'ಈಗಲಾದ್ರೂ ನನ್ನ ನೆನಪಿಸಿಕೊಂಡ್ರಲ್ಲ, ಅಭಿನಂದನೆ' ; ಅಮಿತ್ ಶಾ ಟೀಕೆಗೆ ಡಿಕೆ ಶಿವಕುಮಾರ ತಿರುಗೇಟು

By Ravi JanekalFirst Published Apr 2, 2024, 7:42 PM IST
Highlights

'ಇಂಡಿಯಾ ಒಕ್ಕೂಟ' ಬೆಂಗಳೂರಲ್ಲೇ ಜನ್ಮ ತಾಳಿದೆ. ಅದಕ್ಕೆ ನೀವೂ ಸಾಕ್ಷಿಯಾಗಿದ್ದೀರಿ. ಸುಮಾರು ಹತ್ತು ಪಕ್ಷಗಳು ಇಂದು ಕುಳಿತು ಚರ್ಚೆ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ಬೆಂಗಳೂರು (ಏ.2) 'ಇಂಡಿಯಾ ಒಕ್ಕೂಟ' ಬೆಂಗಳೂರಲ್ಲೇ ಜನ್ಮ ತಾಳಿದೆ. ಅದಕ್ಕೆ ನೀವೂ ಸಾಕ್ಷಿಯಾಗಿದ್ದೀರಿ. ಸುಮಾರು ಹತ್ತು ಪಕ್ಷಗಳು ಇಂದು ಕುಳಿತು ಚರ್ಚೆ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ಲೋಕಸಭಾ ಚುನಾವಣೆಗೆ ಇಂಡಿಯಾ ಕೂಟ ಮೈತ್ರಿ ಹಿನ್ನೆಲೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು  ರಾಜ್ಯದ ಇಂಡಿಯಾ ಮೈತ್ರಿಕೂಟ ಪಕ್ಷಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಇಂಡಿಯಾ ಮೈತ್ರಿಕೂಟದಲ್ಲಿ ಅವರದ್ದೇ ತತ್ವ ಸಿದ್ಧಾಂತದ ಮೇಲೆ ಪಕ್ಷ ಕಟ್ಟಿಕೊಂಡು ಬಂದಿದ್ದಾರೆ. ಅವರ ಪಕ್ಷದ ಶಾಸಕರು, ಎಂಎಲ್‌ಸಿಗಳು ಎಷ್ಟು ಇದ್ದಾರೆಂಬುದು ಮುಖ್ಯ ಅಲ್ಲ, ಅವರೆಲ್ಲ ನಮ್ಮ ಜೊತೆ ಒಗ್ಗೂಡಿ ಎನ್‌ಡಿಎ ಸೋಲಿಸುವುದೇ ಗುರಿಯಾಗಿದೆ. ಹೀಗಾಗಿ ರಾಜ್ಯಮಟ್ಟದಿಂದ ಬೂತ್ ವರೆಗೂ ಕೆಲಸ ಮಾಡಬೇಕಿದೆ. ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಕೂತು ಚರ್ಚೆ ಮಾಡಿದ್ದೇವೆ. ಈ ಚುನಾವಣೆ 'ಕೋಮುವಾದಿ ಸರ್ವಾಧಿಕಾರ Vs ಪ್ರಜಾಪ್ರಭುತ್ವ' ಈ ಘೋಷಣೆಯಡಿ ಕೆಲಸ ಮಾಡುತ್ತೇವೆ ಎಂದರು.

ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. 17 ಸಾವಿರ ಮತ ಸಿಪಿಎಂ ಪಡೆದಿತ್ತು. ಆಗ ದೇವೇಗೌಡರು ಸೋತರು. ಹೀಗೆಂದು ಸಭೆಯಲ್ಲಿ ಉದಾಹರಣೆ ಕೊಟ್ಟರು. ಈಗ ಪ್ರಜಾಪ್ರಭುತ್ವ ಉಳಿಸಬೇಕು. ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ಪ್ರತಿಪಕ್ಷಗಳನ್ನು ಹೇಗೆ ಮುಗಿಸುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ವಿರೋಧ ಪಕ್ಷಗಳಿಗೆ ಐಟಿ ನೋಟೀಸ್ ಕೊಟ್ಟಿದೆ. ಯಾವತ್ತಾದರೂ ಒಂದು ದಿನ ಪರವಾಗಿ ತೀರ್ಪು ಬರುತ್ತೆ. ಸದ್ಯ ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸಬೇಕಾಗಿದೆ ಎಂದರು.

ಕರ್ನಾಟಕದಲ್ಲಿ ತೀವ್ರ ಬರಗಾಲ ಬಂದಿದೆ. ಬರಗಾಲದಲ್ಲೂ ಕೇಂದ್ರದಿಂದ ನಮಗೆ ಅನ್ಯಾಯವಾಗಿದೆ. 'ನಮ್ಮ ತೆರಿಗೆ ನಮ್ಮ ಹಕ್ಕು' ರಾಜ್ಯಕ್ಕೆ ಬರಬೇಕಾದ ತೆರಿಗೆ ನೀಡದೆ ಅನ್ಯಾಯ ಮಾಡಿದೆ.ಇದಕ್ಕೆಲ್ಲ ಪ್ರಧಾನಿ ಮೋದಿ ಉತ್ತರ ಕೊಡಬೇಕು, ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ದೇಶವನ್ನು ಉಳಿಸುವ ದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. 28ಕ್ಕೆ 28 ಕ್ಕೆ ಗೆಲ್ಲುವ ವಿಶ್ವಾಸವನ್ನು ಮಿತ್ರಪಕ್ಷಗಳು ಕೊಟ್ಟಿವೆ. ಅವರು ಎಲ್ಲೆಲ್ಲಿ ಪ್ರಚಾರಕ್ಕೆ ಹೋಗಬೇಕು ಎಂಬ ಮಾಹಿತಿ ಕೊಟ್ಟಿದ್ದೇವೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರ ಇದೆ, ಕುರ್ಚಿ ಉಳಿಸಿಕೊಳ್ಳಲು ಒಬ್ಬರು, ಕುರ್ಚಿಗಾಗಿ ಇನ್ನೊಬ್ಬರು ಕಾಲೆಳೆಯುತ್ತಿದ್ದಾರೆಂಬ ಅಮಿತ್ ಶಾ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಬಹಳ ಸಂತೋಷ್, ನನ್ನನ್ನ ನೆನಪಿಸಿಕೊಂಡಿದ್ದಕ್ಕೆ ಅವರಿಗೆ ಅಭಿನಂದನೆ. ಈಗಲಾದ್ರೂ ಹೆಸರು ನೆನಪಿಸಿಕೊಂಡ್ರಲ್ಲ ಎಂದರು. ಇದೇ ವೇಳೆ ದೇಶ ವಿಭಜನೆ ವಿಚಾರದ ಸಂಬಂಧ ಪ್ರಧಾನಿ ಮೋದಿ ಡಿಕೆ ಸುರೇಶ್ ಹೆಸರು ಪ್ರಸ್ತಾಪಿಸಿ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಯಾರು ದೇಶ ವಿಭಜನೆ ಮಾಡುವ ಮಾತನಾಡಿದ್ದಾರೆ. ಯಾರೂ ಆ ರೀತಿ ಮಾತಾಡಿಲ್ಲ. ಜನ ಆ ರೀತಿ ಆಲೋಚನೆ ಮಾಡಬಹುದು. ಆ ರೀತಿ ಪರಿಸ್ಥಿತಿ ಬರಬಹುದು ಎಂದು ಹೇಳಿದ್ದಾರೆ. ಸುರೇಶ್ ಅವರನ್ನ ನೆನೆಸಿಕೊಂಡಿದ್ದಕ್ಕೆ ಮೋದಿಯವರಿಗೆ ಧನ್ಯವಾದಗಳು ಎಂದ ಡಿಕೆಶಿ.

click me!