ಬಿಜೆಪಿಯವರು ಅಧಿಕಾರದಲ್ಲಿದ್ದ ನಾಲ್ಕು ವರ್ಷದ ಅವಧಿಯಲ್ಲಿ ಒಂದೇ ಒಂದು ಮನೆ ಕೊಟ್ಟಿದ್ದರೆ ನಾನು ರಾಜಕೀಯ ನಿವೃತ್ತಿ ನೀಡುತ್ತೇನೆ. ಈ ಕುರಿತು ಚರ್ಚಿಸಲು ನಾನು ಸಿದ್ಧ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.
ಹುಬ್ಬಳ್ಳಿ (ಏ.14): ಬಿಜೆಪಿಯವರು ಅಧಿಕಾರದಲ್ಲಿದ್ದ ನಾಲ್ಕು ವರ್ಷದ ಅವಧಿಯಲ್ಲಿ ಒಂದೇ ಒಂದು ಮನೆ ಕೊಟ್ಟಿದ್ದರೆ ನಾನು ರಾಜಕೀಯ ನಿವೃತ್ತಿ ನೀಡುತ್ತೇನೆ. ಈ ಕುರಿತು ಚರ್ಚಿಸಲು ನಾನು ಸಿದ್ಧ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು. ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬುದಿಲ್ಲ. ಬದಲಿಗೆ ಹಿಂದು- ಮುಸ್ಲಿಂ ಎಂದು ಹೇಳಿ ಅವರು ಮತಗಳನ್ನು ಪಡೆದರೆ, ನಾವು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತಗಳನ್ನು ಕೇಳುತ್ತೇವೆ ಎಂದರು.
5-6 ದಿನ ವಿಳಂಬ: ಏ. 27ರಂದು ಮುಖ್ಯಮಂತ್ರಿ ಸಮ್ಮುಖದಲ್ಲಿ ರಾಜ್ಯಾದ್ಯಂತ 42,345 ಮನೆಗಳನ್ನು ಉದ್ಘಾಟಿಸುವ ಯೋಚನೆ ನಮಗಿತ್ತು. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸುತ್ತಿರುವುದರಿಂದ ಮನೆಗಳ ಉದ್ಘಾಟನೆ ಐದರಿಂದ ಆರು ದಿನ ವಿಳಂಬವಾಗಬಹುದು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 1,80,253 ಮನೆಗಳ ನಿರ್ಮಾಣ ಮಾಡುವಂತೆ ಘೋಷಿಸಿದ್ದರು. ಅದರಂತೆ ಕಳೆದ ವರ್ಷ 36 ಸಾವಿರ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಸ್ತಾಂತರಿಸಲಾಗಿದೆ. ಈ ವರ್ಷ 42,353 ಮನೆಗಳನ್ನು ಉದ್ಘಾಟಿಸುತ್ತಿದ್ದೇವೆ ಎಂದರು. ಜಾತಿಗಣತಿ ವರದಿ ಬಗ್ಗೆ ಯಾವುದೇ ರೀತಿ ಚರ್ಚೆಯಾಗಿಲ್ಲ. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಕ್ಯಾಬಿನೆಟ್ ಸಭೆ ಕರೆಯುತ್ತಾರೆ. ವರದಿಯ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲು ತಿಳಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಚ್‌ಡಿಕೆ ಒಂದೆಡೆ ಇರಲ್ಲ: ಬಿಜೆಪಿಯ ಜನಾಕ್ರೋಶ ಯಾತ್ರೆ ಹಾಗೂ ಜೆಡಿಎಸ್‌ನ ಸಾಕಪ್ಪ ಸಾಕು ಯಾತ್ರೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಪಕ್ಷದ ತೀರ್ಮಾನದ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಡಕು ಮೂಡಿದೆಯೇ ಎಂದು ಪ್ರಶ್ನಿಸಿದಾಗ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವತ್ತೂ ಒಂದೇ ಕಡೆ ಇರುವುದಿಲ್ಲ ಎಂದರು.
ಇದು ಜಾತಿ ಗಣತಿ ಅಲ್ಲವೇ ಅಲ್ಲ, ಸಮೀಕ್ಷೆ ಅಷ್ಟೇ: ಸಚಿವ ಶಿವರಾಜ ತಂಗಡಗಿ
ವಿದ್ಯಾರ್ಥಿಗಳಿಗೆ ಸಚಿವ ಜಮೀರ್ ಅಭಿನಂದನೆ: ದ್ವಿತೀಯ ಪಿಯುಸಿ ಫಲಿತಾಂಶದ ಕಲಾ ವಿಭಾಗದಲ್ಲಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿ ವಿಜಯನಗರ ಜಿಲ್ಲೆಯ ವಿದ್ಯಾರ್ಥಿನಿಯರು ಪಡೆದಿರುವುದು ಹೆಮ್ಮೆ ಹಾಗೂ ಸಂತಸದ ವಿಚಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಗುಂಡಾ ಸ್ಟೇಷನ್ ಗ್ರಾಮದ ಕೊಟ್ಟೂರು ಇಂದು ಕಾಲೇಜಿನ ಕುಮಾರಿ ಸಂಜನಾಬಾಯಿ 600ಕ್ಕೆ 597 ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಇನ್ನೂ ಇಟಗಿಯ ಪಂಚಮಸಾಲಿ ಕಾಲೇಜಿನ ಕುಮಾರಿ ಕೆ.ನಿರ್ಮಲ 600ಕ್ಕೆ 596 ಪಡೆದು ಎರಡನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.