
ಮೈಸೂರು(ನ.04): ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಇದೆ. ರೈತರ ಆತ್ಮಹತ್ಯೆಗೆ ಲೆಕ್ಕ ಸಿಕ್ತಾ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಇದೆ. ಒಬ್ಬನೇ ಒಬ್ಬ ಉಸ್ತುವಾರಿ ಸಚಿವ ರೈತರ ಸಮಸ್ಯೆ ಕೇಳಿಲ್ಲ. ಮುಖ್ಯಮಂತ್ರಿ, ಉಪಮುಖ್ಯಂತಿಗಳಂತೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಡಿದಾಡುತ್ತಿದ್ದಾರೆ ಎಂದು ದೂರಿದರು.
ರೈತರ ಆತ್ಮಹತ್ಯೆ ಮಾಡಿಕೊಳ್ಳಲು ರಾಜ್ಯದಲ್ಲಿ ಈ ಸರ್ಕಾರ ತಂದಿದ್ದಾರೆ. ಇದುವರೆಗೂ ಬೆಳೆ ಪರಿಹಾರಕ್ಕಾಗಲಿ, ಬರ ಪರಿಹಾರಕ್ಕಾಗಲಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ನಿಮ್ಮ ನಾಯಕರಾದ ಸುರ್ಜೇವಾಲ, ವೇಣುಗೋಪಾಲ್ ಹೇಳಿದ ಮೇಲೂ ನಿಮ್ಮಿಷ್ಟದ ಹೇಳಿಕೆ ಕೊಡುತ್ತಿದ್ದೀರಾ. ಅಂದರೆ ನಿಮ್ಮಲ್ಲಿ ಶಿಸ್ತಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ, ಆಡಳಿತದ ಚುಕ್ಕಾಣಿ ಹಿಡಿಯುವ ಅಧಿಕಾರ ಇವರಿಗಿಲ್ಲ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ನೀಡಲು ಗ್ರಹಚಾರ ಕೆಟ್ಟಿದೆಯಾ?: ಈಶ್ವರಪ್ಪ
ಗ್ಯಾರಂಟಿಗಳಲ್ಲಿ ಬಸ್ ಮಾತ್ರ ಓಡಾಡ್ತಿದೆ. ಇನ್ಯಾವ ಗ್ಯಾರಂಟಿಯೂ ಯಶಸ್ವಿ ಆಗಿಲ್ಲ. ರಾಜ್ಯದ ಜನರಿಗೆ ಮೋಸ ಮಾಡಿ ಆಡಳಿತ ಮಾಡ್ತಿದ್ದೀರಾ. ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಹೋಗಿ. ಇದು ಕಾಂಗ್ರೆಸ್ ಸರ್ಕಾರ ಅಲ್ಲ ಇದು ಸಮ್ಮಿಶ್ರ ಸರ್ಕಾರ ಎಂದು ಅವರು ಆರೋಪಿಸಿದರು.
ಒಂದು ಕಡೆ ಸಿದ್ದರಾಮಯ್ಯ ಕಾಂತರಾಜು ವರದಿ ಜಾರಿಗೆ ತರ್ತೀವಿ ಅಂತಾರೆ. ಇನ್ನೊಂದು ಕಡೆ ಒಕ್ಕಲಿಗರ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್ ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಲ್ಲ ಅಂತಾರೆ. ಒಂದೇ ಪಕ್ಷದ ಸರ್ಕಾರದಲ್ಲಿ ಸಿಎಂ, ಡಿಸಿಎಂ ಬೇರೆ ಹೇಳಿಕೆ ಕೊಡ್ತಾರೆ. ಇದರಿಂದ ರಾಜ್ಯದ ಜನ ಯಾಕಾದ್ರೂ ಇವರಿಗೆ ವೋಟು ಕೊಟ್ಟೊ ಅಂತಿದ್ದಾರೆ ಎಂದು ಅವರು ಹೇಳಿದರು.
ಈಶ್ವರಪ್ಪ ಸೇರಿ 3 ಒಬಿಸಿ ನಾಯಕರಿಗೆ ದಿಲ್ಲಿ ಬುಲಾವ್: ಕಾರಣವೇನು?
ನಿಮ್ಮ ನಾಯಕ ಯಾರು?
ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಡೀ ದೇಶದಲ್ಲಿ ಯಾವುದೇ ವ್ಯಕ್ತಿ ಕೇಳಿದ್ರು ಮೋದಿ ಗೊತ್ತು. ವಿಶ್ವದ ಯಾರನ್ನೆ ಕೇಳಿದ್ರೂ ಈ ದೇಶದ ಪ್ರಧಾನಿ ಯಾರು ಅಂತಾ ಹೇಳ್ತಾರೆ. ನಿಮ್ಮ ನಾಯಕ ಯಾರು? ರಾಹುಲ್ ಗಾಂಧಿನಾ? ಲೀಡರ್ ಲೆಸ್ ಅಂತಾ ಹೇಳೋದು ಬಹಳ ಸುಲಭ. ರಾಜ್ಯದಲ್ಲಿ ನಿಮ್ಮ ಇಬ್ಬರು ಲೀಡರ್ ಗಳು ಕುಸ್ತಿ ಆಡ್ತಿದ್ದಾರೆ. ಇದನ್ನ ಲೀಡರ್ ಪಕ್ಷ ಅಂತಾ ಕರೆಯುತ್ತಿರಾ ಎಂದು ಪ್ರಶ್ನಿಸಿದರು.
ನಾವು ಹೆಮ್ಮೆಯಿಂದ ಹೇಳಿಕೊಳ್ತಿವಿ ನಮ್ಮ ನಾಯಕ ಮೋದಿ ಅಂತಾ. ಯಾವ ಹಳ್ಳಿಯಲ್ಲಿ ನಿಮ್ಮ ರಾಹುಲ್ ಗಾಂಧಿ ಹೆಸರೇಳುತ್ತಾರೆ? ಪ್ರಿಯಾಂಕ ಖರ್ಗೆಗೆ ಮಾನಮರ್ಯಾದೆ ಇದ್ದಿದ್ರೆ ಪ್ರಾರಂಭದಲ್ಲಿ ಸಿದ್ದರಾಮಯ್ಯ ಸಿಎಂ ಆಗಿರಲಿ ಅಂದವರು ಈಗ ನಾನೇ ಸಿಎಂ ಸಿಎಂ ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ಯಾವ ನ್ಯಾಯ. ಸಿದ್ದರಾಮಯ್ಯ ಸಿಎಂ ಅಂತಿದ್ದ ಸಚಿವ ರಾಜಣ್ಣ ನಿನ್ನೆ ಇದ್ದಕ್ಕಿದ್ದಂತೆ ಪರಮೇಶ್ವರ್ ಸಿಎಂ ಆಗಲಿ ಅಂದಿದ್ದಾರೆ. ಸಿದ್ದರಾಮಯ್ಯರನ್ನ ಕೈ ಬಿಟ್ಟರು. ಈಗ ಕಾಂಗ್ರೆಸ್ ಗೆ ಬಂದಿರುವ ದುಸ್ಥಿತಿ ಹಿಂದೆ ಯಾವ ಸರ್ಕಾರಕ್ಕೂ ಬಂದಿಲ್ಲ. ಹೀಗಾಗಿ ರಾಜೀನಾಮೆ ಕೊಟ್ಟು ಹೋಗಿ ಎಂದು ಅವರು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.