ಇನ್ನು 3-4 ದಿನದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಪಟ್ಟಿ: ಡಿಕೆಶಿ

By Kannadaprabha News  |  First Published Nov 4, 2023, 5:23 AM IST

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಸಿದ್ಧತೆ ನಡೆಸಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 


ಹುಬ್ಬಳ್ಳಿ (ನ.04): ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಸಿದ್ಧತೆ ನಡೆಸಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈಗಾಗಲೇ ಎಲ್ಲ ಲೋಕಸಭಾ ಕ್ಷೇತ್ರಗಳಿಗೂ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಶೇ.75ರಷ್ಟು ಕ್ಷೇತ್ರಗಳಲ್ಲಿ ವೀಕ್ಷಕರು ಕಾರ್ಯಕರ್ತರನ್ನು ಭೇಟಿ ಆಗಿ ಚರ್ಚೆ ನಡೆಸಿ ಅಭ್ಯರ್ಥಿಗಳ ವರದಿಯನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಆದರೆ ವರದಿ ಇನ್ನೂ ಕೆಪಿಸಿಸಿಗೆ ತಲುಪಿಲ್ಲವಷ್ಟೆ. ವರಿಷ್ಠರು ಕೆಲವು ಸಲಹೆಗಳನ್ನು ನೀಡಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಬಿಜೆಪಿಯಿಂದ ಸಮಾಜ ಒಡೆಯುವ ಯೋಜನೆ: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎಲ್ಲ ಕಾಲದಲ್ಲೂ ದೇಶದ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಬಿಜೆಪಿಯವರು ಸಮಾಜ ಒಡೆಯುವ ಯೋಜನೆಗಳನ್ನಷ್ಟೇ ಕೊಟ್ಟಿದ್ದು, ಜನರ ಭಾವನೆ ಕೆರಳಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಟೀಕಿಸಿದರು. ಕಾಂಗ್ರೆಸ್ ಬದುಕಿನ ಆಧಾರದ ಮೇಲೆ ರಾಜಕೀಯ ಮಾಡಿದರೆ, ಬಿಜೆಪಿ ಭಾವನೆಗಳ ಮೇಲೆ ಮಾಡುತ್ತದೆ. ಇಂದಿರಾ ಗಾಂಧಿ ಅವರು ಜನರ ಬದುಕಿಗೆ ನೆರವಾಗುವ ಯೋಜನೆಗಳನ್ನು ನೀಡಿದ ಮಹಾನ್ ಶಕ್ತಿ. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಬಡವರಿಗೆ ಸಾಲ ಮತ್ತು ಹಣ ವ್ಯವಹಾರವನ್ನು ಸುಲಭ ಮಾಡಿದ್ದು ಇಂದಿರಾಗಾಂಧಿ. 

Tap to resize

Latest Videos

ಬಿಜೆಪಿಯವರದ್ದು ತಲೆಬುಡವಿಲ್ಲದ ಕಾನೂನುಗಳು: ಡಿಕೆಶಿ ವಾಗ್ದಾಳಿ

ಸ್ವಾತಂತ್ರ್ಯ ನಂತರ ನೆಹರು ಅವರು ತಮ್ಮ ಆಸ್ತಿಯಲ್ಲಿ ಮುಕ್ಕಾಲು ಭಾಗವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದರು. ಆದರೆ ಬಿಜೆಪಿಯವರು ಸಮಾಜ ಒಡೆಯುವ ಯೋಜನೆಗಳನ್ನು ಕೊಟ್ಟಿದ್ದಾರೆ. ತಮ್ಮ ಸ್ವಂತ ಹಣದಿಂದ ದೇಶಕ್ಕೆ 60/40 ಅಳತೆಯ ಒಂದೇ ಒಂದು ನಿವೇಶನವನ್ನೂ ನೀಡಿಲ್ಲ ಎಂದು ಹೇಳಿದರು. ನಾವು ಸಮಾಜದ ಎಲ್ಲ ವರ್ಗದವರನ್ನು ಕೂಡಿಸಿ ಹೊಲಿಯುತ್ತೇವೆ, ಬಿಜೆಪಿಯವರು ಕತ್ತರಿಸುತ್ತಾರೆ. ಬಿಜೆಪಿಯವರದ್ದು ತಲೆಬುಡವಿಲ್ಲದ ಕಾನೂನುಗಳು, ನಾವು ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಒಕ್ಕೂಟಕ್ಕೆ ‘ಇಂಡಿಯಾʼ ಎಂದು ಹೆಸರಿಟ್ಟ ತಕ್ಷಣ ಇಂಡಿಯಾ ಎನ್ನುವ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವೀಸ್ ಸೇರಿದಂತೆ ನೋಟಿನಲ್ಲಿಯೂ ಹೆಸರು ಬದಲಾಯಿಸಲು ಬಿಜೆಪಿ ಹೊರಟಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಸಿಎಂ ಬದಲಾವಣೆ ಅನಿವಾರ್ಯವಾದರೆ ಡಿಕೆಶಿಗೆ ಬೆಂಬಲ: ಶಾಸಕ ಕೆ.ಎಂ.ಉದಯ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳು ಅಧಿಕಾರಕ್ಕೆ ಬಂದಂತೆ, ಎಲ್ಲರಿಗೂ ನಾವು ಅಧಿಕಾರ ನೀಡದೆ ಇರಬಹುದು. ಆದರೆ ಆರ್ಥಿಕ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ನೀಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳಾ ಸಬಲೀಕರಣ ಮಾಡಲು ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ ಮಾಡಲು ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದೆವು. ಇದರಿಂದ 1.10 ಕೋಟಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗಿದೆ. ದಸರಾದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಉಚಿತ ಬಸ್ ಯೋಜನೆ ಕಾರಣಕ್ಕೆ ಕುಟುಂಬ ಸಮೇತರಾಗಿ ಬಂದಿದ್ದರು. ಇದರಿಂದ ಹಣದ ಚಲಾವಣೆ ಹೆಚ್ಚು ನಡೆಯುತ್ತಿದೆ ಎಂದು ಹೇಳಿದರು.

click me!