ಸಚಿವ ಸಂಪುಟ ಸರ್ಕಸ್‌ ಈಗ ದೆಹಲಿಗೆ: ಇಂದು ದಿನವಿಡೀ ಕಾಂಗ್ರೆಸ್‌ನಲ್ಲಿ ಕಸರತ್ತು

By Kannadaprabha News  |  First Published May 25, 2023, 4:37 AM IST

ಒಮ್ಮತ ಮೂಡಿದರೆ 27/28ಕ್ಕೆ ವಿಸ್ತರಣೆ?, ಸಂಪುಟ ವಿಸ್ತರಣೆಗಾಗಿ ಸಿದ್ದು, ಡಿಕೆಶಿ ನಿನ್ನೆಯೇ ದೆಹಲಿಗೆ ಪ್ರಯಾಣ, 50 ಆಕಾಂಕ್ಷಿಗಳು ಕೂಡ ರಾಷ್ಟ್ರ ರಾಜಧಾನಿಗೆ ದೌಡು, ಭಾರಿ ಲಾಬಿ, ಸಂಪುಟದಲ್ಲಿ ಈಗಾಗಲೇ 10 ಮಂದಿ. ಇನ್ನೂ 24 ಸ್ಥಾನಗಳು ಖಾಲಿ 


ಬೆಂಗಳೂರು(ಮೇ.25): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವಿನ ತೀವ್ರ ಹಗ್ಗ-ಜಗ್ಗಾಟದ ಸಾಧ್ಯತೆ ಇರುವ ಕಾಂಗ್ರೆಸ್‌ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಸರ್ಕಸ್‌ ಬುಧವಾರ ದೆಹಲಿಯಲ್ಲಿ ಆರಂಭವಾಗಿದೆ. ಈ ಸರ್ಕಸ್‌ ಇಂದು(ಗುರುವಾರ) ದಿನವಿಡೀ ನಡೆಯುವ ನಿರೀಕ್ಷೆಯಿದ್ದು, ಹೈಕಮಾಂಡ್‌ ಉಭಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರೆ ಮೇ 27 ಅಥವಾ 28 ಸಂಪುಟ ವಿಸ್ತರಣೆ ಘಟಿಸಬಹುದು.

ಮಾಸಾಂತ್ಯದೊಳಗೆ ಸಂಪುಟ ವಿಸ್ತರಣೆ ನಡೆಸಬೇಕು ಮತ್ತು ಖಾತೆ ಹಂಚಿಕೆಯನ್ನೂ ಮಾಡಬೇಕು ಎಂಬ ಗುರಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಬುಧವಾರ ದೆಹಲಿಗೆ ತೆರಳಿದರು. ಇದರ ಬೆನ್ನಲ್ಲೇ ಸುಮಾರು 50ಕ್ಕೂ ಹೆಚ್ಚು ಸಚಿವ ಸ್ಥಾನ ಆಕಾಂಕ್ಷಿಗಳು ಸಹ ದೆಹಲಿ ಮುಟ್ಟಿದ್ದು, ಭರ್ಜರಿ ಲಾಬಿ ಆರಂಭಿಸಿದ್ದಾರೆ. ಇದು ಸಂಪುಟ ಸರ್ಕಸ್‌ ಅನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದೆ.

Tap to resize

Latest Videos

ಸಿಎಂ ಸಿದ್ದರಾಮಯ್ಯ ವಿರುದ್ದ ಕೊಲೆ ಆರೋಪ, ಶಾಸಕ ಹರೀಶ್ ಪೂಂಜಾ ವಿರುದ್ದ ಎಫ್ಐಆರ್!

ಒಟ್ಟಾರೆ ಸಚಿವ ಸಂಪುಟದಲ್ಲಿ (34 ಸ್ಥಾನ) ಜಾತಿ ಲೆಕ್ಕಾಚಾರದ ಪ್ರಕಾರ ಲಿಂಗಾಯತರಿಗೆ ಆರು, ಒಕ್ಕಲಿಗರಿಗೆ ಐದು, ಪರಿಶಿಷ್ಟರಿಗೆ 5, ಪರಿಶಿಷ್ಟಪಂಗಡಕ್ಕೆ 2, ಹಿಂದುಳಿದವರಿಗೆ 4, ಮುಸ್ಲಿಂ - 3, ಕುರುಬ -3, ಕ್ರೈಸ್ತರು, ಜೈನ, ಬ್ರಾಹ್ಮಣದಂತಹ ಸಮುದಾಯಗಳಿಗೆ ತಲಾ ಒಂದು ಸ್ಥಾನ ನೀಡುವ ಸಾಧ್ಯತೆಯಿದ್ದು, ಮೂರು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳುವ ಸಾಧ್ಯತೆಯಿದೆ.

ಸದ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಸಂಪುಟದಲ್ಲಿ 10 ಮಂದಿ ಇದ್ದು, ಬಾಕಿ ಉಳಿದ 24ರ ಪೈಕಿ 20 ಸ್ಥಾನಗಳನ್ನು ತುಂಬಿಕೊಳ್ಳುವ ಉದ್ದೇಶವಿದೆ. ಆದರೆ, ಒತ್ತಡ ತೀವ್ರವಾದರೆ ಇದು 21 ಅಥವಾ 22ಕ್ಕೂ ಹೆಚ್ಚಬಹುದು ಎಂದು ಮೂಲಗಳು ಹೇಳುತ್ತವೆ.

ಬೆಂಗಳೂರು ನಗರಕ್ಕೆ ಈಗಾಗಲೇ ಮೂರು ಸಚಿವ ಸ್ಥಾನ ನೀಡಲಾಗಿದೆ (ರಾಮಲಿಂಗಾರೆಡ್ಡಿ, ಕೆ.ಜೆ. ಜಾಜ್‌ರ್‍, ಜಮೀರ್‌ ಅಹ್ಮದ್‌). ಹೀಗಾಗಿ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿರುವ 12 ಸೀಟುಗಳಿಗೆ ಎಷ್ಟುಸಚಿವ ಸ್ಥಾನ ನೀಡಬೇಕು ಎಂಬ ಜಿಜ್ಞಾಸೆಯಿದೆ. ಹೆಚ್ಚು ಎಂದರೆ ಇನ್ನೂ ಮೂರು ಸ್ಥಾನಗಳನ್ನು ಮಾತ್ರ ನೀಡಬಹುದು ಎನ್ನುತ್ತವೆ ಮೂಲಗಳು. ಇದು ನಿಜವೇ ಆಗಿದ್ದರೆ ಇನ್ನು ಮೂರು ಮಂದಿಗಷ್ಟೇ ಅವಕಾಶ ಸಿಗುವ ಸಾಧ್ಯತೆಯಿದೆ.

ಈ ಪೈಕಿ ಬೈರತಿ ಸುರೇಶ್‌ ಅವರು ಸಂಪುಟ ಸೇರುವುದು ಪಕ್ಕಾ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೈರತಿ ಅವರ ಹೆಸರಿಗೆ ಪಟ್ಟು ಹಿಡಿದಿದ್ದು, ಇದಕ್ಕೆ ಹೈಕಮಾಂಡ್‌ ಒಪ್ಪಿಗೆ ಸೂಚಿಸಬಹುದು ಎನ್ನಲಾಗಿದೆ. ಹೀಗಾಗಿ ಇನ್ನೆರಡು ಸ್ಥಾನಗಳನ್ನು ಯಾರಿಗೆ ನೀಡುತ್ತಾರೆ ಎಂಬ ಕುತೂಹಲವಿದೆ. ಏಕೆಂದರೆ, ಒಕ್ಕಲಿಗರ ಪೈಕಿ ಕೃಷ್ಣ ಬೈರೇಗೌಡ, ಎಂ. ಕೃಷ್ಣಪ್ಪ, ಮುಸ್ಲಿಂ ಪೈಕಿ ಎನ್‌.ಎ.ಹ್ಯಾರೀಸ್‌ ಹಾಗೂ ಬ್ರಾಹ್ಮಣ ಸಮುದಾಯದ ದಿನೇಶ್‌ ಗುಂಡೂರಾವ್‌ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಎರಡೇ ಸ್ಥಾನ ಇರುವುದರಿಂದ ಹ್ಯಾರೀಸ್‌ಗೆ ಕಷ್ಟಎನ್ನಲಾಗುತ್ತಿದ್ದು, ಬ್ರಾಹ್ಮಣ ಸಮುದಾಯದ ದಿನೇಶ್‌ ಗುಂಡೂರಾವ್‌ ಅವರಿಗೆ ಸಚಿವ ಸ್ಥಾನ ಸಿಗುವುದು ಮತ್ತೊಬ್ಬ ಬಾಹ್ಮಣ ಸಮುದಾಯದ ಹಿರಿಯ ಶಾಸಕ ಆರ್‌. ವಿ. ದೇಶಪಾಂಡೆ ಅವರ ಸ್ಥಿತಿ ಏನಾಗಲಿದೆ ಎಂಬುದನ್ನು ಅವಲಂಬಿಸಿದೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ದೇಶಪಾಂಡೆ ಪರ ವಕಾಲತ್ತು ವಹಿಸಿದ್ದಾರೆ. ಆದರೆ, ಅವರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ವಿರೋಧವಿದೆ. ಒಂದು ವೇಳೆ ದೇಶಪಾಂಡೆಗೆ ಸೀಟು ದೊರೆತರೇ ದಿನೇಶ್‌ ಅವರು ಸಚಿವ ಸ್ಥಾನ ವಂಚಿತರಾಗಬಹುದು. ಅಲ್ಲದೆ, ದಿನೇಶ್‌ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವುದರಿಂದ ಸಚಿವ ಸ್ಥಾನವನ್ನು ಅವರಿಗೆ ಏಕೆ ನೀಡಬೇಕು ಎಂಬ ವಾದವೂ ಇದೆ.

ಇದೇ ಪರಿಸ್ಥಿತಿ ಎಚ್‌.ಕೆ. ಪಾಟೀಲ್‌ ಅವರಿಗೂ ಇದೆ. ಪಾಟೀಲ್‌ ಅವರು ಸಹ ಎಐಸಿಸಿ ಹುದ್ದೆ ಹಾಗೂ ರಾಜ್ಯವೊಂದರ ಉಸ್ತುವಾರಿ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆಯೂ ಗುಮಾನಿಗಳಿವೆ. ಇನ್ನು ಒಕ್ಕಲಿಗರ ಪೈಕಿ ಕೃಷ್ಣ ಬೈರೇಗೌಡ ಹಾಗೂ ಎಂ. ಕೃಷ್ಣಪ್ಪ ನಡುವೆ ತೀವ್ರ ಪೈಪೋಟಿಯಿದೆ. ಯಾರಿಗೇ ಸಚಿವ ಸ್ಥಾನ ಸಿಕ್ಕರೂ ಮತ್ತೊಬ್ಬರು ವಂಚಿತರಾಗುವ ಸಾಧ್ಯತೆಯಿದೆ.

ತುಮಕೂರು ಜಿಲ್ಲೆಯಿಂದ ಈಗಾಗಲೇ ಪರಮೇಶ್ವರ್‌ ಸಂಪುಟದಲ್ಲಿದ್ದಾರೆ. ಇನ್ನು ಕೆ.ಎನ್‌. ರಾಜಣ್ಣ ಹಾಗೂ ಟಿ.ಬಿ. ಜಯಚಂದ್ರ ಅವರು ಪೈಪೋಟಿ ನಡೆಸುತ್ತಿದ್ದು, ಜಿಲ್ಲೆಗೆ ಇನ್ನೊಂದು ಸ್ಥಾನ ಮಾತ್ರ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಕುರುಬ ಸಮುದಾಯಕ್ಕೆ ಮುಖ್ಯಮಂತ್ರಿ ಸೇರಿ ಮೂರು ಸ್ಥಾನ ನೀಡಬೇಕು ಎಂಬ ಒತ್ತಡವಿದೆ. ಪ್ರಸ್ತುತ ಸಿಎಂ ಸಿದ್ದರಾಮಯ್ಯ ಅವರಿರುವ ಕಾರಣ, ಬೆಂಗಳೂರು ನಗರದಿಂದ ಬೈರತಿ ಸುರೇಶ್‌ ಅವರಿಗೆ ದೊರತರೆ ಉತ್ತರ ಕರ್ನಾಟಕದಿಂದ ರಾಘವೇಂದ್ರ ಹಿಟ್ನಾಳ್‌ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಉದ್ದೇಶವಿದೆ.

ಮುಸ್ಲಿಂ ಸಮುದಾಯದಿಂದ ಮೂರರಿಂದ ನಾಲ್ಕು ಸ್ಥಾನಗಳಿಗೆ ಬೇಡಿಕೆಯಿದೆ. ಪ್ರಸ್ತುತ ಜಮೀರ್‌ ಅಹಮದ್‌ ಸಂಪುಟ ಸೇರಿದ್ದಾರೆ. ಯು.ಟಿ. ಖಾದರ್‌ ಅವರು ಸ್ಪೀಕರ್‌ ಆಗಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ಒಂದು ಅಥವಾ ಎರಡು ಸ್ಥಾನ ದೊರೆಯಬಹುದಾಗಿದ್ದು, ಪರಿಷತ್‌ ಸದಸ್ಯರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅವರ ಹೆಸರು ಚರ್ಚೆಯಲ್ಲಿದೆ.

ಜೈನ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ನಿರ್ಧರಿಸಿದ್ದು ಹಿರಿಯೂರಿನ ಸುಧಾಕರ್‌, ಉಪ್ಪಾರ ಸಮುದಾಯದಿಂದ ಸಿ. ಪುಟ್ಟರಂಗ ಶೆಟ್ಟಿಮತ್ತು ಮರಾಠ ಸಮುದಾಯದಿಂದ ಸಂತೋಷ್‌ ಲಾಡ್‌ ಅವರಿಗೆ ಅವಕಾಶ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಮಂಡ್ಯದಿಂದ ಚೆಲುವರಾಯಸ್ವಾಮಿ ಸಂಪುಟ ಸೇರುವುದು ಪಕ್ಕಾ ಎನ್ನಲಾಗುತ್ತಿದ್ದು, ಡಾ. ಎಚ್‌.ಸಿ. ಮಹದೇವಪ್ಪ ಹಾಗೂ ನರೇಂದ್ರಸ್ವಾಮಿ ಈ ಇಬ್ಬರ ಪೈಕಿ ಒಬ್ಬರಿಗೆ ಸಂಪುಟದಲ್ಲಿ ಅವಕಾಶ ದೊರೆಯಬಹುದು ಎಂದು ಮೂಲಗಳು ಹೇಳುತ್ತವೆ.

ಸಂಭವನೀಯರ ಪಟ್ಟಿ

ಬೈರತಿ ಸುರೇಶ್‌
ಶರಣಪ್ರಕಾಶ್‌ ಪಾಟೀಲ್‌
ಲಕ್ಷ್ಮಣ ಸವದಿ
ಬಸವರಾಜ ರಾಯರೆಡ್ಡಿ
ಲಕ್ಷ್ಮೇ ಹೆಬ್ಬಾಳಕರ
ರಾಘವೇಂದ್ರ ಹಿಟ್ನಾಳ್‌
ಈಶ್ವರ್‌ ಖಂಡ್ರೆ
ಚೆಲುವರಾಯಸ್ವಾಮಿ
ಎಸ್‌. ಎಸ್‌. ಮಲ್ಲಿಕಾರ್ಜುನ್‌
ರಾಜೇಗೌಡ
ನಾಗೇಂದ್ರ
ಸಿ. ಪುಟ್ಟರಂಗಶೆಟ್ಟಿ
ಶಿವರಾಜ ತಂಗಡಗಿ
ಕೃಷ್ಣ ಬೈರೇಗೌಡ-ಎಂ. ಕೃಷ್ಣಪ್ಪ
ದಿನೇಶ್‌ ಗುಂಡೂರಾವ್‌- ಆರ್‌.ವಿ.ದೇಶಪಾಂಡೆ
ಮಧು ಬಂಗಾರಪ್ಪ- ಬಿ.ಕೆ. ಹರಿಪ್ರಸಾದ್‌
ಶಿವಾನಂದ ಪಾಟೀಲ್‌- ಯಶವಂತರಾಯ ಪಾಟೀಲ್‌
ಕೆ.ಎನ್‌. ರಾಜಣ್ಣ- ರಘುಮೂರ್ತಿ
ವಿನಯ ಕುಲಕರ್ಣಿ - ಸಂತೋಷ್‌ ಲಾಡ್‌
ಎಚ್‌.ಸಿ. ಮಹದೇವಪ್ಪ- ಪಿ.ಎಂ. ನರೇಂದ್ರಸ್ವಾಮಿ
ವಿಧಾನಪರಿಷತ್ತಿನಿಂದ
ಸಲೀಂ ಅಹಮದ್‌, ದಿನೇಶ್‌ ಗೂಳಿಗೌಡ

ಸಚಿವ ಸ್ಥಾನಾಕಾಂಕ್ಷಿಗಳು ದೆಹಲಿಗೆ ದೌಡು

ಸಚಿವ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗುತ್ತಿದ್ದಂತೆ ಹೈಕಮಾಂಡ್‌ ಬಳಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಕಾಂಗ್ರೆಸ್‌ ಶಾಸಕರ ದಂಡೇ ಬುಧವಾರ ದೆಹಲಿಗೆ ತೆರಳಿದೆ. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ದೆಹಲಿಗೆ ತೆರಳಿದ ಬೆನ್ನಲ್ಲೇ 50ಕ್ಕೂ ಹೆಚ್ಚಿನ ಶಾಸಕರು ದೆಹಲಿ ಪ್ರಯಾಣ ಬೆಳೆಸಿದ್ದು, ಹೈಕಮಾಂಡ್‌ ಬಳಿ ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸುವ ಉದ್ದೇಶ ಹೊಂದಿದ್ದಾರೆ.

ಅತಿವೃಷ್ಟಿ: ಜೀವಹಾನಿ ತಡೆಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸಿದ್ದು ಸೂಚನೆ

ಧಾರವಾಡ ಶಾಸಕ ವಿನಯ್‌ ಕುಲಕರ್ಣಿ, ಕಲಘಟಗಿ ಶಾಸಕ ಸಂತೋಷ್‌ ಲಾಡ್‌, ವಿಜಯನಗರದ ಎಂ. ಕೃಷ್ಣಪ್ಪ, ಎಚ್‌.ಡಿ. ಕೋಟೆಯ ಅನಿಲ್‌ ಚಿಕ್ಕಮಾದು, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌, ಬ್ಯಾಡಗಿ ಶಾಸಕ ಬಸವರಾಜ್‌, ಆನೇಕಲ್‌ ಶಾಸಕ ಶಿವಣ್ಣ, ಸಿರಗುಪ್ಪ ಶಾಸಕ ನಾಗರಾಜ್‌, ಮಾಯಕೊಂಡ ಶಾಸಕ ಕೆ.ಎಸ್‌. ಬಸವರಾಜ್‌, ಸಂಡೂರು ಶಾಸಕ ತುಕಾರಾಂ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ ಸೇರಿದಂತೆ ಹಲವು ಶಾಸಕರು ದೆಹಲಿಗೆ ತೆರಳಿದ್ದಾರೆ. ಎಲ್ಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಇನ್ನಿತರ ನಾಯಕರನ್ನು ಭೇಟಿಯಾಗಿ ತಮಗೆ ಸಚಿವ ಸ್ಥಾನ ಏತಕ್ಕಾಗಿ ಕೊಡಬೇಕು ಎಂಬುದರ ಕುರಿತಂತೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದಾರೆ.

ಜಾತಿ ಲೆಕ್ಕಾಚಾರ ಸಂಪುಟ ಸದಸ್ಯ ಬಲ-34

ಲಿಂಗಾಯತರು- 6, ಒಕ್ಕಲಿಗರು- 6, ಪರಿಶಿಷ್ಟರು- 5, ಪರಿಶಿಷ್ಟಪಂಗಡ- 2, ಹಿಂದುಳಿದವರಿಗೆ- 4, ಮುಸ್ಲಿಂ- 3, ಕುರುಬ-3, ಕ್ರೈಸ್ತರು, ಜೈನ, ಬ್ರಾಹ್ಮಣ ತಲಾ 1. ಬಾಕಿ ಉಳಿದ ಮೂರು ಸ್ಥಾನ ಖಾಲಿ ಉಳಿಸಿಕೊಳ್ಳುವ ಸಾಧ್ಯತೆ.

click me!