Lok Sabha Election 2024: ಕಾಂಗ್ರೆಸ್‌ ಕೋಲಾರ ಸರ್ಕಸ್‌: ಮನವೊಲಿಕೆಗೆ ಸಿಎಂ, ಡಿಸಿಎಂ ಹರಸಾಹಸ

By Kannadaprabha NewsFirst Published Mar 29, 2024, 5:05 AM IST
Highlights

ಕೋಲಾರ ಕಾಂಗ್ರೆಸ್‌ ಕಗ್ಗಂಟು ಬಿಡಿಸಲು ರಾಜ್ಯ ನಾಯಕತ್ವ ಗುರುವಾರ ಹರಸಾಹಸ ನಡೆಸಿದರೂ ಪೈಪೋಟಿಗೆ ಬಿದ್ದಿರುವ ಸ್ಪೀಕರ್‌ ರಮೇಶ್ ಕುಮಾರ್‌ ಬಣ ಹಾಗೂ ಮುನಿಯಪ್ಪ ಕುಟುಂಬದ ನಡುವೆ ಹೊಂದಾಣಿಕೆ ಮೂಡಿಸಲು ಸಾಧ್ಯವಾಗಲಿಲ್ಲ. 

ಬೆಂಗಳೂರು (ಮಾ.29): ಕೋಲಾರ ಕಾಂಗ್ರೆಸ್‌ ಕಗ್ಗಂಟು ಬಿಡಿಸಲು ರಾಜ್ಯ ನಾಯಕತ್ವ ಗುರುವಾರ ಹರಸಾಹಸ ನಡೆಸಿದರೂ ಪೈಪೋಟಿಗೆ ಬಿದ್ದಿರುವ ಸ್ಪೀಕರ್‌ ರಮೇಶ್ ಕುಮಾರ್‌ ಬಣ ಹಾಗೂ ಮುನಿಯಪ್ಪ ಕುಟುಂಬದ ನಡುವೆ ಹೊಂದಾಣಿಕೆ ಮೂಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾಯಕತ್ವವು, ಈ ಎರಡೂ ಬಣಗಳು ಸೂಚಿಸುತ್ತಿರುವ ಅಭ್ಯರ್ಥಿಗಳಿಗೆ ಕೊಕ್ ನೀಡಿ, ದಲಿತ ಎಡಗೈ ಸಮುದಾಯಕ್ಕೆ ಸೇರಿದ ನ್ಯೂಟ್ರಲ್‌ ಅಭ್ಯರ್ಥಿ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡುವ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಈ ನ್ಯೂಟ್ರಲ್‌ ಅಭ್ಯರ್ಥಿ- ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಮಾಜಿ ಮೇಯರ್‌ ವಿಜಯಕುಮಾರ್‌ ಅವರ ಮಗ ಗೌತಮ್‌ ಎಂದು ಹೇಳಲಾಗುತ್ತಿದೆ. ಹೀಗೆ ರಾಜ್ಯ ನಾಯಕತ್ವ ರಮೇಶ್‌ಕುಮಾರ್‌ ಬಣ ಸೂಚಿಸುತ್ತಿರುವ ಎಲ್.ಹನುಮಂತಯ್ಯ ಹಾಗೂ ಮುನಿಯಪ್ಪ ಅವರು ಸೂಚಿಸುತ್ತಿರುವ ಚಿಕ್ಕಪೆದ್ದಣ್ಣ ಅವರಿಗೆ ಪರ್ಯಾಯವಾಗಿ ಗೌತಮ್‌ ಹೆಸರು ಸೇರಿದಂತೆ ಮೂರು ಮಂದಿ ನ್ಯೂಟ್ರಲ್ ಹೆಸರುಗಳನ್ನು ಹೈಕಮಾಂಡ್‌ಗೆ ಸೂಚಿಸಲು ಮುಂದಾಗಿದೆ. ಹೀಗಾಗಿ ಅಂತಿಮ ತೀರ್ಮಾನ ಹೈಕಮಾಂಡ್ ಹೆಗಲೇರಿದೆ.

ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸಲಹೆ

ಗುರುವಾರ ಏನಾಯ್ತು?: ಕೋಲಾರ ಟಿಕೆಟ್‌ ಹೈಡ್ರಾಮಾ ಎರಡನೇ ದಿನವಾದ ಗುರುವಾರವೂ ಮಂದುವರೆಯಿತು. ಆಕಾಂಕ್ಷಿಯಾಗಿರುವ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್‌ ನೀಡಿದರೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದ ಐವರು ಶಾಸಕರು ಸೇರಿದಂತೆ ರಮೇಶ್‌ಕುಮಾರ್‌ ಬಣದ ನಾಯಕರು ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ಅವರ ಕುಟುಂಬದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಪ್ರತ್ಯೇಕ ಮಾತುಕತೆ ನಡೆಸಿದರು. ಈ ವೇಳೆ ರಮೇಶ್‌ಕುಮಾರ್‌ ಬಣದ ನಾಯಕರು ಸಚಿವ ಕೆ.ಎಚ್‌.ಮುನಿಯಪ್ಪ ಅವರ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದರು. 

ಅಲ್ಲದೆ, ಬುಧವಾರ ರಾಜೀನಾಮೆ ಪ್ರಹಸನ ನಡೆಸಿದ ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಯಾಚಿಸಿದರು. ಇದಾದ ನಂತರ ಮುನಿಯಪ್ಪ ಕುಟುಂಬದವರೊಂದಿಗೆ ರಾಜ್ಯ ನಾಯಕರು ಮಾತುಕತೆ ನಡೆಸಿತು. ಈ ವೇಳೆ ಶಾಸಕರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ತಮ್ಮ ಅಳಿಯನಿಗೆ ಟಿಕೆಟ್‌ ನೀಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಅಲ್ಲದೆ, ಎಐಸಿಸಿ ಅಧ್ಯಕ್ಷರು ತಮ್ಮ ಪರ ನಿರ್ಧಾರ ಕೈಗೊಂಡಿದ್ದಾರೆ. ಹೈಕಮಾಂಡ್‌ ತೀರ್ಮಾನದ ನಂತರವೂ ಹೀಗೆ ಪ್ರಹಸನ ನಡೆಸಿದ್ದು ಸರಿಯಲ್ಲ ಎಂದು ಮುನಿಯಪ್ಪ ಕುಟುಂಬದವರು ಅಸಮಾಧಾನ ತೋರ್ಪಡಿಸಿದರು ಎನ್ನಲಾಗಿದೆ. 

ಇದಕ್ಕೆ ರಾಜ್ಯ ನಾಯಕರು, ಅಭ್ಯರ್ಥಿ ಹೆಸರು ಅಂತಿಮಗೊಳಿಸುವಾಗ ಜಿಲ್ಲೆಯ ಶಾಸಕರು ಹಾಗೂ ಸಚಿವರ ಅಭಿಪ್ರಾಯ ಕೇಳಬೇಕು ಎಂದು ಹೈಕಮಾಂಡ್‌ ಹೇಳಿದೆ. ಆದರೆ, ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಚಿವರು ನಿಮ್ಮ ವಿರುದ್ಧ ಇದ್ದಾರೆ. ಅಳಿಯನಿಗೆ ಟಿಕೆಟ್ ಬೇಕು ಎಂದರೆ ಶಾಸಕರು ಹಾಗೂ ಸಚಿವರ ಮನವೊಲಿಸಿ ಎಂದು ನೇರವಾಗಿ ಮುನಿಯಪ್ಪಗೆ ತಿಳಿಸಿದರು ಎನ್ನಲಾಗಿದೆ. ಅಲ್ಲದೆ, ಉಭಯ ಬಣಗಳ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಲಾಗುವುದು. ಅಂತಿಮವಾಗಿ ಹೈಕಮಾಂಡ್‌ ಯಾವುದೇ ತೀರ್ಮಾನ ಕೈಗೊಂಡರೂ ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು ಎನ್ನಲಾಗಿದೆ.

ಅಸಮಾಧಾನಿತರಿಂದ ಕ್ಷಮೆಯಾಚನೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್‌ ಬಣದೊಂದಿಗೆ ಗುರುತಿಸಿಕೊಂಡಿರುವ ಸಚಿವ ಡಾ.ಎಂ.ಸಿ.ಸುಧಾಕರ್‌, ಶಾಸಕರಾದ ಕೆ.ವೈ.ನಂಜೇಗೌಡ, ವಿಧಾನಪರಿಷತ್‌ ಸದಸ್ಯರಾದ ನಸೀರ್‌ ಅಹಮದ್‌, ಅನಿಲ್‌ಕುಮಾರ್‌ ಅವರನ್ನು ಕರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಸುದೀರ್ಘ ಮಾತುಕತೆ ನಡೆಸಿದರು. ಶಾಸಕರ ವರ್ತನೆಯಿಂದ ಪಕ್ಷಕ್ಕೆ ಆಗಿರುವ ಮುಜುಗರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಈ ವೇಳೆ ತಮ್ಮ ಅಳಲು ತೋಡಿಕೊಂಡ ಶಾಸಕರು, ಕೆ.ಎಚ್.ಮುನಿಯಪ್ಪ ಅವರಿಂದ ನಮ್ಮ ಕ್ಷೇತ್ರಗಳಲ್ಲಿ ತೀವ್ರ ಕಿರುಕುಳ ಅನುಭವಿಸಿದ್ದೇವೆ. 

ಹೀಗಾಗಿ ಅವರ ಕುಟುಂಬದ ಸದಸ್ಯರಿಗೆ ಹೊರತುಪಡಿಸಿ ಬೇರೆ ಯಾರಿಗೇ ಟಿಕೆಟ್‌ ನೀಡಿದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ವೆಳೆ ಮುಳಬಾಗಿಲು ಪರಾಜಿತ ಅಭ್ಯರ್ಥಿ ಆದಿನಾರಾಯಣ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಸಹ ಹಾಜರಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಅಸಮಾಧಾನವನ್ನು ನೀವು ಹೊರಹಾಕಿರುವ ರೀತಿ ಸರಿಯಿಲ್ಲ. ನಿಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್‌ಗೆ ತಿಳಿಸಲಾಗುವುದು. ಅಂತಿಮವಾಗಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಮನವೊಲಿಸಿರುವುದಾಗಿ ತಿಳಿದುಬಂದಿದೆ. ಇದಾದ ನಂತರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅವರ ಪುತ್ರಿ ರೂಪಾ ಶಶಿಧರ್‌ ಅವರನ್ನು ಮುಖ್ಯಮಂತ್ರಿ ನಿವಾಸಕ್ಕೆ ಕರೆಸಿಕೊಳ್ಳಲಾಯಿತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೊಂದಿಗೆ ಮುನಿಯಪ್ಪ ಹಾಗೂ ರೂಪಾ ಸುದೀರ್ಘ ಚರ್ಚೆ ನಡೆಸಿದರು.

ಸಂಧಾನಸಭೆ ಯಶಸ್ವಿ-ಬೈರತಿ ಸುರೇಶ್: ಸಭೆ ಬಳಿಕ ಮಾತನಾಡಿದ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳು ಕೋಲಾರದ ಕಾಂಗ್ರೆಸ್‌ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಎಐಸಿಸಿ ಏನು ತಿರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧರಾಗಿರುವುದಾಗಿ ಶಾಸಕರು ಹೇಳಿದ್ದಾರೆ. ಕೋಲಾರ ಟಿಕೆಟ್‌ ಇನ್ನೂ ಯಾರಿಗೂ ಅಂತಿಮವಾಗಿಲ್ಲ. ಈಗಾಗಲೇ ಅಂತಿಮವಾಗಿದೆ ಎಂದು ಗೊಂದಲ ಉಂಟಾಗಿತ್ತು. ಹೀಗಾಗಿ ಸಮಸ್ಯೆಯಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಅಂತಿಮವಾಗಿ ಶಾಸಕರು ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಒಪ್ಪಿದ್ದಾರೆ ಎಂದರು.

ನಮ್ಮಿಂದ ಪಕ್ಷಕ್ಕೆ ಮುಜುಗರ ಆಗಿದೆ, ಸಚಿವ ಸುಧಾಕರ್‌: ಸಚಿವ ಎಂ.ಸಿ ಸುಧಾಕರ್ ಮಾತನಾಡಿ, ನಿನ್ನೆ ನಡೆದ ಘಟನೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಪಕ್ಷಕ್ಕೆ ನಮ್ಮ ಕೆಲಸದಿಂದ ಮುಜುಗರ ಆಗಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಮುಖ್ಯಮಂತ್ರಿಗಳು ತಮ್ಮ ಮೇಲೆ ವಿಶ್ವಾಸ ಇಡುವಂತೆ ತಿಳಿಸಿದ್ದಾರೆ. ಅಂತಿಮವಾಗಿ ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ನಿನ್ನೆ ಏನೇನಾಯ್ತು?
- ರಾಜೀನಾಮೆ ಬೆದರಿಕೆ ಹಾಕಿದ್ದ ರಮೇಶ್‌ ಕುಮಾರ್‌ ಬಣದೊಂದಿಗೆ ಸಿಎಂ, ಡಿಸಿಎಂ, ಪರಂ ಸಭೆ
- ಅಳಿಯನಿಗೆ ಟಿಕೆಟ್‌ ಕೇಳುತ್ತಿರುವ ಮುನಿಯಪ್ಪ, ಅವರ ಕುಟುಂಬದವರೊಂದಿಗೂ ಪ್ರತ್ಯೇಕ ಚರ್ಚೆ
- ಮುನಿಯಪ್ಪ ಕುಟುಂಬ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್‌ ಕೊಡಿ ಎಂದ ರಮೇಶ್‌ ಕುಮಾರ್‌ ಬಣ
- ಶಾಸಕರದ್ದು ನಾಟಕ, ಎಐಸಿಸಿ ಅಧ್ಯಕ್ಷರೇ ತೀರ್ಮಾನಿಸಿದ ಬಳಿಕ ಪ್ರಹಸನ ಸರಿಯಲ್ಲ ಎಂದ ಮುನಿಯಪ್ಪ
- ಉಭಯ ಬಣಗಳ ವಾದವನ್ನು ಹೈಕಮಾಂಡ್‌ಗೆ ತಿಳಿಸುತ್ತೇವೆ, ವರಿಷ್ಠರು ತೀರ್ಮಾನ ಒಪ್ಪಬೇಕು ಎಂದ ನಾಯಕರು
- ಇದಕ್ಕೆ ಎರಡೂ ಬಣಗಳಿಂದ ಸಮ್ಮತಿ. ವರಿಷ್ಠರ ಅಂಗಳಕ್ಕೆ ಈಗ ಚೆಂಡು

ನಾವು 20 ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ: ಸಿಎಂ ಸಿದ್ದರಾಮಯ್ಯ

ಹೈಕಮಾಂಡ್ ಏನು ತೀರ್ಮಾನ ತಗೊಂಡರೂ ಬದ್ಧವಾಗಿರುವುದಾಗಿ ಶಾಸಕರು ಹೇಳಿದ್ದಾರೆ. ನನ್ನ ಅಭಿಪ್ರಾಯ ಈಗಾಗಲೇ ಸಿಎಂ, ಡಿಸಿಎಂ ಅವರಿಗೆ ತಿಳಿಸಿದ್ದೇನೆ. ನಾನೂ ಕೂಡ ಹೈಕಮಾಂಡ್‌ ಏನೇ ತೀರ್ಮಾನ ತೆಗೆದುಕೊಂಡರೂ ಬದ್ಧನಾಗಿರುತ್ತೇನೆ.
- ಕೆ.ಎಚ್.ಮುನಿಯಪ್ಪ, ಸಚಿವ

click me!