ಲೋಕಸಭೆ ಚುನಾವಣೆ ಫಲಿತಾಂಶ ಇತಿಹಾಸದ ಪುಟದಲ್ಲಿ ಬರೆಯುವಂತಿರಲಿ: ಬಿ.ವೈ.ವಿಜಯೇಂದ್ರ

By Kannadaprabha News  |  First Published Dec 25, 2023, 7:03 AM IST

ವಿಧಾನಸಭೆ ಚುನಾವಣೆ ನಂತರ ಮಂಕು ಕವಿದಂತಿದ್ದ ರಾಜ್ಯ ಬಿಜೆಪಿ ಕಾರ್ಯಕರ್ತರು ಮತ್ತೆ ಪುಟಿದೇಳುವ ಕಾಲ ಮರಳಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯದ ಇತಿಹಾಸದ ಪುಟಗಳಲ್ಲಿ ಬರೆದಿಡುವಂತೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. 


ದಾವಣಗೆರೆ (ಡಿ.25): ವಿಧಾನಸಭೆ ಚುನಾವಣೆ ನಂತರ ಮಂಕು ಕವಿದಂತಿದ್ದ ರಾಜ್ಯ ಬಿಜೆಪಿ ಕಾರ್ಯಕರ್ತರು ಮತ್ತೆ ಪುಟಿದೇಳುವ ಕಾಲ ಮರಳಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯದ ಇತಿಹಾಸದ ಪುಟಗಳಲ್ಲಿ ಬರೆದಿಡುವಂತೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ನಗರದ ಕೆಬಿ ಬಡಾವಣೆಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪಕ್ಷದ ಮುಖಂಡರು, ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಮಗೆ ಸಾಕಷ್ಟು ಹಿನ್ನಡೆಯಾಗಿದ್ದು ನಿಜವಾದರೂ, ಬಹುಮತ ಬಂದ ಕಾಂಗ್ರೆಸ್ ದಿನದಿನಕ್ಕೂ ದುರಂಹಾರದಿಂದ ವರ್ತಿಸುತ್ತಲೇ ಇದೆ ಎಂದರು.

ಕಾಂಗ್ರೆಸ್ಸಿಗರು ಅಧಿಕಾರ ಶಾಶ್ವತ ಎಂಬ ಭ್ರಮೆಯಲ್ಲಿದ್ದಾರೆ. ಇನ್ನೂ ಎಷ್ಟು ದಿನ ಅಧಿಕಾರದಲ್ಲಿರುತ್ತಾರೆಂಬುದನ್ನು ನೋಡೋಣ. ಯಾವುದೇ ಒಂದು ಧರ್ಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಎಲ್ಲಾ ವರ್ಗದವರ ಸಹಕಾರದಿಂದ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿ ಆಗಿದ್ದೇನೆಂಬುದನ್ನೇ ಮರೆತಂತಿದೆ ಎಂದು ಅವರು ಕುಟುಕಿದರು. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡುವುದಾಗಿ ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದಾರೆ. ಹಿಂದು ಮಹಿಳೆಯರು ವಿವಿಧ ಇಲಾಖೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದರೆ ಕೊರಳಲ್ಲಿನ ತಾಳಿ, ಕಿವಿಯೋಲೆಗಳನ್ನು ಕಿತ್ತಿಡಿಸುವ ಸಿದ್ದರಾಮಯ್ಯ ಸರ್ಕಾರ, ಹಿಜಾಬ್‌ ಧರಿಸಲು ಅವಕಾಶ ನೀಡುತ್ತೇವೆನ್ನುವ ಮೂಲಕ ದರ್ಬಾರ್ ನಡೆಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Tap to resize

Latest Videos

ನನಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದು ಬಿಜೆಪಿ ಹೈಕಮಾಂಡ್‌: ವಿಜಯೇಂದ್ರ

ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ಸಿಗೆ ಅಧಿಕಾರ ಸಿಕ್ಕಿರಬಹುದು. ಬಡವರು, ರೈತರು, ಮಹಿಳೆಯರ ವಿರೋಧಿಯಂತೆ ವರ್ತಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸಿಗೆ ತಕ್ಕ ಉತ್ತರವನ್ನು ರಾಜ್ಯದ ಜನತೆ ನೀಡುವುದು ಖಚಿತ. ನಮ್ಮಲ್ಲೂ ಸಣ್ಣಪುಟ್ಟ ವ್ಯತ್ಯಾಸ, ಭಿನ್ನಾಭಿಪ್ರಾಯ, ಅಸಮಾಧಾನಗಳಿದ್ದರೂ, ಅವುಗಳನ್ನೆಲ್ಲಾ ಮರೆತು, ವೀರ ಯೋಧರಂತೆ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲರೂ ಕೆಲಸ ಮಾಡೋಣ. ವೀರ ಸೇನಾನಿಗಳಾಗಿ ಪಕ್ಷಕ್ಕೆ ಶಕ್ತಿ ತುಂಬೋಣ. 28 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ಸಿಗೆ ಉತ್ತರ ನೀಡೋಣ ಎಂದು ಅವರು ಕರೆ ನೀಡಿದರು.

ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ಯುವಕರು ಮಿಂಚನಂತೆ ಪುಟಿದೆದ್ದಿದ್ದಾರೆ. ನರೇಂದ್ರ ಮೋದಿಯವರಿಗೆ ಮೂರನೇ ಬಾರಿಗೆ ಪ್ರಧಾನಿಯಾಗಿಸಲು ಉತ್ಸಾಹದಲ್ಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದು ಕರೆ ನೀಡಿದರು. ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 28 ಕ್ಷೇತ್ರವನ್ನೂ ಗೆಲ್ಲಿಸಲು ನಾವೆಲ್ಲರೂ ಕಟಿಬದ್ಧರಾಗೋಣ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯಲ್ಲೂ ಹಿನ್ನಡೆ ಅನುಭವಿಸಿದೆ. ಮುಂದೆ ಜಿಲ್ಲೆಯ 8 ಕ್ಷೇತ್ರದಲ್ಲೂ ಬಿಜೆಪಿಯನ್ನು ಗೆಲ್ಲಿಸುವಂತೆ ಕೆಲಸ ಮಾಡೋಣ. ಈ ಮೂಲಕ ವಿಜಯೇಂದ್ರರ ಕೈಬಲಪಡಿಸೋಣ ಎಂದು ತಿಳಿಸಿದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋದಾಗಿ ವಿಜಯೇಂದ್ರ ಹೇಳಿದ್ದಾರೆ: ಕೆ.ಎಸ್.ಈಶ್ವರಪ್ಪ

ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಎಂ.ಬಸವರಾಜ ನಾಯ್ಕ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ನಿಕಟ ಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಪಿ.ಸಿ.ಶ್ರೀನಿವಾಸ ಭಟ್, ಗೌತಮ್ ಜೈನ್‌, ಎಚ್.ಪಿ.ವಿಶ್ವಾಸ್‌, ಜಿ.ಎಸ್.ಶ್ಯಾಮ್‌, ಪಾಲಿಕೆ ಸದಸ್ಯ ಎಸ್.ಟಿ.ವೀರೇಶ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ ಇತರರು ಇದ್ದರು.

click me!