ಗ್ಯಾರಂಟಿ ಭ್ರಮೆಯಲ್ಲಿ ಮುಳುಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯದ ಜನರ ನೆತ್ತಿ ಮೇಲೆ ಹೊರೆ ಹೊರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ.
ಚಿತ್ರದುರ್ಗ (ಏ.05): ಗ್ಯಾರಂಟಿ ಭ್ರಮೆಯಲ್ಲಿ ಮುಳುಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯದ ಜನರ ನೆತ್ತಿ ಮೇಲೆ ಹೊರೆ ಹೊರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 9 ತಿಂಗಳಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರ ಇದೆ. ಅನುದಾನ ಬಿಡುಗಡೆ ಬಗ್ಗೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಗೆ ಚುನಾವಣೆಯಲ್ಲಿಯೇ ತಕ್ಕ ಉತ್ತರ ನೀಡಿ ಅಂಕಿ ಅಂಶ ಬಿಡುಗಡೆ ಮಾಡುತ್ತೇವೆ ಎಂದರು.
ರಾಜ್ಯದಾದ್ಯಂತ ಬಿಜೆಪಿ ಹಾಗೂ ಮೋದಿಯವರ ಪರ ವಾತಾವರಣವಿದೆ ಎಂದು ಅವರು ಅಭಿಪ್ರಾಯಪಟ್ಟರು. ಹಾಸನ ಮೈಸೂರು ಸೇರಿದಂತೆ ಹಲವೆಡೆ ನಾಮಪತ್ರ ಸಲ್ಲಿಸಿ ಚಿತ್ರದುರ್ಗಕ್ಕೆ ಬಂದಿದ್ದು ರಾಜ್ಯದಲ್ಲಿ ವಾತಾವರಣ ಹೇಗಿದೆ ಎಂಬುದು ಗೊತ್ತಾಗಿದೆ. ರಾಜ್ಯದ ಭೀಕರ ಬರ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಾವ ಮುಖ ಇಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದಾರೋ ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ 850 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
undefined
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಹಕರಿಸಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ರೈತರು ಬಡವರ ಪಾಲಿಗೆ ಸತ್ತಂತೆ ಆಗಿದೆ. ಬರದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಸರ್ಕಾರ ಇಳಿದಿದೆ. ದಲಿತರ ಎಸ್ಸಿಪಿ, ಟಿಎಸ್ಪಿ 24 ಸಾವಿರ ಕೋಟಿ ವರ್ಗಾವಣೆ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನೆಡೆ ಆಗಿದ್ದರೂ ಈ ಬಾರಿ ಜನ ನಮ್ಮನ್ನ ಕೈ ಹಿಡಿಯುತ್ತಾರೆ. ದೇಶದ ಸುಭದ್ರತೆ ದೃಷ್ಟಿಯಿಂದ ಜನ ಬಿಜೆಪಿಗೆ ಮತ ಕೊಡುತ್ತಾರೆ. ನಾವು 28 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಲಿಕಾಪ್ಟರ್‌ಗಳ ತಪಾಸಣೆ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚಿತ್ರದುರ್ಗಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪ್ರಯಾಣಿಸಿದ ಹೆಲಿಕಾಪ್ಟರ್‌ನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ.ಕಾರ್ತಿಕ್ ಪರಿಶೀಲನೆ ನಡೆಸಿದರೆ, ಗೌತಮ್ ಅವರ ನಾಮಪತ್ರ ಸಲ್ಲಿಕೆಗಾಗಿ ಕೋಲಾರಕ್ಕೆ ತೆರಳಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ.
ಸಿದ್ದರಾಮಯ್ಯಗೆ ಸಿದ್ಧಾಂತಗಳೇ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಧ್ಯಾಹ್ನ 12.45ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಎಂ.ಕೆ. ಹಟ್ಟಿ ಎಸ್‌ಜೆಎಂ ಆಂಗ್ಲ ಮಾಧ್ಯಮ ಶಾಲಾ ಆವರಣದ ಹೆಲಿಪ್ಯಾಡ್‌ಗೆ ಆಗಮಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಧ್ಯಾಹ್ನ 1:30 ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಜೆಎಂಐಟಿ ಕ್ಯಾಂಪಸ್ ಆವರಣದ ಹೆಲಿಪ್ಯಾಡ್‌ಗೆ ಆಗಮಿಸಿದರು. ಇವರ ಹೆಲಿಕಾಪ್ಟರ್‌ಗಳನ್ನು ಶೋಧಿಸಲಾಯಿತು. ಈ ವೇಳೆ ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ, ಉಪ ತಹಶೀಲ್ದಾರ್ ನಾಗರಾಜ್ ಇದ್ದರು.