ನಮ್ಮದೇನಿದ್ದರೂ ಗ್ಯಾರಂಟಿ: ಧರ್ಮ, ರಾಮನ ಬಗ್ಗೆ ಮಾತಾಡಲ್ಲ: ಎಚ್.ಆಂಜನೇಯ

By Kannadaprabha News  |  First Published Apr 3, 2024, 11:04 AM IST

ಶ್ರೀಸಾಮಾನ್ಯ ಬದುಕಿಗೆ ಊರುಗೋಲಾದ ಗ್ಯಾರಂಟಿ ಯೋಜನೆಗಳೇ ಲೋಕಸಭೆ ಚುನಾವಣೆ ಮತಯಾಚನೆ ಆಶಯಗಳು. ನಾವು ಧರ್ಮ, ರಾಮನ ಬಗ್ಗೆ ಮಾತನಾಡಲ್ಲವೆಂದು ಮಾಜಿ ಸಚಿವ ಎಚ್.ಆಂಜನೇಯ ಬಿಜೆಪಿಗೆ ಟಾಂಗ್‌ ನೀಡಿದರು. 


ಚಿತ್ರದುರ್ಗ (ಏ.03): ಶ್ರೀಸಾಮಾನ್ಯ ಬದುಕಿಗೆ ಊರುಗೋಲಾದ ಗ್ಯಾರಂಟಿ ಯೋಜನೆಗಳೇ ಲೋಕಸಭೆ ಚುನಾವಣೆ ಮತಯಾಚನೆ ಆಶಯಗಳು. ನಾವು ಧರ್ಮ, ರಾಮನ ಬಗ್ಗೆ ಮಾತನಾಡಲ್ಲವೆಂದು ಮಾಜಿ ಸಚಿವ ಎಚ್.ಆಂಜನೇಯ ಬಿಜೆಪಿಗೆ ಟಾಂಗ್‌ ನೀಡಿದರು. ಜಿಲ್ಲಾ ಕಾಂಗ್ರೆಸ್‌ವತಿಯಿಂದ ಮಂಗಳವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ನ್ಯಾಯಯತವಾದ ರೀತಿಯಲ್ಲಿ ಚುನಾವಣೆ ನಡೆಸುವುದರ ಮೂಲಕ ಗೆಲುವು ಸಾಧಿಸುತ್ತೇವೆ. ಜಾತ್ಯತೀತ ದೇಶದಲ್ಲಿ ಎಲ್ಲರೂ ಸಹಬಾಳ್ವೆ ನಡೆಸುತ್ತಿದ್ದಾರೆ. 

ಇಂತವರ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆಯ ಸಮಯದಲ್ಲಿ ಮತದಾರರಿಗೆ ನೀಡಿದ ವಾಗ್ದಾನದಂತೆ 5 ಗ್ಯಾರಂಟಿಗಳನ್ನು ಈಡೇರಿಸಿದೆ. ಇದನ್ನು ಜನತೆಗೆ ತಿಳಿಸುವುದರ ಮೂಲಕ ಮತಯಾಚನೆ ಮಾಡುವಂತೆ ಮನವಿ ಮಾಡಿದರು. ಏ.4ರಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ನಾಮಪತ್ರ ಸಲ್ಲಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ನಾಯಕರು ಭಾಗವಹಿಸಲಿದ್ದಾರೆ ಎಂದರು.

Latest Videos

undefined

ಎಂ.ಲಕ್ಷ್ಮಣ ನಮ್ಮ, ನಿಮ್ಮಲ್ಲರ ಧ್ವನಿಯಾಗಿ ಪಾರ್ಲಿಮೆಂಟಿಗೆ ಹೋಗ್ತಾರೆ, ಗೆಲ್ಲಿಸಿ ಕಳಿಸಿ: ಸಿದ್ದರಾಮಯ್ಯ

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಕಳೆದ 10 ವರ್ಷದಿಂದ ರಾಜ್ಯದ ವಿವಿಧ ರೀತಿಯ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದರೆ ನಮಗೆ ಸಹಾಯವಾಗಲಿದೆ. ಇದರ ಬಗ್ಗೆ ಆಲೋಚಿಸಿ ಏ.26ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಿಸುವಂತೆ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಕರೆ ನೀಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾದ 5300 ಕೋಟಿ ರು. ಬಿಡುಗಡೆ ಮಾಡುವಲ್ಲಿ ಮೀನಾಮೇಷ ಎಣಿಸುತ್ತಿದೆ. 

ಇದರ ಬಗ್ಗೆ ರಾಜ್ಯದಿಂದ ಆಯ್ಕೆಯಾದ ಯಾವ ಸಂಸದರು ಸಹಾ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ ಎಂದು ದೂರಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಮಠಾಧೀಶರ ಆಶಯವನ್ನೇ ಹೊಂದಿವೆ. ಜನರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಬಿಜೆಪಿ ಪಕ್ಷದವರು ನಿತ್ಯ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಜನ ನಾವು ಪ್ರಬುದ್ಧರು ಎಂಬುದನ್ನು ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ದೃಢ ಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿಯೂ ಈ ಕೆಲಸ ಆಗಬೇಕೆಂದರು.

ಕ್ಷೇತ್ರದಲ್ಲಿ ಏಳು ಮಂದಿ ಶಾಸಕರು, ಮಂಡಳಿ-ನಿಗಮದ ಅಧ್ಯಕ್ಷರು, ಜಿಲ್ಲಾ ಸಚಿವರು, ಹಾಲಿ-ಮಾಜಿ ಮಂತ್ರಿ ಹಾಗೂ ಸಾವಿರಾರು ಮುಖಂಡರು, ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಅಪಸ್ವರ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವೆಲ್ಲ ಬೆಳವಣಿಗೆಗಳು ಲಕ್ಷಾಂತರ ಮತಗಳ ಅಂತರದಲ್ಲಿ ಪಕ್ಷದ ಗೆಲುವಿಗೆ ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಯವರನ್ನು ಟೀಕಿಸಿದಾಗಲೆಲ್ಲ ಅವರ ಜನಪ್ರಿಯತೆ ಹೆಚ್ಚಾಗಿದೆ: ಬೊಮ್ಮಾಯಿ

ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಹನುಮಲಿ ಷಣ್ಮಖಪ್ಪ, ಭೀಮಸಮುದ್ರದ ಜಿ.ಎಸ್.ಮಂಜುನಾಥ್, ಕೆ.ಸಿ.ನಾಗರಾಜ್, ಯೋಗಿಶ್ ಬಾಬು, ಉಮಾಪತಿ, ನಂದಿನಿ ಗೌಡ, ಆರ್.ಕೆ.ಸರ್ದಾರ ಡಿಸಿಸಿ ಅಧ್ಯಕ್ಷ ತಾಜ್ ಪೀರ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಮುಖಂಡರಾದ ವೆಂಕಟೇಶ್, ಲಕ್ಷ್ಮೀಕಾಂತ, ಆನಂತ, ವಿಜಯಕುಮಾರ್, ಜಮೀರ್, ಅಲ್ಲಾಭಕ್ಷಿ, ಎನ್.ಡಿ.ಕುಮಾರ್, ಕೃಷ್ಣಪ್ಪ, ಸಂಪತ್ ಕುಮಾರ್, ಮೈಲಾರಪ್ಪ, ನೇತಾಜಿ, ಬಾಲರಾಜ್, ಶಶಿಕಲಾ, ಕಾಂಗ್ರೆಸ್ ಎಸ್ಟಿ ಸೆಲ್ ಜಿಲ್ಲಾಧ್ಯಕ್ಷ ಎಚ್.ಅಂಜಿನಪ್ಪ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಬಿ.ಟಿ.ಜಗದೀಶ್, ಶಬ್ಬೀರ, ಆಶಾ, ಸ್ವಾಮಿ, ಆರತಿ ಮಹಡಿ ಶಿವಮೂರ್ತಿ ಇದ್ದರು.

click me!