
ಉಡುಪಿ (ಜೂ.23) : ವಿಧಾನಸಭೆಯ ನೂತನ ಶಾಸಕರಿಗೆ ಶ್ರೀ ರವಿಶಂಕರ ಗುರೂಜಿ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಂದ ಪ್ರೇರಣಾ ಉಪನ್ಯಾಸ ನೀಡುವ ಕಾರ್ಯಕ್ರಮಕ್ಕೆ ಎಸ್.ಡಿ.ಪಿ.ಐ. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಜೀದ್, ನಮ್ಮ ಶಾಸಕರಿಗೆ ಸಂವಿಧಾನ ಮತ್ತು ಆಡಳಿತ ಯೋಜನೆ ಕುರಿತು ಪಾಠ ಮಾಡಬೇಕು, ಆದರೆ ರವಿಶಂಕರ ಗುರೂಜಿ ಒಬ್ಬ ಆಧ್ಯಾತ್ಮಿಕ ವ್ಯಕ್ತಿ, ಡಾ.ವೀರೇಂದ್ರ ಹೆಗ್ಗಡೆಯವರು ವಿಶ್ವ ಹಿಂದು ಪರಿಷತ್ ಜೊತೆ ಗುರುತಿಸಿಕೊಂಡವರು. ಸಂಘ ಪರಿವಾರ ಹಿನ್ನೆಲೆಯ ವ್ಯಕ್ತಿಗಳನ್ನ ಕರೆದು ಏನು ಸಾಧಿಸಲು ಹೊರಟಿದ್ದಾರೆ, ಯಾರ ಮೆಚ್ಚುಗೆ ಗಳಿಸಲು ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದವರು ಪ್ರಶ್ನಿಸಿದ್ದಾರೆ.
ಪಿಎಫ್‌ಐ ಜೊತೆ ನಂಟು ಆರೋಪ: ಎಸ್‌ಡಿಪಿಐ ಕಚೇರಿ ಜಪ್ತಿ ಪ್ರಶ್ನಿಸಿದ್ದ ಅರ್ಜಿ ವಜಾ
ತಾವು ಜಾತ್ಯತೀತರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರು ಖಾದರ್ ಅವರಿಗೆ ಸ್ವಲ್ಪ ಬುದ್ಧಿ ಹೇಳಿ, ಸಂವಿಧಾನ ತಜ್ಞರಿಂದ ಹೊಸ ಶಾಸಕರಿಗೆ ಪಾಠ ಹೇಳಿಸಿ, ವೈಜ್ಞಾನಿಕವಾಗಿ ವಿಚಾರ ಮಂಡಿಸುವವರಿಂದ ಪಾಠ ಹೇಳಿಸಿ ಎಂದವರು ಸಲಹೆ ಮಾಡಿದ್ದಾರೆ.
ಕಾಂಗ್ರೆಸ್- ಬಿಜೆಪಿ ವ್ಯತ್ಯಾಸ?
ಕಾಂಗ್ರೆಸ್ ಸರ್ಕಾರ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನು ಯಥಾವತ್ತಾಗಿ ಜನತೆಗೆ ನೀಡಬೇಕು, ಗ್ಯಾರಂಟಿ ಘೋಷಿಸುವಾಗ ಶರತ್ತು ಹೇಳಿರಲಿಲ್ಲ, ಈಗ ಷರತ್ತುಗಳನ್ನು ಹಾಕುವುದು ಸರಿಯಲ್ಲ. ಜನರು ಬಿಜೆಪಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಈಗ ಸರ್ಕಾರ ವಿದ್ಯುತ್ ದರವನ್ನು ದುಪ್ಪಟ್ಟು ಮಾಡಿದೆ, ಹಾಗಾದರೆ ಕಾಂಗ್ರೆಸ್ ಮತ್ತು ಬಿಜೆಪಿಗೂ ಏನು ವ್ಯತ್ಯಾಸ ಎಂದವರು ಖಾರವಾಗಿ ಪ್ರಶ್ನಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಮುಸಲ್ಮಾನರಿಗೆ ಭಯವಿತ್ತು, ಅದಕ್ಕೆ ಶೇ. 92ರಷ್ಟುಮುಸ್ಲೀಮರು ಸರಾಸಗಟಾಗಿ ಕಾಂಗ್ರೆಸ್ಸಿಗೆ ಮತ ಹಾಕಿದರು. ಹಾಗಂತ ಎಸ್ಡಿಪಿಐ ರಾಜಕೀಯ ಭವಿಷ್ಯ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದವರು ತಮ್ಮ ಪಕ್ಷದ ಬಗ್ಗೆ ಸಮಜಾಯಿಶಿ ನೀಡಿದ್ದಾರೆ.
ಬಿಜೆಪಿ ಸರ್ಕಾರ ಹರ್ಷ, ಪ್ರವೀಣ್ ನೆಟ್ಟಾರು ಹತ್ಯೆ ಆದಾಗ 50 ಲಕ್ಷ ಕೊಟ್ಟಿತ್ತು. ಮಸೂದ್, ಫಾಝಿಲ…, ಶಮೀರ್, ಶಾಫಾಜ್ ಹತ್ಯೆಯಾದಾಗ ಪರಿಹಾರ ನೀಡಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಿದ್ದನ್ನು ಸ್ವಾಗತಿಸುತ್ತೇವೆ ಎಂದು ಮಜೀದ್ ಹೇಳಿದ್ದಾರೆ.
ಮಾನವೀಯತೆ ಆಧಾರದಲ್ಲಿ ಕಾಂಗ್ರೆಸ್ ಸರ್ಕಾರ ಪ್ರವೀಣ್ ನೆಟ್ಟಾರು ಪತ್ನಿಯ ಉದ್ಯೋಗ ಮುಂದುವರಿಸಿದೆ, ಆದರೆ ಜಲೀಲ…, ಫಾಜಿಲ…, ದೀಪಕ್ ರಾವ್, ದಿನೇಶ್ ಕನ್ಯಾಡಿ ಕುಟುಂಬದವರಿಗೆ ಅನುಕಂಪದ ಆಧಾರದಲ್ಲಿ ಯಾಕೆ ಉದ್ಯೋಗ ನೀಡಿಲ್ಲ. ಇದು ತಾರತಮ್ಯ ಅಲ್ಲವೇ ಮುಖ್ಯಮಂತ್ರಿಗಳೇ ಎಂದವರು ಪ್ರಸ್ನಿಸಿದ್ದಾರೆ.
ಮುಸ್ಲಿಂರ ಓಲೈಕೆಗೆ ಕಾಂಗ್ರೆಸ್ ಬಜರಂಗದಳ ನಿಷೇಧ ಘೋಷಣೆ: ಕುಯಿಲಾಡಿ ಸುರೇಶ್ ನಾಯಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.