೂಲಕ 82ರ ಹರೆಯದ ಯಡಿಯೂರಪ್ಪ ಅವರು ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಎದುರಾಗಿದ್ದ ಅಡೆತಡೆ, ಸವಾಲುಗಳನ್ನು ತಾವೇ ಮುಂದೆ ನಿಂತು ಒಂದೊಂದಾಗಿ ನಿವಾರಣೆ ಮಾಡುತ್ತಿದ್ದಾರೆ.

ಕಳೆದೊಂದು ವಾರದಿಂದ ಯಡಿಯೂರಪ್ಪ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸತತವಾಗಿ ವಿವಿಧ ಕ್ಷೇತ್ರಗಳ ಮುಖಂಡರನ್ನು ಭೇಟಿ ಮಾಡುವ ಮೂಲಕ ಅವರ ಅಸಮಾಧಾನವನ್ನು ಆಲಿಸಿ ಬಗೆಹರಿಸುವ ಪ್ರಯತ್ನ ಮಾಡಿದರು. ಸೋಮವಾರ ಟಿಕೆಟ್ ವಂಚಿತ ಕೊಪ್ಪಳ ಕ್ಷೇತ್ರದ ಹಾಲಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಕ್ಷೇತ್ರದ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಿ ಅಸಮಾಧಾನ ಶಮನಗೊಳಿಸಿದರು. ಕಾಂಗ್ರೆಸ್‌ನತ್ತ ಮುಖ ಮಾಡಿದ್ದ ಕರಡಿ ಸಂಗಣ್ಣ ಅವರನ್ನು ಪಕ್ಷದಲ್ಲೇ ಉಳಿಯುವಂತೆ ಮಾಡಿದರು.

Tap to resize

Latest Videos

Lok Sabha Election 2024: ಪ್ರಭಾವ ಬಳಸಿ ಬಿ.ಎಸ್‌.ಯಡಿಯೂರಪ್ಪ ಟಿಕೆಟ್ ಹಂಚಿಕೆ: ಈಶ್ವರಪ್ಪ

ಅದಕ್ಕೂ ಮೊದಲು ಬಳ್ಳಾರಿ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಶಾಸಕ ಹಾಗೂ ಕೆಆರ್‌ಪಿಪಿ ಪಕ್ಷ ಸ್ಥಾಪಿಸಿದ್ದ ಗಾಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಯಡಿಯೂರಪ್ಪ ಅವರ ಪಾತ್ರವೂ ಮಹತ್ವದಾಗಿತ್ತು. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕರೆದ ಸಭೆಗೆ ಆ ಕ್ಷೇತ್ರದ ಕೆಲವು ಮುಖಂಡರು ಗೈರು ಹಾಜರಾಗಿದ್ದರಿಂದ ಮಂಗಳವಾರ ಸ್ವತಃ ದಾವಣಗೆರೆಗೆ ತೆರಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಮಾಜಿ ಸಚಿವರಾದ ಎಸ್‌.ಎ.ರವೀಂದ್ರನಾಥ್‌, ಎಂ.ಪಿ.ರೇಣುಕಾಚಾರ್ಯ ಮತ್ತಿತರರನ್ನು ಮಾತುಕತೆ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾದರು. 

ಈ ವೇಳೆ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಅವರು ಯಡಿಯೂರಪ್ಪ ಅವರಿಗೆ ಸಾಥ್ ನೀಡಿದರು. ಬಳಿಕ ಅಲ್ಲಿಂದ ನೇರವಾಗಿ ಬೆಳಗಾವಿಗೆ ತೆರಳಿದ ಯಡಿಯೂರಪ್ಪ ನೇತೃತ್ವದ ನಾಯಕರ ತಂಡ ತಡರಾತ್ರಿ ಕ್ಷೇತ್ರದ ಅತೃಪ್ತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿತು. ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕೆಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರಿಂದ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಬುಧವಾರವೂ ಮಾತುಕತೆ ಮುಂದುವರೆಯಲಿದೆ. ಇದೇ ರೀತಿ ರಾಯಚೂರು, ಬೀದರ್ ಮತ್ತಿತರ ಲೋಕಸಭಾ ಕ್ಷೇತ್ರಗಳಲ್ಲಿನ ಪಕ್ಷದ ಮುಖಂಡರಲ್ಲಿ ತಲೆದೋರಿರುವ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನವನ್ನು ಯಡಿಯೂರಪ್ಪ ಅವರು ಮಾಡಲಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿಯಲ್ಲಿ ಬಿಎಸ್‌ವೈ ಹಿಡಿತ ತಪ್ಪಿಸಲೆಂದೇ ನನ್ನ ಸ್ಪರ್ಧೆ: ಕೆ.ಎಸ್‌.ಈಶ್ವರಪ್ಪ

ಈಶ್ವರಪ್ಪ ಮನವೊಲಿಕೆ ಸ್ಥಗಿತ: ಈ ನಡುವೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ಮನವೊಲಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಸ್ಥಗಿತಗೊಳಿಸಿದ್ದಾರೆ. ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ನಾಯಕರ ಸಲಹೆ ಮೇರೆಗೆ ಈಶ್ವರಪ್ಪ ಅವರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

click me!