ರಾಜ್ಯದ ಇತಿಹಾಸದಲ್ಲೇ ನಡೆದಿರುವ ಬಹುದೊಡ್ಡ ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ಮುಡಾ ಹಗರಣಗಳ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಗ್ರಹಿಸಿದರು.
ಪಾಂಡವಪುರ (ಆ.07): ರಾಜ್ಯದ ಇತಿಹಾಸದಲ್ಲೇ ನಡೆದಿರುವ ಬಹುದೊಡ್ಡ ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ಮುಡಾ ಹಗರಣಗಳ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಗ್ರಹಿಸಿದರು. ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಜೆಡಿಎಸ್-ಬಿಜೆಪಿ ಮೈಸೂರು ಚಲೋ ಪಾದಯಾತ್ರೆ ಬೆಂಬಲಿಸಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಗದ್ದೆ ನಾಟಿ ಕಾರ್‍ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಕಾರ್‍ಯಕರ್ತರ ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಭ್ರಷ್ಟಚಾರವಾಗಿದೆ ಎಂದು ಆರೋಪಿಸಿದರೆ, ಇಲ್ಲ ಬರೀ 87 ಕೋಟಿ ಭ್ರಷ್ಟಚಾರವಾಗಿದೆ ಎಂಬುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಳ್ಳುತ್ತಾರೆ. ಅಲ್ಲದೇ, ಪೊಲೀಸ್ ವರ್ಗಾವಣೆ ದಂಧೆ ಸೇರಿದಂತೆ ಈ ಸರ್ಕಾರ ಸಾಕಷ್ಟು ಭ್ರಷ್ಟಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು. ವಾಲ್ಮೀಕಿ, ಮೈಸೂರು ಮುಡಾ ಹಗರಣದ ಹೊಣೆಹೊತ್ತು ಸಿಎಂ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್-ಬಿಜೆಪಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದೆ. ಪಾದಯಾತ್ರೆಯಲ್ಲಿ ಎರಡು ಪಕ್ಷದ ಹಲವು ನಾಯಕರು ಸೇರಿದಂತೆ ಸಾವಿರಾರು ಭಾಗವಹಿಸಿ ಯಶಸ್ವಿಗೊಳಿಸುತ್ತಿದ್ದಾರೆ ಎಂದರು.
ಮುಡಾದಲ್ಲಿ ಏನು ತಪ್ಪಾಗಿದೆ ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ: ಸಚಿವ ಆರ್.ಬಿ.ತಿಮ್ಮಾಪೂರ
ಪಾದಯಾತ್ರೆಯಲ್ಲಿ 10 ಕಿಮೀಗೆ ಒಂದು ವಿಧಾನಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಕಾರ್‍ಯಕರ್ತರು ಭಾಗವಹಿಸಲಿದ್ದಾರೆ. ಮದ್ದೂರು, ಮಂಡ್ಯ ಮುಗಿಸಿ ಗುರುವಾರ ಬೆಳಗ್ಗೆಯಿಂದ ತೂಬಿನಕೆರೆ ಕೈಗಾರಿಕೆ ಪ್ರದೇಶದ ಹೊರಡುವ ಪಾದಯಾತ್ರೆಯ ಜವಾಬ್ದಾರಿಯನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದೆ ಎಂದರು. ಪಾದಯಾತ್ರೆಯಲ್ಲಿ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಎರಡು ಪಕ್ಷಗಳ ಕಾರ್‍ಯಕರ್ತರು ಕನಿಷ್ಠ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಅದಕ್ಕಾಗಿ ಬಸ್‌ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.
ಎಚ್ಡಿಕೆ ಆ.11ಕ್ಕೆ ಭತ್ತನಾಟಿ: ಎರಡು ವರ್ಷದಿಂದ ಬರಗಾಲದಿಂದ ಬಳಲಿದ್ದ ರೈತರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದು ಮಂತ್ರಿಯಾದ ಬಳಿಕ ಉತ್ತಮ ಮಳೆಯಾಗಿ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಅದಕ್ಕಾಗಿ ಆ.11ರಂದು ತಾಲೂಕಿನ ಅರಳಕುಪ್ಪೆ-ಸೀತಾಪುರ ಗ್ರಾಮ ವ್ಯಾಪ್ತಿಯ ಕಾವೇರಿ ದಡದ ಮೇಲೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಗದ್ದೆ ನಾಟಿ ಮಾಡುವ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ಮಾತೆಗೆ ಪೂಜೆಸಲ್ಲಿಸಿ, ಬಳಿಕ ಭತ್ತದ ನಾಟಿಗೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಆ ಕಾರ್‍ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್‍ಯಕರ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಶಾಸಕರು ಅಮೆರಿಕಾದಲ್ಲಿಯೇ ನಾಟಿ ಮಾಡಲಿ: ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಮೇಲುಕೋಟೆ ಕ್ಷೇತ್ರದ ಶಾಸಕರು ಗೆದ್ದ ಬಳಿಕ ಕ್ಷೇತ್ರದಲ್ಲಿ ಇದದ್ದೇ ವಿರಳ. ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಸೇರಿದಂತೆ ಅನೇಕ ರಾಷ್ಟ್ರಹಬ್ಬಕ್ಕೂ ಗೈರಾದರು. ಜತೆಗೆ ಬರಗಾಲದಲ್ಲಿ ರೈತರ ಕಷ್ಟಕ್ಕೆ ಸ್ಪಂದನೆ ನೀಡಲಿಲ್ಲ. ಇದೀಗ ಉತ್ತಮ ಮಳೆಯಾಗಿ ರೈತರು ಸಂಭ್ರಮದಲ್ಲಿದ್ದಾರೆ. ಇಂತಹ ಸಂಭ್ರಮದಲ್ಲೂ ಶಾಸಕರು ಕ್ಷೇತ್ರದಲ್ಲಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
ಅಮೆರಿಕಾದಲ್ಲಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅಲ್ಲಿಯೇ ನಾಟಿ ಮಾಡಲಿ. ನಾವು ರೈತನ ಮಗ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಅರಳಕುಪ್ಪೆಯಲ್ಲಿಯೇ ಭತ್ತದ ನಾಟಿ ಮಾಡಿಸುತ್ತೇವೆ ಎಂದು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಜಿಪಂ ಮಾಜಿ ಸದಸ್ಯರಾದ ಸಿ.ಅಶೋಕ್, ಎಚ್. ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಮಾಜಿ ಅಧ್ಯಕ್ಷ ಸತೀಶ್, ಮುಖಂಡರಾದ ಲಿಂಗರಾಜು(ಗುಣ), ದೇವಪ್ಪ, ಸಗಾಯಂ ಸೇರಿದಂತೆ ಹಲವರು ಭಾಗವಹಿಸಿದ್ದರು.