ನವದೆಹಲಿ: ಲೋಕಸಭಾ ಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ್ದು, ಚಂಡಿಗಢದ ಹಾಲಿ ಸಂಸದೆ ನಟಿ ಕಿರಣ್ ಖೇರ್ ಅವರಿಗೆ ಟಿಕೆಟ್ ಕೈ ತಪ್ಪಿದೆ ಅವರ ಬದಲಿಗೆ ಸಂಜಯ್ ಟಂಡನ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪತ್ನಿ ಕಣಕ್ಕಿಳಿದಿರುವ ಮೈನ್ಪುರಿ ಲೋಕಸಭಾ ಕ್ಷೇತ್ರದಲ್ಲಿ ಜೈವೀರ್ ಸಿಂಗ್ ಠಾಕೂರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮೊದಲ ಹಂತದ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಉರಿ ಬಿಸಿಲಿನ ಮಧ್ಯೆ ರಾಜಕೀಯ ನಾಯಕರು ಮತ ಪ್ರಚಾರದ ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ತನ್ನ ಅಭ್ಯರ್ಥಿಗಳ ಮತ್ತೊಂದು ಲಿಸ್ಟ್ ಬಿಡುಗಡೆ ಮಾಡಿದ್ದು, ಯಾರಿಗೆ ಟಿಕೆಟ್ ಸಿಕ್ತು, ಟಿಕೆಟ್ ಯಾರ ಕೈ ತಪ್ಪಿತು ಎಂಬ ಡಿಟೇಲ್ ಇಲ್ಲಿದೆ. 9 ಅಭ್ಯರ್ಥಿಗಳಿರುವ ಮತ್ತೊಂದು ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ.
ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ.. ಕೇಂದ್ರದ ವಿರುದ್ಧ ತೊಡೆ ತಟ್ಟಿದ ಸಚಿವರಿಗೆ ಶಾಕ್ ಕೊಡಲು ತಂತ್ರ!
ಮೊದಲನೇಯದಾಗಿ ಚಂಡಿಗಢದ ಹಾಲಿ ಸಂಸದೆ ನಟಿ ಕಿರಣ್ ಖೇರ್ ಅವರಿಗೆ ಟಿಕೆಟ್ ತಪ್ಪಿದೆ. ಅವರ ಬದಲಾಗಿ ಅಲ್ಲಿ ಸಂಜಯ್ ಟಂಡನ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆಯೇ ಉತ್ತರ ಪ್ರದೇಶದ ಮೈನ್ಪುರಿ ಕ್ಷೇತ್ರದಿಂದ ಜೈ ವೀರ್ ಸಿಂಗ್ ಠಾಕೂರ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಇಲ್ಲಿ ಸಮಾಜವಾದಿ ಪಕ್ಷವೂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಈ ಕ್ಷೇತ್ರ ಕುತೂಹಲ ಕೆರಳಿಸಿದೆ. 3ನೇಯದಾಗಿ ಪಶ್ಚಿಮ ಬಂಗಾಳದ ಅಸಂಸೋಲ್ ಕ್ಷೇತ್ರದಿಂದ ಎಸ್ ಎಸ್ ಅಹ್ಲುವಾಲಿಯಾ ಅವರಿಗೆ ಟಿಕೆಟ್ ನೀಡಲಾಗಿದೆ. ಅಹ್ಲುವಾಲಿಯಾ ಅವರು ಪ್ರಸ್ತುತ ಪಶ್ಚಿಮ ಬಂಗಾಳದ ಬರ್ಧಮಾನ್ ದುರ್ಗಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಹಾಗೆಯೇ ಫುಲ್‌ಪುರ್ ಕ್ಷೇತ್ರದಿಂದ ಪ್ರವೀಣ್ ಪಟೇಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆಯೇ ಅಲಹಾಬಾದ್ ಪ್ರಯಾಗ್ ರಾಜ್‌ನಿಂದ ನೀರಜ್ ತ್ರಿಪಾಠಿ ಅವರಿಗೆ ಟಿಕೆಟ್ ನೀಡಲಾಗಿದೆ. ಅಲಹಾಬಾದ್‌ನಲ್ಲಿ ಹಾಲಿ ಸಂಸದ ಡಾಕ್ಟರ್ ರೀಟಾ ಬಹುಗುಣ ಜೋಷಿ ಅವರಿಗೆ ಟಿಕೆಟ್ ಮಿಸ್ ಆಗಿದ್ದು, ಪ್ರಸ್ತುತ ಇಲ್ಲಿ ಟಿಕೆಟ್ ಸಿಕ್ಕಿರುವ ನೀರಜ್ ತ್ರಿಪಾಠಿ ಮಾಜಿ ಸ್ಪೀಕರ್ ಕೇಸ್ರೀನಾಥ್ ತ್ರಿಪಾಠಿ ಅವರ ಪುತ್ರನಾಗಿದ್ದಾರೆ. ಕೌಸುಂಬಿಯಿಂದ ವಿನೋದ್ ಸೋನ್ಕರ್ ಅವರಿಗೆ ಟಿಕೆಟ್ ಸಿಕ್ಕಿದೆ. ಇಲ್ಲಿ ಇವರು ಮೂರನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಅವರಿಗೆ ಬಲ್ಲಿಯಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದ್ದು, ಇಲ್ಲಿ ಹಾಲಿ ಸಂಸದ ವಿರೇಂದ್ರ ಸಿಂಗ್ ಮಸ್ತ್ ಅವರಿಗೆ ಟಿಕೆಟ್ ಕೈ ತಪ್ಪಿದೆ.
Lok Sabha Election 2024: ಜಾತಿ ಆಧಾರದ ಮೇಲೆ ಚುನಾವಣೆ ನಡೆಯಲ್ಲ: ಪ್ರಲ್ಹಾದ್ ಜೋಶಿ
ಬಿಜೆಪಿ ತನ್ನ 10ನೇ ಪಟ್ಟಿಯಲ್ಲಿ ಒಟ್ಟು 9 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ 7 ಉತ್ತರ ಪ್ರದೇಶಕ್ಕೆ ಸೇರಿದ ಕ್ಷೇತ್ರಗಳಾಗಿದ್ದರೆ ಪಶ್ಚಿಮ ಬಂಗಾಳ ಹಾಗೂ ಚಂಡಿಗಢದ ತಲಾ ಒಂದೊಂದು ಕ್ಷೇತ್ರಗಳಿವೆ. ಫುಲ್‌ಪುರ್ ಕ್ಷೇತ್ರದಲ್ಲಿಯೂ ಹಾಲಿ ಸಂಸದ ಪ್ರವೀಣ್ ಪಟೇಲ್ ಅವರಿಗೆ ಟಿಕೆಟ್ ಮಿಸ್ ಆಗಿದೆ. ಈ ಕ್ಷೇತ್ರದಲ್ಲಿ ಮಚ್ಲಿಸ್‌ಪುರದ ಹಾಲಿ ಸಂಸದ ಬಿಪಿ ಸರೋಜ್ ಅವರಿಗೆ ಟಿಕೆಟ್ ಸಿಕ್ಕಿದೆ. ಗಾಜಿಪುರದಲ್ಲಿ ಬಿಜೆಪಿ ಪರಾಸ್ ನಾಥ್ ರೈ ಅವರನ್ನು ಕಣಕ್ಕಿಳಿಸಿದ್ದು, ರೈ ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿರುವ ಮನೋಜ್ ಸಿನ್ಹಾ ಅವರ ಆಪ್ತರಾಗಿದ್ದಾರೆ. ಇಲ್ಲಿ ಸಮಾಜವಾದಿ ಪಕ್ಷದ ಅಫ್ಜಲ್ ಅನ್ಸಾರಿ ಇವರಿಗೆ ಸ್ಪರ್ಧೆ ನೀಡಲಿದ್ದಾರೆ.
ಎಪ್ರಿಲ್ 19ರಿಂದ ಲೋಕಸಭಾ ಚುನಾವಣೆ ಆರಂಭವಾಗಲಿದ್ದು, ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. 2ನೇ ಹಂತದ ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ ಹಾಗೆಯೇ ಮೇ 7 ರಂದು 3ನೇ ಹಂತದ ಚುನಾವಣೆ ಹಾಗೂ ಮೇ 13 ರಂದು 4ನೇ ಹಂತ ಮೇ 20 ರಂದು 5ನೇ ಹಂತ ಮೇ 25 ರಂದು 6ನೇ ಹಂತ ಹಾಗೂ ಜೂನ್ 1 ರಂದು ಕೊನೆ ಹಂತದ ಚುನಾವಣೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.