ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ದಿನಗಳಿಂದ ಈ ವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿಷಯಾಧಾರಿತ ಚರ್ಚೆಗೆ ನಾವು ಸಿದ್ಧರಿದ್ದೇವೆ. ಬೇಕಾದರೆ ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸವಾಲು ಹಾಕಿದರು.
ಹುಬ್ಬಳ್ಳಿ (ಫೆ.07): ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ದಿನಗಳಿಂದ ಈ ವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿಷಯಾಧಾರಿತ ಚರ್ಚೆಗೆ ನಾವು ಸಿದ್ಧರಿದ್ದೇವೆ. ಬೇಕಾದರೆ ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸವಾಲು ಹಾಕಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳ ಅವಧಿಯಲ್ಲಿ ಸಾಲ ಏಕೆ ಹೆಚ್ಚಾಯಿತು? 1947ರಿಂದ 2014ರ ವರೆಗೆ ಸಾಕಷ್ಟು ಪ್ರಧಾನಿಗಳು ಬಂದು ಹೋಗಿದ್ದಾರೆ. ಆ ಅವಧಿಯಲ್ಲಿ ದೇಶದ ಸಾಲ ಕೇವಲ ₹55 ಲಕ್ಷ ಕೋಟಿ ಇತ್ತು.
ಆದರೆ, 2014ರ ನಂತರದಲ್ಲಿ 165 ಲಕ್ಷ ಕೋಟಿ ಸಾಲವಾಗಿದೆ. ಈ ಬಗ್ಗೆ ಸ್ವತಃ ನಿರ್ಮಲಾ ಸೀತಾರಾಮನ್ ಹೇಳಿಕೆ ಕೊಟ್ಟಿದ್ದಾರೆ ಎಂದರು. ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ಶೇ. 211ರಷ್ಟು ಹೆಚ್ಚು ಸಾಲ ಮಾಡಿದೆ. ನಮ್ಮ ಅವಧಿಯಲ್ಲಿ ₹50-60ಗೆ ಡೀಸೆಲ್, ಪೆಟ್ರೋಲ್ ನೀಡಿದ್ದೇವೆ. ಜನರಿಕ್ ಮೆಡಿಸನ್ ದರ ಹೆಚ್ಚಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಬಿಜೆಪಿ ನಾಯಕರು ಚರ್ಚೆಗೆ ಸಿದ್ಧರಿದ್ದಾರಾ ಎಂದು ಸವಾಲು ಹಾಕಿದರು.
ಮಹಿಳೆಯರು ನಾಪತ್ತೆ: ಬೇಟಿ ಬಚಾವೋ ಬೇಟಿ ಪಢಾವೋ ಎಂದು ಹೇಳಿಕೊಳ್ಳುವ ಕೇಂದ್ರ ಬಿಜೆಪಿ ನಾಯಕರು ದೇಶದಲ್ಲಿ ನಾಪತ್ತೆಯಾಗಿರುವ 37 ಲಕ್ಷ ಹೆಣ್ಣುಮಕ್ಕಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮೇಕ್ ಇನ್ ಇಂಡಿಯಾ ಅಡಿ ಏನೇನು ಮಾಡಿದ್ದೀರಿ ಎಂಬುದರ ಬಗ್ಗೆ ಜನರಿಗೆ ಉತ್ತರ ನೀಡಬೇಕು. ಬಾಯಿಗೆ ಬಂದಂತೆ ಮಾತನಾಡದೇ ವಿಷಯಾಧಾರಿತ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವಾಗ ಬೇಕಾದರೂ ಚರ್ಚೆಗೆ ಕರೆದರೂ ನಾನು ಸಿದ್ಧನಿದ್ದೇನೆ ಎಂದರು.
ಧರ್ಮಸ್ಥಳ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮವಾಗಿ ಘೋಷಣೆ: ಸಚಿವ ಈಶ್ವರ ಖಂಡ್ರೆ
ಕೋವಿಡ್ ಸಂದರ್ಭದಲ್ಲಿ ಪ್ರಧಾನಿಗಳು ಪ್ರತ್ಯೇಕ ಟ್ರಸ್ಟ್ ರಚಿಸಿಕೊಂಡು ಹಣ ಸಂಗ್ರಹಿಸಿದ್ದಾರೆ. ಪ್ರಧಾನಮಂತ್ರಿ ತುರ್ತು ಪರಿಹಾರ ನಿಧಿ ಇದ್ದಾಗಲೂ ಪ್ರತ್ಯೇಕ ಟ್ರಸ್ಟ್‌ನ ಅಗತ್ಯವೇನಿತ್ತು. ಕೋವಿಡ್ ಸಂದರ್ಭದಲ್ಲಿ ಸಂಗ್ರಹಿಸಿದ್ದ ₹30 ಸಾವಿರ ಕೋಟಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಅಲ್ಲದೆ, ಹಿಂದೂ ನಾಗರಿಕ ಸಂಹಿತೆಯನ್ನು ಜಾರಿಗೆ ತಂದವರು ನೆಹರು ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಆದರೆ, ಬಿಜೆಪಿಗರು ಅದರ ಶ್ರೇಯವನ್ನು ಪಡೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.