ಜನರ ಮಧ್ಯೆ ಇರುವ ಕ್ರಿಯಾಶೀಲ ರಾಜಕಾರಣಿ ಡಿ.ಕೆ.ಸುರೇಶ್ ಬೇಕೆ ಹೊರತು ವೈಟ್ ಕಾಲರ್ ರಾಜಕಾರಣಿ ಡಾ.ಸಿ.ಎನ್.ಮಂಜುನಾಥ್ ಬೇಡ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಮನಗರ (ಮಾ.29): ಜನರ ಮಧ್ಯೆ ಇರುವ ಕ್ರಿಯಾಶೀಲ ರಾಜಕಾರಣಿ ಡಿ.ಕೆ.ಸುರೇಶ್ ಬೇಕೆ ಹೊರತು ವೈಟ್ ಕಾಲರ್ ರಾಜಕಾರಣಿ ಡಾ.ಸಿ.ಎನ್. ಮಂಜುನಾಥ್ ಬೇಡ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುತ್ತೇನೆ. ಡಿ.ಕೆ.ಸುರೇಶ್ ಅವರು ಗೆಲವು ಸಾಧಿಸುವುದು ಶತಸಿದ್ದ. ಸಂಸದರಾದರು ಡಿ.ಕೆ.ಸುರೇಶ್ ಪಂಚಾಯಿತಿ ಸದಸ್ಯನಂತೆ ಜನ ಸಂಪರ್ಕ ಸಾಧಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ದುಡಿಯುವ ಆ ವ್ಯಕ್ತಿಯನ್ನು ಪ್ರತಿನಿಧಿಯಾಗಿ ದೆಹಲಿಗೆ ಕಳುಹಿಸಿದರೆ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು. ಈ ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಅಭ್ಯರ್ಥಿ ಸಿಗಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಅಂತ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಅವರು ಸರ್ಕಾರಿ ನೌಕರಿಯಲ್ಲಿದ್ದರೆ ಹೊರತು ರಾಜಕಾರಣದಲ್ಲಿ ಇರಲಿಲ್ಲ. ಎಂದಾದರು ಜನರ ಸೇವೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಸುರೇಶ್ ಬೇಕೊ ಅಥವಾ ವೈಟ್ ಕಾಲರ್ ರಾಜಕಾರಣಿ ಮಂಜುನಾಥ್ ಬೇಕೊ ಎಂಬುದನ್ನು ಜನರು ತೀರ್ಮಾನ ಮಾಡಿ ಆಗಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಗಳು ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೆ: ಎಚ್ಡಿಕೆ ವ್ಯಂಗ್ಯ
ದೇವೇಗೌಡರ ಕುಟುಂಬವನ್ನು ಪ್ರಶ್ನಿಸಿ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಅನೇಕ ವರ್ಷಗಳಿಂದ ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸಿದೆ. ದೇವೇಗೌಡ ಮುಖ್ಯಮಂತ್ರಿಯಾಗಿ ಪ್ರಧಾನಿಯಾದರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೂ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿಲ್ಲ. ಇದನ್ನು ಜಿಲ್ಲೆಯ ಜನರು ಪ್ರಶ್ನೆ ಮಾಡಬೇಕು ಎಂದರು. ಬಿಜೆಪಿಯವರು 3 ವರ್ಷ ಅಧಿಕಾರದಲ್ಲಿದ್ದಾಗ ರಾಮನಗರ ಜಿಲ್ಲೆಗೆ ಏನು ಕೊಡುಗೆ ನೀಡಲಿಲ್ಲ. ಈಗಿನ ಶಾಸಕ ಇಕ್ಬಾಲ್ ಹುಸೇನ್ ಬಂದ ಮೇಲೆ ರಾಮನಗರ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದೆ. ನನ್ನ ಬಳಿ ವಿಶೇಷ ಅನುದಾನ ಕೇಳಿಕೊಂಡು ಅನೇಕ ಬಾರಿ ಬಂದಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಸಂಸ್ಕೃತಿ ಏನು ಸಾಬೀತು: ಪ್ರಲ್ಹಾದ್ ಜೋಶಿ
ಈಗಾಗಲೇ ರಾಮನಗರ ಟೌನ್ ಗೆ 125 ಕೋಟಿ ಕೊಟ್ಟಿದ್ದೇವೆ. ಚುನಾವಣೆ ಮುಗಿದ ಮೇಲೆ ಇನ್ನೂ ಅನುದಾನ ಕೊಡುವ ಭರವಸೆ ಕೊಟಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ, ರಾಮಲಿಂಗಾರೆಡ್ಡಿ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ , ಶಾಸಕರಾದ ಕೊತ್ನೂರು ಮಂಜುನಾಥ್, ಇಕ್ಬಾಲ್ ಹುಸೇನ್ , ಬಾಲಕೃಷ್ಣ, ಬಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಸುಧಾಮ ದಾಸ್, ಪುಟ್ಟಣ್ಣ, ಎಸ್ .ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆ.ರಾಜು ಇತರರು ಉಪಸ್ಥಿತರಿದ್ದರು.