ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರು ಮೇಲಿಂದ ಮೇಲೆ ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಪಾರ್ಟಿ, ಟೀ ಪಾರ್ಟಿ ಅಂತಾ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದಾ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲೋಚನೆ ಮಾಡಬೇಕಾದ ವಿಷಯ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ದಾವಣಗೆರೆ (ಅ.12): ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರು ಮೇಲಿಂದ ಮೇಲೆ ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಪಾರ್ಟಿ, ಟೀ ಪಾರ್ಟಿ ಅಂತಾ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದಾ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲೋಚನೆ ಮಾಡಬೇಕಾದ ವಿಷಯ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ನಗರದ ಜಿಲ್ಲಾ ಕಾರಾಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ಬಗ್ಗಲ್ಲ, ಜಗ್ಗಲ್ಲ, ಹೆದರಲ್ಲ ಅಂದ್ರೆ ಇದು ಪ್ರಜಾಪ್ರಭುತ್ವ. ಇಲ್ಲಿ ಇಂತಹದ್ದೆಲ್ಲಾ ನಡೆಯುವುದಿಲ್ಲ. ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಪ್ರತಿಯೊಬ್ಬರೂ ತಲೆಬಾಗಬೇಕು. ಜನರಿಗೆ ಹೆದರಲೇಬೇಕು. ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿಸಬೇಕು. ಕೆಳಗಿಳಿಸಬೇಕೆಂಬ ಆತುರ, ಅವಸರ ಬಿಜೆಪಿ ಇತರೆ ಪಕ್ಷಗಳಿಗೆ ಅಲ್ಲ. ಆದರೆ, ಕಾಂಗ್ರೆಸ್ಸಿನವರಿಗೆ ಅದರ ಆತುರ, ಅವಸರ ತೀವ್ರವಾಗಿ ಇದ್ದಂತಿದೆ ಎಂದು ಕುಟುಕಿದರು.
ಒಂದುವೇಳೆ ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್ಸಿನವರಿಗೆ ವಿಶ್ವಾಸವಿದ್ದಿದ್ದರೆ ಇಂತಹ ಸಭೆಗಳು, ಪಾರ್ಟಿಗಳೇ ನಡೆಯುತ್ತಿರಲಿಲ್ಲ. ಆದರೆ, ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯ ಮೇಲೆ ವಿಶ್ವಾಸವಿಲ್ಲ. ಹಾಗಾಗಿಯೇ ಮೀಟಿಂಗ್‌ಗಳು ನಡೆಯುತ್ತಿವೆ. ಮುಡಾ ನಿವೇಶನ ಭ್ರಷ್ಟಾಚಾರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ, ಅರ್ಕಾವತಿ ಹಗರಣ ಹೀಗೆ ಭ್ರಷ್ಟಾಚಾರಗಳ ವಿರುದ್ಧ ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದು ಸಿ.ಟಿ.ರವಿ ಹೇಳಿದರು. ಕಾಂಗ್ರೆಸ್ಸಿನವರ ಡಿನ್ನರ್ ಪಾರ್ಟಿ, ಟೀ ಪಾರ್ಟಿಗಳನ್ನು ನೋಡಿದಾಗ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿದ್ದರಾಮಯ್ಯ ಪದಚ್ಯುತಿಯಾಗುವ ವಿಚಾರ ಗೊತ್ತಾಗಿರಬಹುದು. ಈಗ ವಿಷಯಾಂತರ ಮಾಡಲು ಸಿದ್ದರಾಮಯ್ಯ ಜಾತಿ ಗಣತಿ ವಿಚಾರ ಮುನ್ನಲೆಗೆ ತಂದಿದ್ದಾರೆ ಎಂದು ಅವರು ಟೀಕಿಸಿದರು.
undefined
ಮೀಸಲಾತಿ ವಿರೋಧಿಸಲು ನೆಹರು ಪತ್ರ!: ಜವಾಹರ ಲಾಲ್ ನೆಹರು ಪ್ರಧಾನಿ ಆಗಿದ್ದಾಗ ಮೀಸಲಾತಿ ವಿರೋಧಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಖುದ್ದಾಗಿ ಪತ್ರ ಬರೆದಿದ್ದರು. ಈಗ ಅದೇ ಕಾಂಗ್ರೆಸ್ ಪಕ್ಷದವರು ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಜಾತಿಗಣತಿಯು ಈಗ ನೆನಪಾಗುತ್ತಿದೆಯೇ? ಕಾಂತರಾಜು ಆಯೋಗ 2010ರಲ್ಲೇ ವರದಿ ಸಲ್ಲಿಸಿತ್ತು. ಆದರೆ, ಈಗ ಕುರ್ಚಿ ವಿಚಾರಕ್ಕೆ ಬರುತ್ತಿದ್ದಂತೆ ಜಾತಿ ಗಣತಿ ನೆನಪಾಯಿತೇ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ಮುಡಾ ಕಳಂಕ ಮರೆಮಾಚಲು ಜಾತಿ ಗಣತಿ ಮುನ್ನಲೆಗೆ ಯತ್ನ: ಸಿ.ಟಿ.ರವಿ ಆರೋಪ
ಮಂಡಲ ಆಯೋಗ ಕುಂಡಿ ಅಡಿ ಹಾಕಿಕೊಂಡಿದ್ರು: ಕಾಂಗ್ರೆಸ್ಸಿಗೆ ಮೀಸಲಾತಿ ಬಗ್ಗೆ ಬದ್ಧತೆ ಇಲ್ಲ. ಮೀಸಲಾತಿ ವಿರೋಧಿಗಳೆಂದರೆ ಅದು ಕಾಂಗ್ರೆಸ್‌ನವರು. ಈ ಹಿಂದೆ ವೀರಶೈವ ಲಿಂಗಾಯತರನ್ನು ಒಡೆಯಲು ಬಳಕೆ ಮಾಡಿಕೊಂಡಿದ್ದ ಕಾಂಗ್ರೆಸ್‌ನವರು ಎಂಬುದನ್ನು ಜನ ಮರೆತಿಲ್ಲ. ಸಾಮಾಜಿಕ ನ್ಯಾಯ ಕೊಡಿಸಲು ಬಿಜೆಪಿ ಯಾವಾಗಲೂ ಬದ್ಧವಿರುವ ಪಕ್ಷ. ಮಂಡಲ ಆಯೋಗವನ್ನೇ ಕುಂಡಿ ಅಡಿ ಹಾಕಿಕೊಂಡಿದ್ದವರು ಇದೇ ಕಾಂಗ್ರೆಸ್ಸಿನವರು. ಜಾತಿಗಣತಿಗೆ ನಮ್ಮಿಂದ ಯಾವುದೇ ವಿರೋಧವಿಲ್ಲ. ಆದರೆ, ಅದನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಸಾಮಾಜಿಕ ನ್ಯಾಯ ಕೊಡಿಸಲು ಜಾತಿ ಗಣತಿ ಬಳಕೆ ಮಾಡಿಕೊಂಡರೆ ನಮ್ಮ ಬೆಂಬಲವಿದೆ. ಆದರೆ, ನಿಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಅದನ್ನು ದುರ್ಬಳಕೆ ಮಾಡಿಕೊಂಡರೆ ಮಾತ್ರ ನಾವು ಸಹಿಸಲ್ಲ ಎಂದು ಸಿ.ಟಿ.ರವಿ ಹೇಳಿದರು.