ನನ್ನ ಆಸ್ತಿ ತನಿಖೆ ಮಾಡಲಿ: ಕಾಂಗ್ರೆಸ್‌ಗೆ ಎಚ್‌.ಡಿ.ಕುಮಾರಸ್ವಾಮಿ ಸವಾಲು

By Kannadaprabha NewsFirst Published Jul 6, 2023, 8:24 AM IST
Highlights

ರಾಜಕೀಯಕ್ಕೆ ಬರುವ ಮೊದಲು ಮತ್ತು ಈಗ ನನ್ನ ಆಸ್ತಿ ಎಷ್ಟಿದೆ ಎಂಬುದನ್ನು ತನಿಖೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಬೆಂಗಳೂರು (ಜು.06): ರಾಜಕೀಯಕ್ಕೆ ಬರುವ ಮೊದಲು ಮತ್ತು ಈಗ ನನ್ನ ಆಸ್ತಿ ಎಷ್ಟಿದೆ ಎಂಬುದನ್ನು ತನಿಖೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅವರು ತಾಜ್‌ ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ವಾಸ್ತವ್ಯ ಕುರಿತು ಲಘುವಾಗಿ ಮಾತನಾಡಿದ ಕಾಂಗ್ರೆಸ್‌ ವಿರುದ್ಧ ಕೆಂಡಾಮಂಡಲವಾದರು. ‘ಕೆಎಸ್‌ಟಿ’ ತೆರಿಗೆಯನ್ನು ನಾನು ಇಟ್ಟುಕೊಂಡಿಲ್ಲ. ಹಿಂದೆ ನಾನು ಕಾಂಗ್ರೆಸ್‌ ಪಕ್ಷದ ಜತೆ ಮೈತ್ರಿ ಸರ್ಕಾರ ರಚನೆ ಮಾಡಿದ್ದೆ. ವೆಸ್ಟೆಂಡ್‌ ಬಾಕಿ ಬಿಲ್‌ ಕಾಂಗ್ರೆಸ್‌ಗೆ ಕಳಿಸಿದರಾ? 

ತಿಂಗಳಿಗೆ 2-3 ಲಕ್ಷ ರು. ವೆಚ್ಚ ಮಾಡುವ ಯೋಗ್ಯತೆ ಇಲ್ಲವೇ? ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಈಗಲೂ ರೂಂ ಇದೆ ಎಂದರು. ಬೇಕಿದ್ದರೆ ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ನನ್ನ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ ಎಂಬುದನ್ನು ತನಿಖೆ ಮಾಡಬಹುದು. ನಾನು ಬೇಸಾಯ, ಸಿನಿಮಾ ಮಾಡಿದ್ದೇನೆ. ಕೆಲವರಂತೆ ಟೆಂಟಿನಲ್ಲಿ ನೀಲಿಚಿತ್ರ ತೋರಿಸಿ ದುಡ್ಡು ಮಾಡಿದವನಲ್ಲ. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದಿದ್ದೀನಾ? ನನ್ನ ಬಗ್ಗೆ ಮಾತನಾಡಲು ಹಿತಿಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

ಅಧಿಕಾರವಿಲ್ಲದೆ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿರುವ ಎಚ್‌ಡಿಕೆ: ಚಲುವರಾಯಸ್ವಾಮಿ

ಎಚ್ಡಿಕೆ-ಶಿವಲಿಂಗೇಗೌಡ ಜಟಾಪಟಿ: ಕೊಬ್ಬರಿಗೆ ಬೆಂಬಲ ಬೆಲೆ ವಿಚಾರವಾಗಿ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಡುವೆ ಸದನದಲ್ಲಿ ವಾಗ್ವಾದ ನಡೆಯಿತು. ಸರ್ಕಾರದ ಗ್ಯಾರಂಟಿ ಯೋಜನೆಗಳ ಚರ್ಚೆಗೆ ನಿಲುವಳಿ ಪ್ರಸ್ತಾವನೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ನಡೆಸಿದ ಪ್ರತಿಭಟನೆ, ಗದ್ದಲದ ನಡುವೆಯೇ ಸ್ಪೀಕರ್‌ ಯು.ಟಿ.ಖಾದರ್‌ ಸದನದ ಕಾರ್ಯಕಲಾಪಗಳನ್ನು ಮುಂದುವರೆಸಿದಾಗ ಶೂನ್ಯವೇಳೆಯಲ್ಲಿ ಶಿವಲಿಂಗೇಗೌಡ ಅವರು ಕೊಬ್ಬರಿಗೆ ಬೆಂಬಲ ಬೆಲೆ ವಿಷಯ ಪ್ರಸ್ತಾಪಿಸಿದರಲ್ಲದೆ, ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸದಸ್ಯರ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸೋಕೆ ಬಿಜೆಪಿ ಸದಸ್ಯರಿಗೆ ನಾಚಿಕೆ ಆಗಬೇಕು. ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿಲ್ಲ, ಗ್ಯಾರಂಟಿ ಯೋಜನೆ ಬಗ್ಗೆ ಪ್ರಶ್ನಿಸುತ್ತಿದ್ದೀರಿ. ಅಲ್ಲಿ ಕೊಬ್ಬರಿ ಬೆಲೆ 6500 ಸಾವಿರಕ್ಕೆ ಕುಸಿದಿದೆ. ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಕೊಬ್ಬರಿಗೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೆಂಗು ಬೆಳೆಗಾರರು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಯಾವ ಅಜಿತ್‌ ಪವಾರ್‌ ಸೃಷ್ಟಿಸ್ತಾರೋ ಗೊತ್ತಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಈ ವೇಳೆ ಮಧ್ಯಪ್ರವೇಶಿಸಿದ ಎಚ್‌.ಡಿ.ಕುಮಾರಸ್ವಾಮಿ, ‘ಶಿವಲಿಂಗೇಗೌಡರಿಗೆ ಏಕಾಏಕಿ ತೆಂಗು ಬೆಳೆಗಾರರ ಬಗ್ಗೆ ಅನುಕಂಪ ಬಂದಿದೆ. ಚುನಾವಣೆಗೆ ಮುನ್ನ ತಾವು ಅಧಿಕಾರಕ್ಕೆ ಬಂದ ಮರುಗಳಿಗೆಯಲ್ಲೇ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ 15 ಸಾವಿರ ರು. ಬೆಂಬಲ ಬೆಲೆ ನೀಡಿ ಖರೀದಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದರು. ಆದರೆ, ಮಾಡಿಲ್ಲ. ನಾಚಿಕೆ ಆಗಬೇಕಿರುವುದು ಈಗ ಕಾಂಗ್ರೆಸ್‌ನವರಿಗೆ’ ಎಂದು ಡಿ.ಕೆ.ಶಿವಕುಮಾರ್‌ ಅವರ ಪತ್ರಿಕಾ ಹೇಳಿಕೆಯೊಂದನ್ನು ಪ್ರದರ್ಶಿಸಿ ತಿರುಗೇಟು ನೀಡಿದರು. ಇದಕ್ಕೆ ಶಿವಲಿಂಗೇಗೌಡ ಅವರು, ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ ಎಂದರು. ಅಲ್ಲಿಗೆ ಸ್ಪೀಕರ್‌ ಚರ್ಚೆ ಮುಗಿಸಿದರು.

click me!