ನಾವು ಸ್ಥಳೀಯ ನಾಯಕರು ಹಾಗೂ ಮಾಜಿ, ಹಾಲಿ ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಅಭ್ಯರ್ಥಿ ಯಾರು ಎಂದು ಮೇಲಿನ ನಮ್ಮ ನಮ್ಮ ನಾಯಕರ ಗಮನಕ್ಕೆ ತರಲಾಗುವುದು ಎಂದ ಸಚಿವ ಹೆಚ್.ಸಿ.ಮಹದೇವಪ್ಪ
ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಡಿ.16): ಚುನಾವಣೆಗಳು ಸಮೀಪಿಸುತ್ತಿದ್ದಂತೆ ನಾಯಕರುಗಳು ಟಿಕೆಟ್ ಗಾಗಿ ಲಾಭಿ ನಡೆಸೋದು ಸರ್ವೆ ಸಾಮಾನ್ಯ. ಆದ್ರೀಗ ಎಲ್ಲರ ಚಿತ್ತ ಲೋಕಸಭೆ ಚುನಾವಣೆಯತ್ತ ಇದ್ದು, ತನ್ನ ಬೆಂಬಲಿಗರೊಂದಿಗೆ ಆಗಮಿಸಿ ನಾ ಮುಂದು ತಾ ಮುಂದು ಎಂದು ಘೋಷಣೆ ಕೂಗುತ್ತಾ ಟಿಕೆಟ್ ವೀಕ್ಷಕರ ಎದುರು ತಮ್ಮ ಶಕ್ತಿ ಪ್ರದರ್ಶನ ಮಾಡಿದ ಘಟನೆ ಇಂದು ಕೋಟೆನಾಡಿನಲ್ಲಿ ನಡೆಯಿತು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ....,
undefined
ಹೀಗೆ ತಮ್ಮ ತಮ್ಮ ನಾಯಕರನ್ನು ಹೆಗಲ ಮೇಲೆ ಹೊತ್ತುಕೊಂಡು ಕಾಂಗ್ರೆಸ್ ಕಚೇರಿಯತ್ತ ಆಗಮಿಸ್ತಿರೋ ಜನಸಮೂಹ. ಮತ್ತೊಂದೆಡೆ ಜನರನ್ನು ಸಮಾಧಾನ ಪಡಿಸೋದ್ರಲ್ಲಿಯೇ ಸುಸ್ತಾದ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಸಿ ಮಹದೇವಪ್ಪ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿ ಮುಂಭಾಗ.
ಚಿತ್ರದುರ್ಗ: ಕೃಷ್ಣನ ಹೆಸರಲ್ಲಿ ಸರ್ಕಲ್ ನಿರ್ಮಿಸಲು ಯಾದವಾನಂದ ಸ್ವಾಮೀಜಿ ಆಗ್ರಹ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನಾ ಸಭೆ ನಡೆಸಲು ಕೆಪಿಸಿಸಿ ಸೂಚನೆ ಮೇರೆಗೆ ಇಂದು ಸಮಾಜಕಲ್ಯಾಣ ಇಲಾಖೆ ಸಚಿವ ಮಹಾದೇವಪ್ಪ ಕೋಟೆ ನಾಡಿಗೆ ಆಗಮಿಸಿದ್ದರು. ಸಚಿವರು ಕಾಂಗ್ರೆಸ್ ಕಚೇರಿಗೆ ಆಗಮಿಸುವ ಮುನ್ನವೇ ಲೋಕ ಚುನಾವಣೆಯ ಕೈ ಆಕಾಂಕ್ಷಿಗಳ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಎಲ್ಲರೂ ಕೂಡ ತಮ್ಮ ಅಭಿಮಾನಿಗಳೊಂದಿಗೆ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ರು. ಕೆಲ ಹೊತ್ತು ಕಾಂಗ್ರೆಸ್ ಕಚೇರಿ ಮುಂಭಾಗ ಕೈ ಅಕಾಂಕ್ಷಿ ಗಳಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಮಾಧಾನವಾಗಿ ಕಚೇರಿ ಮುಂಭಾಗ ಸಭೆ ಆರಂಭಿಸಿದ ಸಚಿವರು ಎಲ್ಲಾ ಆಕಾಂಕ್ಷಿಗಳ ಅಭಿಪ್ರಾಯ ಪಡೆದು ಬಳಿಕ ನಾನು ಸಿಎಂ ಹಾಗೂ ಪಕ್ಷದ ಅಧ್ಯಕ್ಷರಿಗೆ ಮಾಹಿತಿ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ: ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ
ಇನ್ನೂ ಈ ವೇಳೆ ಎಲ್ಲಾ ಆಕಾಂಕ್ಷಿಗಳ ಪೈಕಿ ಎಲ್ಲರ ಗಮನ ಸೆಳೆದಿದ್ದು ಸ್ಥಳೀಯ ಅಭ್ಯರ್ಥಿ ಕೂಗು. ಅದ್ರಲ್ಲೂ ಕಳೆದೊಂದು ತಿಂಗಳಿಂದಲೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಅಭಿಯಾನ ಶುರು ಮಾಡಿರುವ ಜೆ.ಜೆ ಹಟ್ಟಿ ತಿಪ್ಪೇಸ್ವಾಮಿ ಅವರ ಅಬ್ಬರ ಮಾತ್ರ ಇಂದು ವೀಕ್ಷಕರ ಮುಂದೆ ತುಸು ಜೋರಾಗಿತ್ತು. ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿ ಆಗಮಿಸಿದ ಅವರಿಗೆ ಜನರು ಸ್ಥಳೀಯ ಅಭ್ಯರ್ಥಿ ಗೆ ಟಿಕೆಟ್ ನೀಡಬೇಕು ಎಂದು ಘೋಷ ವಾಕ್ಯ ಕೂಗಿದರು. ಬಳಿಕ ಮಾದ್ಯಮಗಳಿಗೆ ಮಾತನಾಡಿದ ವೀಕ್ಷಕರಾದ ಸಚಿವ ಮಹದೇವಪ್ಪ ಇಂದು ಸುಮಾರು ೨೨ ಮಂದಿ ಆಕಾಂಕ್ಷಿಗಳು ನಾವು ಅಭ್ಯರ್ಥಿಗಳೆಂದು ಮುಂದೆ ಬಂದಿದ್ದಾರೆ. ಈ ಕುರಿತು ನಾವು ಸ್ಥಳೀಯ ನಾಯಕರು ಹಾಗೂ ಮಾಜಿ, ಹಾಲಿ ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಅಭ್ಯರ್ಥಿ ಯಾರು ಎಂದು ಮೇಲಿನ ನಮ್ಮ ನಮ್ಮ ನಾಯಕರ ಗಮನಕ್ಕೆ ತರಲಾಗುವುದು ಸಚಿವ ಹೆಚ್.ಸಿ.ಮಹದೇವಪ್ಪ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಇಂದು ಲೋಕ ಟಿಕೆಟ್ ಗಾಗಿ ನಡೆದ ಆಕಾಂಕ್ಷಿಗಳ ಬಲಾಬಲ ಪ್ರದರ್ಶನ ಇಕೆಟ್ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದನೋಡಬೇಕಿದೆ.