
ಮಂಗಳೂರು(ಜ.02): ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡಬೇಕು, ಅಲ್ಲದೆ ಪ್ರಕರಣದ ಸಿಬಿಐ ತನಿಖೆ ನಡೆಸಬೇಕು. ತಪ್ಪಿದಲ್ಲಿ ಬಿಜೆಪಿ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಇಲ್ಲಿನ ಅಟಲ್‌ಸೇವಾ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಆಪ್ತರ ಕಿರುಕುಳಕ್ಕೆ ಹೆದರಿ ಬೀದರ್ ಗುತ್ತಿಗೆದಾರ ಸಚಿನ್ ಅವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಚಿವ ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು, ಈ ಪ್ರಕರಣವನ್ನು ಗಂಭೀರ ಪರಿಗಣಿಸಿ ಅವರನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಬುಲ್ಡೋಜರ್ ಬಾಬಾ ಆಗಲು ಬಟ್ಟೆ ಬದಲಿಸಿ: ಪ್ರಿಯಾಂಕ್ ಖರ್ಗೆಗೆ ಆಂದೋಲಾ ಶ್ರೀ ತಿರುಗೇಟು
ಪ್ರಿಯಾಂಕ್ ಖರ್ಗೆ ಅವರ ರಾಜಿನಾಮೆ ಪಡೆಯಲು ಮುಖ್ಯಮಂತ್ರಿಗಳು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ರಾಜಿನಾಮೆ ಪಡೆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಟ್ಟುಗೊಂಡು ತನ್ನ ಖುರ್ಚಿಗೆ ಕಂಟಕ ತರಬಹುದು ಎಂಬ ಭೀತಿ ಕಾಡುತ್ತಿದೆಯೇ ಎಂದು ವೇದವ್ಯಾಸ್ ಕಾಮತ್ ಪ್ರಶ್ನಿಸಿದರು.
ಸರ್ಕಾರವನ್ನು ಸಮರ್ಥಿಸುವ ಖಾದರ್
ಮುಂದೆ ಸಂಪುಟ ವಿಸ್ತರಣೆ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರು ಮಂತ್ರಿಯಾಗಲಿದ್ದಾರೆ. ಹಾಗಾಗಿ ಅವರು ಸರ್ಕಾರವನ್ನು ಸಮರ್ಥಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಸ್ಪೀಕರ್ ಕ್ಷೇತ್ರಕ್ಕೆ ಅನುದಾನ ಸಿಗುತ್ತದೆ ಎನ್ನುತ್ತಿದ್ದಾರೆ, ಹಾಗಾದರೆ ನಿಮ್ಮ ಕ್ಷೇತ್ರಕ್ಕೆ ಅನುದಾನ ಯಾಕೆ ಸಿಗುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವೇದವ್ಯಾಸ್ ಕಾಮತ್, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇಲ್ಲಿವರೆಗೆ ನಮಗೆ ಯಾವುದೇ ಅನುದಾನ ಬಂದಿಲ್ಲ. ಕಳೆದ 20 ತಿಂಗಳಲ್ಲಿ ಶಿಲಾನ್ಯಾಸಕ್ಕೆ ಯು.ಟಿ.ಖಾದರ್ ಅವರು ಒಂದೇ ಒಂದು ತೆಂಗಿನಕಾಯಿ ಒಡೆದದ್ದು ನಾನು ಕೇಳಿಲ್ಲ. ನಾನು ಕೂಡ ಒಂದೇ ಒಂದು ತೆಂಗಿನಕಾಯಿ ಶಿಲಾನ್ಯಾಸಕ್ಕೆ ಒಡೆದಿಲ್ಲ ಎಂದು ಹೇಳಿದರು.
ಮುಖಂಡರಾದ ರಮೇಶ್ ಕಂಡೆಟ್ಟು, ಭಾನುಮತಿ, ವಿಜಯ ಕುಮಾರ್ ರೈ, ಪೂರ್ಣಿಮಾ, ನಿತಿನ್ ಕುಮಾರ್ ಇದ್ದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ‘ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಇದು ರಾಜಕೀಯ ದ್ವೇಷದಿಂದ ಮಾಡುತ್ತಿರುವ ಆರೋಪ ಆಗಿರುವುದರಿಂದ ಪ್ರಿಯಾಂಕ್ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್ ಖರ್ಗೆಯವರು ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಒತ್ತಾಯ ರಾಜಕೀಯ ಪ್ರೇರಿತ. ಪ್ರಕರಣದಲ್ಲಿ ಪ್ರಿಯಾಂಕ್ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಜತೆಗೆ ಪ್ರಕರಣದಲ್ಲಿ ಯಾವುದೇ ವಿಚಾರಣೆಗೂ ತಾವು ಸಿದ್ಧ ಎಂದು ಪ್ರಿಯಾಂಕ್ ಹೇಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಇಂಥದ್ದೇ ಪ್ರಕರಣದಲ್ಲಿ ಹಿಂದೆ ಬಿಜೆಪಿ ಕೆ.ಎಸ್.ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆದಿರಲಿಲ್ಲವೇ? ಎಂಬ ಪ್ರಶ್ನೆಗೆ, ‘ಆಗ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಈಶ್ವರಪ್ಪ ಹೆಸರು ಬರೆದಿದ್ದರು. ಈಗ ಈ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಹೆಸರು ಇದೆಯಾ? ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಇಲ್ಲ. ಜತೆಗೆ ಅವರು ಎಲ್ಲಾ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ. ಹೀಗಾಗಿ ಮೊದಲು ಸಿಐಡಿ ತನಿಖೆ ನಡೆಸಿ ವರದಿ ಕೊಡಲಿ’ ಎಂದು ಹೇಳಿದರು.
ಬಿಜೆಪಿಯ ಭ್ರಷ್ಟರಿಂದ ನಮಗೆ ಪಾಠ: ಸಚಿವ ಶರಣಪ್ರಕಾಶ ಪಾಟೀಲ್ ಕಿಡಿ
ಸಿಬಿಐಗೆ ವಹಿಸಿಲ್ಲ:
ಬಿಜೆಪಿಯವರು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಪೊಲೀಸರ ಬಗ್ಗೆ ಬಿಜೆಪಿಯವರಿಗೆ ನಂಬಿಕೆಯಿಲ್ಲವೇ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಈಗ ಸಿಬಿಐ ತನಿಖೆ ಬೇಕು ಎನ್ನಲು ಅವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಎಂಬುವರು ಪ್ರಿಯಾಂಕ್ ಖರ್ಗೆ ಆಪ್ತನೊಬ್ಬ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.