ಅಭ್ಯಾಸಬಲ ಎನ್ನುವಂತೆ ಅವರ ಬಾಯಿಂದ ಜೆಡಿಎಸ್ ಇನ್ನೂ ದೂರಾಗಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಗುರುವಾರ ಹಾಸನದ ಕೃಷ್ಣಾನಗರದಲ್ಲಿ ನಡೆದ ಕಾಂಗ್ರೆಸ್ ನ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡುವ ವೇಳೆ 'ನಾವೆಲ್ಲಾ ಸೇರಿ ಜೆಡಿಎಸ್ಸನ್ನು ಕಟ್ಟೋಣ ಎಂದು ಹೇಳಿದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು
ಹಾಸನ(ಡಿ.06): ಜೆಡಿಎಸ್ ಪಕ್ಷದ ಮೂಲಕವೇ ತಮ್ಮ ರಾಜಕೀಯ ಜೀವನ ಆರಂಭಿಸಿದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ. ಆದರೂ ಅಭ್ಯಾಸಬಲ ಎನ್ನುವಂತೆ ಅವರ ಬಾಯಿಂದ ಜೆಡಿಎಸ್ ಇನ್ನೂ ದೂರಾಗಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಗುರುವಾರ ಹಾಸನದ ಕೃಷ್ಣಾನಗರದಲ್ಲಿ ನಡೆದ ಕಾಂಗ್ರೆಸ್ ನ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡುವ ವೇಳೆ 'ನಾವೆಲ್ಲಾ ಸೇರಿ ಜೆಡಿಎಸ್ಸನ್ನು ಕಟ್ಟೋಣ' ಎಂದು ಹೇಳಿದ್ದಾರೆ.
ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಈ ವೇಳೆ ಶಿವಲಿಂಗೇಗೌಡರಿಗೆ ಸ್ವಾಗತ ಕೋರುವುದನ್ನು ಮರೆತಿದ್ದರು. ಇದರಿಂದ ಶಿವಲಿಂಗೇಗೌಡರು ಅಸಮಾಧಾನಗೊಂಡಿದ್ದರು. ಸ್ವಾಗತ ಮುಗಿದ ನಂತರ ಶಿವಲಿಂಗೇಗೌಡರಿಗೆ ಮಾತನಾಡುವ ಅವಕಾಶ ಬಂದಿತ್ತು. ಈ ವೇಳೆ ಮಾತನಾಡುತ್ತಾ ಇಡಿ ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಎಲ್ಲಿದೆ ಜೆಡಿಎಸ್ ಭದ್ರಕೋಟೆ. ಹಾಸನದಲ್ಲಿ 28 ವರ್ಷಗಳ ನಂತರ ಸಂಸದ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಲಿದೆ ಎಂದು ವಾಕ್ ಪ್ರಹಾರ ನಡೆಸುತ್ತಲೇ 'ನಾವೆಲ್ಲಾ ಒಂದಾಗಿ ಈ ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟುತ್ತೇವೆ' ಎಂದು ಹೇಳಿ ಭಾಷಣ ಮುಗಿಸಿದರು.
ನನ್ನನ್ನೇ ಮಂತ್ರಿ ಮಾಡಲು ವರಿಷ್ಠರ ಬಳಿ ಹೇಳಿ: ಶಾಸಕ ಶಿವಲಿಂಗೇಗೌಡ
ಜಾತ್ಯತೀತ ಹೆಸರು ಬದಲಿಸಿ: ಪರಂ
ಗೃಹ ಸಚಿವ ಪರಮೇಶ್ವರ್ ಕೂಡ, ಜೆಡಿಎಸ್ ನಾಯಕರು ತಾವು ಜಾತ್ಯತೀತ ಅಂತ ಹೇಳಿಕೊಂಡು ಜಿಲ್ಲೆಯ ಅಭಿ ವೃದ್ಧಿಗೆ ಮಂಕುಬೂದಿ ಎರಚಿದ್ದೀರಿ. ಕೋಮುವಾದಿಗಳ ಜತೆ ಸೇರಿಕೊಂಡು ಸಚಿವರಾಗಿದ್ದೀರಿ. ಜಾತ್ಯತೀತ ಎನಿಸಿ ಕೊಳ್ಳೋಕೆ ನಿಮಗೆ ನೈತಿಕತೆ ಇಲ್ಲ. ಹಾಗಾಗಿ ಜಾತ್ಯತೀತ ಎನ್ನುವುದನ್ನು ಬದಲಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷವನ್ನು ನೀವು ಬಿಜೆಪಿ ಜೆಡಿಎಸ್ ಅಲ್ಲಾಡಿಸಲು ಅಗಲ್ಲ. ನಿಮ್ಮನೆ ಐದು ಬಾಗಿಲು ಆಗಿದೆ. ಆದರೆ ನೀವು ನಮಗೆ ಹೇಳೀರಾ ಎಂದರು. ನಿಮ್ಮಂತೆ ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಯಾವ ಪಕ್ಷ ಜಾತ್ಯತೀತ ಎಂದು ಹೇಳಿಕೊಂಡು ಹಾಸನದ ಜನತೆಗೆ ಮಂಕು ಬೂದಿ ಎರಚುತ್ತಿದ್ದರು. ನೀವು ಕೋಮುವಾದಿ ಬಿಜೆಪಿ ಜೊತೆ ಸೇರಿ ಮಂತ್ರಿ ಆಗಿದಿರಲ್ಲ ನಿಮಗೆ ನಾಚಿಕೆ ಆಗಲ್ವ, ಮೊದಲು ಜಾತ್ಯತೀತ ಎನ್ನೋದನ್ನ ಬದಲಾಯಿಸಿ ಎಂದು ಕುಮಾರಸ್ವಾಮಿ ಹೆಸರು ಹೇಳದೆ ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಎತ್ತಿನಹೊಳೆ ಯೋಜನೆ ಕಾಂಗ್ರೆಸ್ ಸರ್ಕಾರದ ಭಗೀರಥ ಕೆಲಸ: ಶಿವಲಿಂಗೇಗೌಡ
ತಿಲಕ ನಿರಾಕರಿಸಿದ ಸಿಎಂ, ಡಿಸಿಎಂ
ಕಾರ್ಯಕ್ರಮ ಮುಗಿದ ಮೇಲೆ ನಗರದ ಹೊರವಲಯದ ಹೊಯ್ಸಳ ರೆಸಾರ್ಟ್‌ಗೆ ತೆರಳಿ ದಾಗ ರೆಸಾರ್ಟ್‌ನ ಸಿಬ್ಬಂದಿ ಸಿಎಂ, ಡಿಸಿಎಂಗಳಿಗೆ ಸ್ವಾಗತ ಕೋರಿ ತಿಲಕ ಇಡಲು ಹೋದ ವೇಳೆ ನಿರಾಕರಣೆ ಮಾಡಿದರು. ಸಿಎಂಗೆ ತಿಲಕ ಅಷ್ಟೇ ಸರ್ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರೂ ಬೇಡ, ಬೇಡ ಎಂದು ತಿಲಕ ನಿರಾಕರಿಸಿದ ಸಿಎಂ-ಡಿಸಿಎಂ ಮುಂದೆ ನಡೆದರು.
ರಾರಾಜಿಸಿದ ಸಿಎಂ ಪೋಟೋಗಳು
ಸಮಾವೇಶದಲ್ಲಿ ಗಮನಸೆಳೆದ ಕಾರ್ಯಕರ್ತರ ಕೈಯಲ್ಲಿದ್ದ ಸಿದ್ದರಾಮಯ್ಯ ಫೋಟೋಗಳು. ಹಾಸನ: ಗುರುವಾರ ಬೆಳಗ್ಗೆ ಸಮಾವೇಶ ಆರಂಭವಾಗುವ ಹೊತ್ತಿಗೆ ವೇದಿಕೆ ಮುಂದಿದ್ದ ಎಲ್ಲಾ ಕುರ್ಚಿಗಳ ಮೇಲೂ ಸಿದ್ದರಾಮಯ್ಯ ಫೋಟೋಗಳೇ ತುಂಬಿದ್ದವು.ಇದರಿಂದಾಗಿ ಸಮಾವೇಶಕ್ಕೆ ಬಂದ ಪ್ರತಿಯೊಬ್ಬರ ಕೈಯ್ಯಲ್ಲೂ ಸಿದ್ದರಾಮಯ್ಯನವರ ಫೋಟೋಗಳೇ ರಾರಾಜಿಸಿದವು. ಮೈಸೂರಿನ ಮೌರ್ಯ ಆಸ್ಪತ್ರೆಯ ಆನಂದ್ ಎಂಬುವರು ಇಂತಹ ಸಾವಿರಾರು ಫೋಟೋಗಳನ್ನು ಪ್ರಿಂಟ್ ಹಾಕಿಸಿ, ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಪ್ರತಿ ಕುರ್ಚಿಯ ಮೇಲೂ ಈ ಫೋಟೋ ಇರಿಸಿದ್ದರು. ಹೀಗಾಗಿ ಸಮಾವೇಶಕ್ಕೆ ಬಂದ ಪ್ರತಿಯೊಬ್ಬರ ಕೈಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಫೋಟೋಗಳೇ ಇದ್ದವು.