
ಬೆಂಗಳೂರು (ಆ.21): ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸೂಚನೆಯಂತೆ 6 ತಿಂಗಳಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಲೀಗಲ್ ಬ್ಯಾಂಕ್ ರಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಜತೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಹೇಗಿರುತ್ತದೆಯೋ ಅದೇ ರೀತಿ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದಿಂದ ಕಾನೂನು ಬ್ಯಾಂಕ್ ಇರಬೇಕು ಎಂದು ಸೂಚಿಸಿದ್ದರು. ಅವರ ಮಾರ್ಗದರ್ಶನದಂತೆ ಮುಂದಿನ ಆರು ತಿಂಗಳಲ್ಲಿ 224 ಕ್ಷೇತ್ರಗಳಲ್ಲೂ ಲೀಗಲ್ ಬ್ಯಾಂಕ್ ರಚಿಸಬೇಕು ಎಂದು ನಮ್ಮ ಕಾನೂನು ಘಟಕದ ಅಧ್ಯಕ್ಷರಿಗೂ ನಿರ್ದೇಶನ ನೀಡಿದ್ದೇನೆ. ಸಮಸ್ಯೆಗಳು ಉಂಟಾದಾಗ ಶೀಘ್ರ ಪರಿಹಾರಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಶೋ ಮ್ಯಾನ್‌ಗಳು ನಾಯಕರಲ್ಲ: ಮುಖಂಡರು ಒನ್ ಮ್ಯಾನ್ ಶೋ ರೀತಿ ಇದ್ದರೆ ನಾನು ಎಂದಿಗೂ ಒಪ್ಪುವುದಿಲ್ಲ. ಬೂತ್ ಮಟ್ಟದಲ್ಲಿ ನಾಯಕರಾಗಿರಬೇಕು. ನಮ್ಮದು ಬಿಜೆಪಿ ಪ್ರಾಬಲ್ಯದ ಪ್ರದೇಶ ಎಂದು ಹೇಳಬಾರದು. ನಿಮ್ಮ ಬೂತ್ ಮಟ್ಟದಲ್ಲೇ ಸಂಘಟನೆ ಮಾಡದಿದ್ದರೆ ನಾಯಕರು ಎಂದು ಹೇಗೆ ಒಪ್ಪುವುದು? ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಮುಖಂಡರು ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶುಕ್ರವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆಗಮಿಸುತ್ತಿದ್ದು, ಸಂಘಟನೆಗೆ ಸಂಬಂಧಿಸಿ ಬೆಂಗಳೂರಿನ ಪರಾಜಿತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಶಾಸಕರನ್ನು ಕರೆದು ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಭೆ ನಡೆಸಲಿದ್ದೇವೆ. ಬ್ಲಾಕ್ ಅಧ್ಯಕ್ಷರನ್ನೂ ಆಹ್ವಾನಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಕಂಪ್ಯೂಟರ್ ಕ್ರಾಂತಿ: ಇತ್ತೀಚೆಗೆ ಯುವ ಮುಖಂಡ ಬಿ.ವಿ.ಶ್ರೀನಿವಾಸ್ ಅವರು ರನ್ ಫಾರ್ ರಾಜೀವ್ ಎಂಬ ಮ್ಯಾರಥಾನ್ ಆಯೋಜಿಸಿದ್ದರು. ಸುಮಾರು 15 ಸಾವಿರ ಜನ ಬೆಳಗ್ಗೆಯೇ ಆಗಮಿಸಿದ್ದರು. ಯುವಕರಿಗೆ ರಾಜೀವ್ ಗಾಂಧಿ ಸ್ಫೂರ್ತಿಯಾಗಿದ್ದಾರೆ. ರಾಜೀವ್ ಗಾಂಧಿ ಅವರ ಕೊಡುಗೆಯನ್ನು ನಮ್ಮ ಜನ ಇಂದಿಗೂ ಸ್ಮರಿಸುತ್ತಿದ್ದಾರೆ. ದೇಶಕ್ಕೆ ಕಂಪ್ಯೂಟರ್ ಹಾಗೂ ದೂರವಾಣಿ ತಂತ್ರಜ್ಞಾನದ ಕ್ರಾಂತಿ ತಂದವರು ರಾಜೀವ್ ಗಾಂಧಿ. ನಾನೂ ಸೇರಿ ಅನೇಕ ಯುವ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಇಂದಿಗೂ ಭೂ ಸುಧಾರಣಾ ಕಾಯ್ದೆ ಬಗ್ಗೆ ಚರ್ಚಿಸುತ್ತೇವೆ. ಕೆಲವರಿಗೆ ಉಪಕಾರ ಸ್ಮರಣೆ ಇಲ್ಲ. ನಮಗೆ ಯಾರಿಂದ ಭೂಮಿ ಸಿಕ್ಕಿದೆ ಎಂದು ನೆನಪಿರುವುದಿಲ್ಲ. ದೇವರಾಜ ಅರಸು ಹಾಗೂ ಇಂದಿರಾ ಗಾಂಧಿ ಅವರ ಚಿಂತನೆಯಿಂದ ಬಡವರಿಗೆ ಭೂಮಿ ನೀಡಿದ ಪರಿಣಾಮ ಲಕ್ಷಾಂತರ ಜನ ಬದುಕು ಕಂಡುಕೊಂಡರು. ದೇಶಕ್ಕೆ ಇಂದಿರಾಗಾಂಧಿ ಅವರು ಹೇಗೆ ಬಲಿಷ್ಠ ನಾಯಕಿಯಾಗಿದ್ದರೋ, ಅದೇ ರೀತಿ ನಮ್ಮ ರಾಜ್ಯಕ್ಕೆ ದೇವರಾಜ ಅರಸು ಅವರು ಬಲಿಷ್ಠ ನಾಯಕರು ಎಂದು ಬಣ್ಣಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್, ಮಾಜಿ ಸದಸ್ಯ ನಾರಾಯಣಸ್ವಾಮಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.