
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶಿಸಿರುವುದರಿಂದ ನಾಯಕತ್ವ ಬದಲಾವಣೆ ಈ ಚುನಾವಣೆಗೂ ಮೊದಲೇ ಆಗುವುದಾ ಅಥವಾ ಚುನಾವಣೆ ಮುಗಿಯುವರೆಗೂ ಮುಂದೂಡಲ್ಪಡುತ್ತದೆಯಾ ಎಂಬ ಚರ್ಚೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಶುರುವಾಗಿದೆ.
ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಮಂಡನೆಗೆ ಸಿದ್ಧವಾಗುತ್ತಿದ್ದು, ಶೀಘ್ರ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆ ಆರಂಭವಾಗಲಿವೆ. ಮಾರ್ಚ್ ಮೊದಲ ವಾರ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಇದಾದ ಬಳಿಕ ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಸ್ತಾಂತರ ಪ್ರಹಸನ ಮತ್ತೆ ಚಾಲ್ತಿಗೆ ಬರಲಿದೆ ಎಂಬ ಮಾತುಗಳು ಪಕ್ಷದಲ್ಲಿ ದಟ್ಟವಾಗಿ ಕೇಳಿಬರುತ್ತಿದ್ದವು. ಆದರೆ, ಈಗ ಬೆಂಗಳೂರಿನ ಪಾಲಿಕೆಗಳ ಚುನಾವಣೆಗೆ ಸುಪ್ರೀಂಕೋರ್ಟ್ ಜೂ.30ರ ಗಡುವು ನೀಡಿರುವುದು ನಾಯಕತ್ವ ಬದಲಾವಣೆ ವಿಚಾರವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಬಹುದು ಎಂಬ ಅಭಿಪ್ರಾಯಗಳಿಗೆ ಎಡೆ ಮಾಡಿದೆ.
ಒಂದೆಡೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಂಬರುವ ಅಸ್ಸಾಂ ಚುನಾವಣಾ ವೀಕ್ಷಕರನ್ನಾಗಿ ಎಐಸಿಸಿ ನೇಮಕ ಮಾಡಿದೆ. ಅಸ್ಸಾಂ ಚುನಾವಣಾ ಪ್ರಕ್ರಿಯೆ ಮಾರ್ಚ್/ಏಪ್ರಿಲ್ ವೇಳೆಗೆ ಬಿರುಸುಗೊಳ್ಳಲಿದೆ. ಅಸ್ಸಾಂ ಚುನಾವಣೆ ಬೆನ್ನಲ್ಲೇ ಬೆಂಗಳೂರು ಪಾಲಿಕೆ ಚುನಾವಣೆಗಳನ್ನು ಎದುರಿಸಬೇಕಾಗುತ್ತದೆ.
ತಾನೇ ರಚಿಸಿರುವ ಪಂಚ ಪಾಲಿಕೆಗಳ ಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಐದರಲ್ಲೂ ಗೆಲುವು ಸಾಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಟ್ಟಿಗೆ ಸೇರಿ ಚುನಾವಣೆ ಎದುರಿಸಬೇಕಾಗುತ್ತದೆ. ಒಂದು ವೇಳೆ ಅಷ್ಟರೊಳಗೇ ನಾಯಕತ್ವ ಬದಲಾವಣೆಯ ಪ್ರಯತ್ನಕ್ಕೆ ಹೈಕಮಾಂಡ್ ಮುಂದಾಗುತ್ತದೆಯೇ ಅಥವಾ ಚುನಾವಣೆ ಮುಗಿಯುವವರೆಗೂ ಕಾಯುತ್ತದೆಯೇ ಎಂದು ನಾಯಕರೇ ಚರ್ಚೆ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.