ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಈ ಮಾಸಾಂತ್ಯಕ್ಕೆ ಪ್ರಕಟ?

By Kannadaprabha NewsFirst Published Jul 18, 2021, 8:30 AM IST
Highlights
  • ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಪಿಸಿಸಿ ಪದಾಧಿಕಾರಿಗಳ ನೇಮಕ ಆದೇಶ 
  • ಈ ಮಾಸಾಂತ್ಯದ ವೇಳೆಗೆ ಹೊರ ಬೀಳುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು 

 ಬೆಂಗಳೂರು (ಜು.18):  ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಪಿಸಿಸಿ ಪದಾಧಿಕಾರಿಗಳ ನೇಮಕ ಆದೇಶ ಈ ಮಾಸಾಂತ್ಯದ ವೇಳೆಗೆ ಹೊರ ಬೀಳುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ.

ಕೆಪಿಸಿಸಿ ಪದಾಧಿಕಾರಿಗಳು, ಮಂಚೂಣಿ ಘಟಕಗಳ ಅಧ್ಯಕ್ಷರ ನೇಮಕ ಹಾಗೂ ಸುಮಾರು 16 ರಿಂದ 18 ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಂಗಳವಾರ ಚರ್ಚೆ ನಡೆಸಲಿದ್ದಾರೆ. ಈ ಸಭೆಯ ನಂತರ ಇತರ ರಾಜ್ಯ ನಾಯಕರ ಅಭಿಪ್ರಾಯ ಪಡೆದು ಹೈಕಮಾಂಡ್‌ ನೇಮಕ ಆದೇಶ ಹೊರಡಿಸಲಿದೆ. ಬಹುತೇಕ ಈ ಪ್ರಕ್ರಿಯೆ ಈ ಮಾಸಾಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯರನ್ನ ಮನೆಗೆ ಆಹ್ವಾನಿಸಿದ ಡಿಕೆಶಿ : ಕೋಲ್ಡ್ ವಾರ್ ತಣಿಸುವ ಯತ್ನ..?

ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಚಾರ ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಅವರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಉಭಯ ನಾಯಕರು ಪ್ರತ್ಯೇಕವಾಗಿ ಪದಾಧಿಕಾರಿಗಳ ಪಟ್ಟಿಯನ್ನು ಈಗಾಗಲೇ ಹೈಕಮಾಂಡ್‌ಗೆ ಕಳುಹಿಸಿದ್ದಾರೆ. ಇದಲ್ಲದೆ, ಸುಮಾರು 16 ರಿಂದ 18 ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರತ್ಯೇಕವಾಗಿ ಹೈಕಮಾಂಡ್‌ಗೆ ಕೋರಿಕೆ ಸಲ್ಲಿಸಿದ್ದಾರೆ.

ಇನ್ನು ಬಾಕಿ ಉಳಿದಿರುವ ಮುಂಚೂಣಿ ಘಟಕಗಳ ಅಧ್ಯಕ್ಷರ ನೇಮಕಕ್ಕೂ ಕೆಪಿಸಿಸಿ ವತಿಯಿಂದ ಪ್ರಸ್ತಾವನೆ ಈಗಾಗಲೇ ಹೈಕಮಾಂಡ್‌ಗೆ ತಲುಪಿದೆ. ಈ ಬಗ್ಗೆ ಕಾಂಗ್ರೆಸ್‌ ವರಿಷ್ಠರು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸುಮಾರು 150 ರಿಂದ 200 ಮಂದಿಯಷ್ಟುಸಂಭಾವ್ಯ ಪದಾಧಿಕಾರಿಗಳ ಪಟ್ಟಿಯನ್ನು ಹೈಕಮಾಂಡ್‌ ಮುಂದಿಟ್ಟಿದ್ದರೆ, ಸಿದ್ದರಾಮಯ್ಯ ಅವರು ಕೂಡ ದೊಡ್ಡ ಸಂಖ್ಯೆಯ ಹೆಸರುಗಳನ್ನೇ ಶಿಫಾರಸು ಮಾಡಿದ್ದಾರೆ. ಹೈಕಮಾಂಡ್‌ ಈ ಎರಡು ಪಟ್ಟಿಯನ್ನು ಒಗ್ಗೂಡಿಸಿ ಅಂತಿಮ ಪಟ್ಟಿಪ್ರಕಟ ಮಾಡಲಿದೆ.

ಸಂಭಾವ್ಯ ಪದಾಧಿಕಾರಿಗಳು :  ಡಿಕೆಶಿ ಶಿಫಾರಸು ಪಟ್ಟಿ

ಡಿ.ಕೆ. ಶಿವಕುಮಾರ್‌ ಅವರು ಶಿಫಾರಸು ಮಾಡಿರುವ ಪಟ್ಟಿಯಲ್ಲಿರುವ ಸಂಭಾವ್ಯ ಪದಾಧಿಕಾರಿಗಳು - ವಿನಯ್‌ ಕಾರ್ತಿಕ್‌, ವಿಜಯ ಮುಳಗುಂದ್‌, ಬಾಲರಾಜ್‌, ಕೆಂಚೇಗೌಡ, ಮಂಜುನಾಥ್‌ ಮತ್ತು ಕೃಪಾ ಆಳ್ವ (ಪ್ರಧಾನ ಕಾರ್ಯದರ್ಶಿಗಳು), ಮೈಸೂರು ಬಾಬು, ಆಂಜನೇಯುಲು, ಸಲೀಂ (ಕಾರ್ಯದರ್ಶಿಗಳು)

ಸಿದ್ದರಾಮಯ್ಯ ಶಿಫಾರಸು ಪಟ್ಟಿ

ಸಿದ್ದರಾಮಯ್ಯ ಅವರು ಶಿಫಾರಸು ಮಾಡಿರುವ ಸಂಭಾವ್ಯ ಪದಾಧಿಕಾರಿಗಳು- ಎಚ್‌.ಡಿ. ರೇವಣ್ಣ, ರಘು ಆಚಾರ್‌, ಚೆಲುವರಾಯಸ್ವಾಮಿ, ಅಭಯ ಚಂದ್ರ ಜೈನ್‌, ಅಶೋಕ್‌ ಪಟ್ಟಣ್‌, ಎಂ.ಆರ್‌. ಸೀತಾರಾಂ.

ಮಂಚೂಣಿ ಘಟಕಗಳು

ಅಲ್ಪಸಂಖ್ಯಾತ ಘಟಕ- ಜಬ್ಬಾರ್‌

ಸೇವಾದಳ- ನಂಜಯ್ಯನಮಠ

ಮಹಿಳಾ ಕಾಂಗ್ರೆಸ್‌- ರೂಪಾ ಶಶಿಧರ್‌, ಡಾ. ನಾಗಲಕ್ಷ್ಮೇ ಚೌಧರಿ, ಐಶ್ವರ್ಯ ಮಹದೇವ

ಒಬಿಸಿ- ವಿ.ಆರ್‌. ಸುದರ್ಶನ್‌-ಮಧು ಬಂಗಾರಪ್ಪ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪರಿಶಿಷ್ಟನಾಯಕ (ಎಡಗೈ) ಆರ್‌. ಬಿ. ತಿಮ್ಮಾಪುರ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡುವಂತೆ ಹೈಕಮಾಂಡ್‌ ಅನ್ನು ಆಗ್ರಹಿಸಲಿದ್ದಾರೆ. ದೆಹಲಿ ಭೇಟಿ ವೇಳೆ ಕಾಂಗ್ರೆಸ್‌ನಲ್ಲಿ ಪ್ರಸ್ತುತ ಪರಿಶಿಷ್ಟ(ಬಲಗೈ) ನಾಯಕ ಧ್ರುವನಾರಾಯಣ ಅವರಿಗೆ ಪ್ರಾತಿನಿಧ್ಯವಿದೆ. ಆದರೆ, ಎಡಗೈ ನಾಯಕರಿಗೆ ಪ್ರಾತಿನಿಧ್ಯವಿಲ್ಲ. ಹೀಗಾಗಿ ಆರ್‌.ಬಿ. ತಿಮ್ಮಾಪುರ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಅವರು ಆಗ್ರಹ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಕಾಂಗ್ರೆಸ್‌ನಲ್ಲಿ ), ಸತೀಶ್‌ ಜಾರಕೀಹೊಳಿ (ನಾಯಕ ಸಮುದಾಯ), ರಾಮಲಿಂಗಾರೆಡ್ಡಿ (ರೆಡ್ಡಿ ಜನಾಂಗ) ಧ್ರುವನಾರಾಯಣ (ಪರಿಶಿಷ್ಟಬಲಗೈ), ಸಲೀಂ ಅಹಮದ್‌ (ಅಲ್ಪಸಂಖ್ಯಾತ) ಮತ್ತು ಈಶ್ವರ್‌ ಖಂಡ್ರೆ (ಲಿಂಗಾಯತ) ಸಮುದಾಯಕ್ಕೆ ಸೇರಿದವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.

click me!