ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಗೆಲ್ಲಿಸುವ ಮೂಲಕ ನನ್ನ ಕಡೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬುತ್ತೇನೆ. ಅಲ್ಲದೆ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳನ್ನು ಬಲಪಡಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಆಲೂರು (ಏ.05): ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಗೆಲ್ಲಿಸುವ ಮೂಲಕ ನನ್ನ ಕಡೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬುತ್ತೇನೆ. ಅಲ್ಲದೆ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳನ್ನು ಬಲಪಡಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಮೊದಲು ನನ್ನ ಗರಡಿಯಲ್ಲಿ ಪಳಗಿರುವುದನ್ನು ಮರೆತು ಹಾಸನ ಜಿಲ್ಲೆಗೆ ಮೂರು ಬಾರಿ ಬೇಟಿ ನೀಡಿ ಪ್ರಜ್ವಲ್ ರೇವಣ್ಣ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಕನಸು ಕಾಣುತ್ತಿದ್ದಾರೆ. ಜೆಡಿಎಸ್ ಪಕ್ಷ ಹುಟ್ಟಿನಿಂದಲೂ ರೈತರ ಬೆನ್ನೆಲುಬು ಆಗಿದ್ದು ರೈತಪರ ಯೋಜನೆಗಳು, ನೀರಾವರಿ ವ್ಯವಸ್ಥೆ, ಸಾಲಮನ್ನಾ ರೀತಿಯ ಅಭೂತಪೂರ್ವ ಸಾಧನೆಗಳನ್ನು ಜಿಲ್ಲೆಯಲ್ಲಿ ಮಾಡಿರುವುದನ್ನು ಮರೆತಿಲ್ಲ. ಈ ಬಾರಿ ಪ್ರಜ್ವಲ್ ಗೆಲ್ಲಿಸುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಲಾಗುವುದು’ ಎಂದು ಟೀಕಿಸಿದರು.
ನನ್ನ ರಾಜಕೀಯಕ್ಕೆ ಹಳ್ಳಿಮೈಸೂರೇ ಕಾರಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೀಡುತ್ತಿರುವ ಐದು ಗ್ಯಾರಂಟಿಗಳು ಅಪೂರ್ಣವಾಗಿದ್ದು ಜನರನ್ನು ತಲುಪಿರುವುದು ಸಂದೇಹವಾಗಿದೆ. ಕೆಲವು ಮನೆಗಳಲ್ಲಿ ಇನ್ನೂ ವಿದ್ಯುತ್ ಶುಲ್ಕ ಪಾವತಿಸುತ್ತಿದ್ದಾರೆ. ಯುವನಿಧಿ ಪದವಿಧರರಿಗೆ ದೊರಕಿಯೇ ಇಲ್ಲ. ಬಂಗಾರಪ್ಪನವರ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬರಗಾಲ ತಲೆದೋರುತ್ತದೆ’ ಎಂದು ವ್ಯಂಗ್ಯವಾಡಿದರು.
ರೈತರ ಹೊಲದಲ್ಲಿ ಬೆಳೆಯ ಮದ್ಯದಲ್ಲಿ ಕಾಂಗ್ರೆಸ್ ಗಿಡ ಬೆಳೆದರೆ ಹೇಗೆ ಕಿತ್ತು ಹಾಕುತ್ತೇವೆಯೋ ಹಾಗೇಯೇ ರಾಷ್ಟ್ರದಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕಬೇಕು. ಜೆಡಿಎಸ್ ಅಧಿಕಾರ ಅವಧಿಯಲ್ಲಿ ಹಾಸನ-ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ ಆಲೂರು ಸಂಪರ್ಕಿಸುವ ಮೇಲ್ಸೇತುವೆ, ಸರ್ಕಾರಿ ಕಟ್ಟಡಗಳು, ಆಲೂರಿನಲ್ಲಿ ರೈಲು ನಿಲುಗಡೆ, 68 ಕಾಡಾನೆ ಸ್ಥಳಾಂತರ, ಗ್ರಾಮೀಣ ಭಾಗದಲ್ಲಿ ಹಾಲಿನ ಡೈರಿಗಳ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ನೀಡಿದೆ. ಈ ಬಾರಿ ಗೆದ್ದರೆ ಕಾಡಾನೆ ಶಾಶ್ವತ ಪರಿಹಾರ ಕೈಗಾರಿಕ ಅಭಿವೃದ್ಧಿ ಕೃಷಿ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ಸಿಎಂ ಸಿದ್ದರಾಮಯ್ಯ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಆಲೂರು ತಾಲೂಕು ಮೊದಲಿನಿಂದಲೂ ಜೆಡಿಎಸ್ ಪಕ್ಷಕ್ಕೆ ಪೂರಕವಾಗಿದ್ದು ಜಿಲ್ಲೆ ಹಾಗೂ ದೇಶದ ರಕ್ಷಣೆ ಹಿತದೃಷ್ಟಿಯಿಂದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸೊಣ ಎಂದರು. ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ,ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ನಂಜೇಗೌಡ, ಕಬ್ಬಿನಹಳ್ಳಿ ಜಗದೀಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ನಟರಾಜ್, ನಾಕಲಗೋಡು, ಸಿ.ವಿ.ನಿಂಗ ರಾಜ್, ಕೆ.ಎನ್.ಕಾಂತರಾಜ್, ಹಿಂದುಳಿದ ವರ್ಗದ ಜಿಲ್ಲಾದ್ಯಕ್ಷ ಶಂಕರಚಾರ್ಯು, ಎಂ.ಬಿ.ವಿಜಯಕಾಂತ್, ಜೆಡಿಎಸ್ ಮುಖಂಡರಾದ ಕದಾಳು ರಾಜಪ್ಪಗೌಡ, ಎಚ್.ಬಿ.ಧರ್ಮರಾಜ್, ತನುಗೌಡ, ದೊರೆಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಣಿ, ನಿಂಗರಾಜು, ಗೇಕರವಳ್ಳಿ ಬಸವರಾಜ್ ಹಾಗೂ ಕಾರ್ಯಕರ್ತರು ಇದ್ದರು.