ರಾಗಾ ವಿರುದ್ಧ ಮಿತ್ರರೇ ಸಿಟ್ಟಾಗಿರುವುದೇಕೆ?

Prashant Natu   | Kannada Prabha
Published : Jan 11, 2026, 10:56 AM IST
Rahul gandhi

ಸಾರಾಂಶ

ನಿರ್ಣಯಗಳನ್ನು ತೆಗೆದುಕೊಳ್ಳುವಾಗ ರಾಹುಲ್ ಗಾಂಧಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರಮುಖ ನಿರ್ಣಯಗಳನ್ನು ಘೋಷಿಸುವಾಗಲೂ ಮಿತ್ರರನ್ನು ಸಂಪರ್ಕ ಮಾಡುವುದಿಲ್ಲ. ಸಂಸತ್‌ ಅಧಿವೇಶನ ವೇಳೆ ಜರ್ಮನಿಗೆ ಹೋಗಿ ಕುಳಿತರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಇಕ್ಕಟ್ಟಿಗೆ ಸಿಲುಕಿಸುವವರು ಯಾರು?

ಇಂಡಿಯಾ ಗೇಟ್‌

ಪ್ರಶಾಂತ್ ನಾತು

ಏಷ್ಯಾನೆಟ್ ಸುವರ್ಣನ್ಯೂಸ್

ವಿದೇಶ ಯಾತ್ರೆ, ಏಕಪಕ್ಷೀಯ ನಿರ್ಧಾರಕ್ಕೆ ಇಂಡಿ ಕೂಟದಲ್ಲಿ ಒಡಕು? । ಕಾಂಗ್ರೆಸ್‌ಗೆ ಈಗ ಪ್ರಿಯಾಂಕಾ ಅನಿವಾರ್ಯ ಆಗ್ತಾರಾ?

‘ನಿರ್ಣಯಗಳನ್ನು ತೆಗೆದುಕೊಳ್ಳುವಾಗ ರಾಹುಲ್ ಗಾಂಧಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರಮುಖ ನಿರ್ಣಯಗಳನ್ನು ಘೋಷಿಸುವಾಗಲೂ ಮಿತ್ರರನ್ನು ಸಂಪರ್ಕ ಮಾಡುವುದಿಲ್ಲ. ಸಂಸತ್‌ ಅಧಿವೇಶನ ವೇಳೆ ಜರ್ಮನಿಗೆ ಹೋಗಿ ಕುಳಿತರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಇಕ್ಕಟ್ಟಿಗೆ ಸಿಲುಕಿಸುವವರು ಯಾರು? ಹೀಗಾದರೆ ‘ಇಂಡಿಯಾ’ ಒಕ್ಕೂಟವನ್ನು ಮುಂದುವರೆಸುವುದು ಕಷ್ಟ ಆಗಬಹುದು’ಎಂದು ತೇಜಸ್ವಿ ಯಾದವ್‌, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಉದ್ಧವ್‌ ಠಾಕ್ರೆ ಅದಿಯಾಗಿ ಮಿತ್ರ ಪಕ್ಷಗಳು ಬೇಸರಗೊಂಡು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಎದುರು ತಮ್ಮ ದೂರು-ದುಮ್ಮಾನವನ್ನು ಹೇಳಿಕೊಂಡಿವೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಖರ್ಗೆ ಸಾಹೇಬರು ಎಲ್ಲವನ್ನೂ ಸೋನಿಯಾ ಗಾಂಧಿ ಗಮನಕ್ಕೆ ತಂದು ‘ದಯವಿಟ್ಟು ಮಿತ್ರರನ್ನು ಜೊತೆಗೆ ಕರೆದುಕೊಂಡು ಒಟ್ಟಿಗೆ ಹೋಗುವ ಬಗ್ಗೆ ರಾಹುಲ್‌ ಗಾಂಧಿ ಅವರನ್ನು ಒಮ್ಮೆ ಕರೆದು ಮಾತಾಡಿ’ ಎಂದು ಮನವಿ ಮಾಡಿದ್ದಾರೆ. ಅಖಿಲೇಶ್ ಯಾದವ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ, ಬಿಹಾರದಲ್ಲಿ ಮಾಡಿದ ತಪ್ಪುಗಳನ್ನು 2027ರಲ್ಲಿ ಉತ್ತರ ಪ್ರದೇಶದಲ್ಲಿ ಮಾಡಿದರೆ ಜೊತೆಗೆ ಹೋಗುವುದು ಕಷ್ಟ ಎಂದು ಖರ್ಗೆ ಸಾಹೇಬರ ಮೂಲಕ ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡಿದ್ದಾರೆ.

ಬಿಹಾರದ ಸೋಲಿನ ನಂತರ ರಾಹುಲ್‌ ಗಾಂಧಿ ಪ್ರಾಯೋಗಿಕವಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗಿನ ಮೈತ್ರಿಯನ್ನು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕಡಿದುಕೊಳ್ಳುವ ಘೋಷಣೆ ಮಾಡಿದ್ದಾರೆ. ಅಲ್ಲಿ ಏನು ಫಲಿತಾಂಶ ಬರುತ್ತದೆ ಅನ್ನುವುದರ ಮೇಲೆ ಶಿವಸೇನೆ ಮತ್ತು ಶರದ್‌ ಪವಾರ್‌ ಮೈತ್ರಿ ನಿರ್ಧಾರವಾಗಲಿದೆ. ಇಲ್ಲಿಯವರೆಗೆ ವಿಪಕ್ಷಗಳು ರಾಹುಲ್‌ ಗಾಂಧಿ ಅವರನ್ನು ಟೀಕಿಸುತ್ತಿದ್ದವು. ಆದರೆ ಈಗ ಕಾಂಗ್ರೆಸ್‌ನ ಮಿತ್ರರು ಕೂಡ ರಾಹುಲ್‌ ಗಾಂಧಿ ರಾಜಕೀಯ ಪ್ರಬುದ್ಧತೆಯನ್ನು ಪ್ರಶ್ನಿಸುತ್ತಿವೆ. ಹೀಗೆ ಸೋಲಿನ ಮೇಲೆ ಸೋಲುಗಳು ಬರುತ್ತಾ ಹೋದರೆ ಕಾಂಗ್ರೆಸ್‌ನ ಕೇಡರ್‌ ಕೂಡ ರಾಹುಲ್‌ ಗಾಂಧಿ ಮೇಲೆ ಮುನಿಸಿಕೊಂಡರೆ ಪಾರ್ಟಿಯ ಅಸ್ತಿತ್ವಕ್ಕೆ ಕಷ್ಟವಾದರೂ ಆಶ್ಚರ್ಯ ಇರುವುದಿಲ್ಲ.

ತೇಜಸ್ವಿ ಯಾದವ್‌ ಆಕ್ಷೇಪವೇನು?

ಬಿಹಾರ ಚುನಾವಣೆಯ 2 ತಿಂಗಳ ಹಿಂದಿನವರೆಗೂ ತೇಜಸ್ವಿ ಯಾದವ್‌ ಜನಪ್ರಿಯತೆ ಏರುಗತಿಯಲ್ಲಿತ್ತು. ಆದರೆ ಒಳ್ಳೆಯ ಸಮಯ ಇದ್ದಾಗ ರಾಹುಲ್‌ ಗಾಂಧಿ ನಮಗೆ ಯಾವುದೇ ದೃಷ್ಟಿಯಿಂದಲೂ ಸಹಾಯಕ್ಕೆ ಬರಲಿಲ್ಲ. ಬದಲಾಗಿ ನಮ್ಮನ್ನು ಮೂಲೆಗೆ ತಳ್ಳುವ ಪ್ರಯತ್ನ ಮಾಡಿದರು ಎಂದು ತೇಜಸ್ವಿ ಯಾದವ್‌ ಬೇಸರಗೊಂಡಿದ್ದಾರೆ. ಅವರ ಪ್ರಕಾರ, ಚುನಾವಣೆಗೆ ಮುಂಚೆ ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ನಿರ್ಧಾರವನ್ನು ರಾಹುಲ್‌ ಗಾಂಧಿ ವಿಳಂಬಗೊಳಿಸಿ ಅರ್ಧ ವಾತಾವರಣ ಹಾಳು ಮಾಡಿದರು. ಅಷ್ಟೇ ಅಲ್ಲ ತನ್ನ ಜೊತೆ ಯಾವುದೇ ಚರ್ಚೆ ಮಾಡದೇ ನಿಶಾದ ಸಮುದಾಯದ ಮುಕೇಶ್ ಸಹನಿ ಅವರನ್ನು ಉಪ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಏಕಪಕ್ಷಿಯವಾಗಿ ಘೋಷಣೆ ಮಾಡಿ ಮುಸ್ಲಿಮರು ಮತ್ತು ಉಳಿದ ಹಿಂದುಳಿದ ಸಮುದಾಯಗಳು ಸಿಟ್ಟಿಗೆ ಏಳಲು ಕಾರಣರಾದರು ಎಂದು ಖರ್ಗೆ ಸಾಹೇಬರ ಮೂಲಕ ಸೋನಿಯಾ ಗಾಂಧಿಗೆ ಹೇಳಿದ್ದಾರೆ.

ಬಿಹಾರ ಚುನಾವಣೆಯ ಸಂದರ್ಭದಲ್ಲಿ ಎರಡು ಬಾರಿ ವಿದೇಶಕ್ಕೆ ಹೋದ ರಾಹುಲ್‌, ಒಂದು ಮಜಬೂತಾದ ಪ್ರಚಾರ ಅಭಿಯಾನವನ್ನು ತಮ್ಮ ಪರವಾಗಿ ನಡೆಸಲಿಲ್ಲ ಅನ್ನುವುದು ತೇಜಸ್ವಿ ಯಾದವ್‌ ಅವರಿಗೆ ಬೇಸರ ತರಿಸಿದೆ ಅಂತೆ. ಈ ಚುನಾವಣೆಗಳ ಹೀನಾಯ ಸೋಲು ಹೀಗೆಯೇ ಇರುತ್ತದೆ. ಅದೇನೋ ಹೇಳುತ್ತಾರೆ ಅಲ್ವಾ- ಗೆಲುವಿಗೆ ನೂರಾರು ಅಪ್ಪಂದಿರು, ಸೋಲು ಮಾತ್ರ ಅನಾಥ ಎಂದು. ಅದು ಶತ ಪ್ರತಿಶತ ನಿಜ ನೋಡಿ.

ಮಮತಾಗೂ ಬೇಡ, ಅಖಿಲೇಶ್‌ಗೂ ದ್ವಂದ್ವ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಾನಗಳು 52 ರಿಂದ 99ಕ್ಕೆ ಏರಿದ ನಂತರ ಬರೀ ಕಾಂಗ್ರೆಸ್ ಅಷ್ಟೇ ಅಲ್ಲ ‘ಇಂಡಿ’ ಮೈತ್ರಿಯಲ್ಲೂ ಸ್ವಲ್ಪಮಟ್ಟಿಗಿನ ಆಸೆಗಳು ಚಿಗುರಿದ್ದವು. ಆದರೆ ಯಾವಾಗ ಹರ್ಯಾಣ, ಮಹಾರಾಷ್ಟ್ರ, ದೆಹಲಿ ಮತ್ತು ಈಗ ಬಿಹಾರದ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಗ್ಗರಿಸಿತೋ ಮಿತ್ರರಿಗೂ ಕಾಂಗ್ರೆಸ್ ಜೊತೆಗೆ ಹೋಗುವುದು ಲಾಭವಾ ಅಥವಾ ಬರೀ ನಷ್ಟವಾ ಎಂಬ ದ್ವಂದ್ವ ಶುರು ಆಗಿದೆ.

ಚುನಾವಣೆಗೆ ಮೂರು ತಿಂಗಳು ಇರುವಾಗಲೇ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಗೆ ಯಾವುದೇ ಅಸ್ತಿತ್ವವೇ ಇಲ್ಲ, ಹೀಗಾಗಿ ಮೈತ್ರಿ ಪ್ರಶ್ನೆಯೇ ಇಲ್ಲ ಅಂದಿದ್ದರೆ, ತಮಿಳುನಾಡಿನಲ್ಲಿ ರಾಹುಲ್‌ ಆಪ್ತ ಪ್ರವೀಣ ಚಕ್ರವರ್ತಿ ಹೋಗಿ ಚಿತ್ರ ನಟ ವಿಜಯ್‌ ಅವರನ್ನು ಭೇಟಿಯಾಗಿ ಬಂದಿದ್ದು ಸ್ಟಾಲಿನ್‌ ಬೇಸರಕ್ಕೆ ಕಾರಣವಾಗಿದೆ. ಇದುವರೆಗೂ ತಮಿಳುನಾಡಿನಲ್ಲಿ ಸೀಟು ಹಂಚಿಕೆ ಮಾತುಕತೆ ಶುರುವೇ ಆಗುತ್ತಿಲ್ಲ. ಇನ್ನು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆಗೆ ಹೋದರೆ ಲಾಭ ಇಲ್ಲ ಎಂದು ಉದ್ಧವ್‌ ಠಾಕ್ರೆ 20 ವರ್ಷಗಳ ತರುವಾಯ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜ್‌ ಠಾಕ್ರೆಯನ್ನು ಅಪ್ಪಿಕೊಂಡಿದ್ದಾರೆ. ಇನ್ನು 2027ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಹೋಗಬೇಕೋ ಬೇಡವೋ? ಬರೀ ಮುಸ್ಲಿಂ ಮತಗಳು ವಿಭಜನೆ ಆಗಬಾರದು ಅನ್ನೋದನ್ನು ಬಿಟ್ಟರೆ ಕಾಂಗ್ರೆಸ್ ಜೊತೆ ಹೋಗಲು ಕಾರಣಗಳೇ ಉಳಿದಿಲ್ಲ ಎಂದು ಅಖಿಲೇಶ್‌ ಬಹಿರಂಗವಾಗಿ ಹೇಳುತ್ತಿದ್ದಾರೆ. ಮಹಾರಾಷ್ಟ್ರದಿಂದ ಬರುತ್ತಿರುವ ಸುದ್ದಿಗಳ ಪ್ರಕಾರ, ಶರದ್ ಪವಾರ್‌ ಮತ್ತು ಅಜಿತ್ ದಾದಾ ಪವಾರ್‌ ಮರಳಿ ಒಟ್ಟಿಗೆ ಬಂದರೆ ಸುಪ್ರಿಯಾ ಸುಳೆ ಪವಾರ್‌ ಕೇಂದ್ರದಲ್ಲಿ ಮಂತ್ರಿ ಆಗಬಹುದು ಎಂಬ ಲೆಕ್ಕಾಚಾರ ಕೂಡ ಜೋರಾಗಿ ನಡೆಯುತ್ತಿದೆ.

ಕಾಂಗ್ರೆಸ್‌ನ ಸಂಸದರನ್ನು ಖಾಸಗಿಯಾಗಿ ಮಾತನಾಡಿಸಿದರೆ ಸಂಸತ್ತು ಅಧಿವೇಶನ ನಡೆಯುವಾಗ ರಾಹುಲ್‌ ಗಾಂಧಿ ಪದೇ ಪದೇ ವಿದೇಶಕ್ಕೆ ಹೋಗುವುದು ಏಕೆ ಮತ್ತು ಹೇಗೆ ಎಂಬ ಗುಸು ಗುಸು ಬೇಸರ ಕೇಳಿ ಬರುತ್ತದೆ. ವೋಟ್ ಚೋರಿ ಅಭಿಯಾನ ಸಮಾರೋಪದ ಮರು ದಿನವೇ ರಾಹುಲ್‌ ಜರ್ಮನಿಗೆ ಹೋಗೋದು ಪಕ್ಕಾ ಆದಲ್ಲಿ ರಾಮಲೀಲಾ ಮೈದಾನದ ದೊಡ್ಡ ಸಮಾವೇಶಕ್ಕೆ ಅರ್ಥ ಏನು ಎಂಬುದು ಅನೇಕರಿಗೆ ಪ್ರಶ್ನಾರ್ಥಕವಾಗಿದೆ. ಅದೇನೋ ಗೊತ್ತಿಲ್ಲ: ರಾಹುಲ್‌ಗೆ ಬಿಜೆಪಿಯನ್ನು ಚುನಾವಣೆಯಲ್ಲಿ ಮಣಿಸುವ ಸಾಮರ್ಥ್ಯ ಇಲ್ಲವೋ? ಮನಸ್ಸಿಲ್ಲವೋ ಅಥವಾ ಪರಿಶ್ರಮದ ಸ್ವಭಾವ ಇಲ್ಲವೋ ಎಂಬ ಉತ್ತರದ ಹುಡುಕಾಟ ನಡೆಸದೇ ಇದ್ದರೆ ಶತಮಾನದ ಹಳೆಯ ಪಾರ್ಟಿ ನೋಡನೋಡುತ್ತಲೇ ಒಂದು ದೊಡ್ಡ ಖಾಸಗಿ ಸೇವಾ ಸಂಸ್ಥೆಯಾಗಿ ಉಳಿದರೂ ಆಶ್ಚರ್ಯವಿಲ್ಲ.

ರಾಹುಲ್‌ ಸಮಸ್ಯೆಯಾದ್ರೂ ಏನು?

ಪಂಡಿತ ನೆಹರು, ಇಂದಿರಾ ಗಾಂಧಿ, ಸಂಜಯ್‌ ಗಾಂಧಿ, ರಾಜೀವ್‌ ಗಾಂಧಿಯಿಂದ ಹಿಡಿದು ಸೋನಿಯಾ ಗಾಂಧಿವರೆಗೆ ಎಲ್ಲರೂ ದೇಶದ ಮೂಲೆ ಮೂಲೆಗಳಿಂದ ಯಾರೇ ದಿಲ್ಲಿಗೆ ಬರಲಿ, ಸಮಯ ಕೇಳಿದರೆ 5 ನಿಮಿಷ ಆದರೂ ‘10 ಜನಪಥ’ಕ್ಕೆ ಕರೆಸಿ ಭೇಟಿ ಆಗುತ್ತಿದ್ದರು. ಆದರೆ ಯಾಕೋ ಏನೋ, ರಾಹುಲ್‌ ಚುನಾವಣೆ ಸಂದರ್ಭದಲ್ಲಿ ಬಿಟ್ಟರೆ ಯಾರನ್ನೂ ಮುಕ್ತವಾಗಿ ಭೇಟಿ ಆಗೋದಿಲ್ಲ. ಇದು ಕೆಳಗಿನ ಕೇಡರ್ ಜೊತೆಗೆ ರಾಹುಲ್‌ ಸಂಪರ್ಕ ಕಡಿತಗೊಳ್ಳುವಂತೆ ಮಾಡುವುದರ ಜೊತೆಗೆ, ತಳಮಟ್ಟದಲ್ಲಿ ಏನೇನು ನಡೆಯುತ್ತಿದೆ ಎನ್ನುವ ಮಾಹಿತಿಯೇ ದಿಲ್ಲಿಗೆ ತಲುಪದಂತೆ ತಡೆದಿದೆ.

ಇಂದಿರಾ ಕಾಲದಲ್ಲಿ ಬಿಡಿ, ತೀರಾ ಸೋನಿಯಾ ಗಾಂಧಿ ಕಾಲದಲ್ಲೂ ಅಹ್ಮದ್‌ ಪಟೇಲ್, ಗುಲಾಂ ನಬಿ ಆಜಾದ್‌, ಅಂಬಿಕಾ ಸೋನಿ, ಆಸ್ಕರ್‌ ಫರ್ನಾಂಡಿಸ್‌, ವಿಲಾಸ ರಾವ್ ದೇಶಮುಖ್‌, ತರುಣ್‌ ಗೊಗೋಯಿ, ಶೀಲಾ ದೀಕ್ಷಿತ್‌ರಂತಹ ಪಾರ್ಟಿ ಮತ್ತು ಚುನಾವಣೆ ಪ್ರಬಂಧನ ಮಾಡುವ ತಂಡವಿತ್ತು. ಆದರೆ ರಾಹುಲ್‌ ಬಳಿ ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸುರ್ಜೇವಾಲಾ ಬಿಟ್ಟರೆ ಪ್ರಬಂಧನ ಸಾಮರ್ಥ್ಯ ಇರುವ ನಾಯಕರಿಲ್ಲ. ಸಮಸ್ಯೆ ಎಂದರೆ ರಾಹುಲ್‌ ಉಳಿದವರನ್ನು ನಂಬುವುದು ಇಲ್ಲ.

ರಾಹುಲ್‌ಗೆ ಸೀನಿಯರ್ಸ್‌ಗಳೆಂದರೆ ವಿಪರೀತ ಅಸಡ್ಡೆ ಮತ್ತು ತಾತ್ಸಾರ. ಹೀಗಾಗಿ ಕಾಂಗ್ರೆಸ್‌ನ ಹಿರಿಯರು, ಸೋನಿಯಾ ಗಾಂಧಿ ಜೊತೆಗಿದ್ದವರು ಒಂದು ಮೂಲೆ ಗುಂಪು ಆಗಿದ್ದಾರೆ ಇಲ್ಲವೇ ಪಾರ್ಟಿ ಬಿಟ್ಟು ಹೊರಗೆ ಹೋಗಿದ್ದಾರೆ. ಇನ್ನು ರಾಹುಲ್‌ ನಾಯಕತ್ವ ಕೊಟ್ಟಿರುವ ರಫೇಲ್ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಪ್ರಚಾರ, ಇವಿಎಂ ವಿರುದ್ಧದ ಅಭಿಯಾನ ಮತ್ತು ಈಗ ವೋಟ್ ಚೋರಿ ಅಭಿಯಾನಗಳು ಟಿವಿಯಲ್ಲಿ ಚರ್ಚೆ ಆಗುತ್ತಿವೆಯೇ ಹೊರತು ಚುನಾವಣೆ ಗೆಲ್ಲಲು ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ.

ಬಿಜೆಪಿಯವರು ರಾಹುಲ್ ಬಗ್ಗೆ ನಡೆಸುವ ನೆಗೆಟಿವ್ ಪ್ರಚಾರದಿಂದ ಹೀಗೆ ಆಗುತ್ತಿದೆಯೋ ಅಥವಾ ನಿಜಕ್ಕೂ ರಾಹುಲ್‌ರಿಗೆ ಮೋದಿಗೆ ಪರ್ಯಾಯ ನಾಯಕತ್ವ ಕೊಡುವ ಶಕ್ತಿ ಇಲ್ಲವೋ ಎಂಬುದರ ಬಗ್ಗೆ ಕಾಂಗ್ರೆಸ್ ಮತ್ತು ವಿಪಕ್ಷಗಳು ನಿರ್ಣಯ ತೆಗೆದುಕೊಳ್ಳುವ ಸಮಯ ಬಂದಿದೆ ಅನ್ನಿಸುತ್ತಿದೆ. ಇಲ್ಲವಾದಲ್ಲಿ ರಾಹುಲ್‌ರಿಂದಾಗಿ ಕಾಂಗ್ರೆಸ್ ಕೂಡ ಇತಿಹಾಸದ ಪುಟ ಸೇರಿಕೊಂಡರೂ ಆಶ್ಚರ್ಯವಿಲ್ಲ.

ರಾಹುಲ್‌ ಬದಲು ಪ್ರಿಯಾಂಕಾ?

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವೋಟ್ ಚೋರಿ ವಿಷಯದಲ್ಲಿ ಮಾತಾಡಿ ರಾಹುಲ್‌ ಜರ್ಮನಿಗೆ ಹೋಗಿ ಕುಳಿತರೆ, ವಂದೇ ಮಾತರಂ ಇರಲಿ, ನರೇಗಾ ಇರಲಿ ಎಲ್ಲಾ ವಿಷಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಮಿಂಚಿದ್ದು ಮಾತ್ರ ಪ್ರಿಯಾಂಕಾ ಗಾಂಧಿ ವಾದ್ರಾ. ಭಾಷೆಯ ಸಂಯಮ ಬಳಕೆ, ವ್ಯಂಗ್ಯ, ಮೊನಚು, ಶಾಲೀನತೆ ಹೀಗೆ ಎಲ್ಲವನ್ನು ಬಳಸಿದ ಪ್ರಿಯಾಂಕಾ ಗಾಂಧಿ ಅವಕಾಶ ನೀಡಿದಲ್ಲಿ ನರೇಂದ್ರ ಮೋದಿಗೆ ಒಂದು ಟಕ್ಕರ್‌ ಅಂತೂ ಸದನದಲ್ಲಿ ನೀಡಬಲ್ಲರು ಎಂಬ ಚರ್ಚೆಗೆ ನಾಂದಿ ಹಾಡಿದ್ದಾರೆ.

ಚುನಾವಣೆ ರಣತಂತ್ರ ಹೆಣೆಯ ಬಲ್ಲರಾ ಎಂಬ ಪ್ರಶ್ನೆಗೆ ಉತ್ತರ ಹುಡುಕೋದು ಸ್ವಲ್ಪ ಗಡಿ ಬಿಡಿ ಆದೀತು ಬಿಡಿ. ಅಧಿವೇಶನದ ಕೊನೆಯ ದಿನ ಲೋಕಸಭಾ ಸ್ಪೀಕರ್‌ ಕರೆದಿದ್ದ ಚಹಾ ಪಾರ್ಟಿಯಲ್ಲಿ ಪ್ರಿಯಾಂಕಾ ಗಾಂಧಿ, ನರೇಂದ್ರ ಮೋದಿ ಒಟ್ಟಿಗೆ ಕುಳಿತು ಹರಟೆ ಹೊಡೆದಿದ್ದು ಕೂಡ ಒಂದು ಹೊಸ ಬೆಳವಣಿಗೆ. ಇಲ್ಲವಾದಲ್ಲಿ ರಾಹುಲ್‌ ‘ಆ್ಯಂಗ್ರಿ ಯಂಗ್‌ಮ್ಯಾನ್‌’ ಎಂದು ತೋರಿಸುವ ಭರದಲ್ಲಿ ನಗುವುದನ್ನೇ ಮರೆತಿರುವಾಗ ಪ್ರಿಯಾಂಕಾ ಗಾಂಧಿ ನಡೆದುಕೊಂಡ ರೀತಿ ಪಕ್ಷ ವಿಪಕ್ಷ, ಮಾಧ್ಯಮ, ಸಾಮಾಜಿಕ ಜಾಲತಾಣ ಎಲ್ಲಾ ಕಡೆ ಪ್ರಶಂಸೆಗೆ ಪಾತ್ರವಾಗಿತ್ತು. ಒಂದು ವೇಳೆ ರಾಹುಲ್‌ ಚುನಾವಣೆಗಳ ಮೇಲೆ ಚುನಾವಣೆ ಸೋಲುತ್ತಾ ಸಾಗಿದರೆ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬಕ್ಕೆ ಪ್ರಿಯಾಂಕಾರನ್ನು ಸೇನಾಧಿಪತಿ ಮಾಡುವುದು ಅನಿವಾರ್ಯ ಅದೀತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

PN
About the Author

Prashant Natu

ಮೂಲತಃ ಉತ್ತರ ಕರ್ನಾಟಕದ ಹುಬ್ಬಳ್ಳಿ. ಆಟೋ ಮೊಬೈಲ್ ಎಂಜಿನಿಯರಿಂಗ್ ಶಿಕ್ಷಣದ ನಂತರ ಬದಲಾಯಿತು ದಿಕ್ಕು. ರಾಜಕೀಯ ವರದಿಗಾರಿಕೆ ಮಾಡಲೆಂದೇ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ವಿದ್ಯುನ್ಮಾನ ಮಾಧ್ಯಮ ಸ್ನಾತಕೋತ್ತರ ಅಧ್ಯಯನ. ದಿಲ್ಲಿಯಲ್ಲಿ ಸುವರ್ಣ ನ್ಯೂಸ್ ವರದಿಗಾರನಾಗಿ ಆಯ್ಕೆ. 18 ವರ್ಷಗಳಿಂದಲೂ ಒಂದೇ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ರಾಜಕೀಯ ವರದಿಗಾರಿಕೆ ಮತ್ತು ನಿಖರ ವಿಶ್ಲೇಷಣೆಗಳಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ಮಾಧ್ಯಮದಲ್ಲೂ ಹೆಸರುವಾಸಿ. 2015ರಿಂದ ಕನ್ನಡ ಪ್ರಭ ಪತ್ರಿಕೆಯಲ್ಲಿ 'ಇಂಡಿಯಾ ಗೇಟ್' ಎಂಬ ದಿಲ್ಲಿ ರಾಜಕೀಯದ ಒಳ ಸುಳಿವು ಅಂಕಣ ಪ್ರಕಟವಾಗುತ್ತಿದೆ. ಸುವರ್ಣ ನ್ಯೂಸ್‌ನ 'ಮಾರ್ನಿಂಗ್ ನ್ಯೂಸ್ ಅವರ್' ಸಂಜೆ 'ಪಾರ್ಟಿ ರೌಂಡ್ಸ್' 'ಲೆಫ್ಟ್ ರೈಟ್ ಸೆಂಟರ್' ಕಾರ್ಯಕ್ರಮಗಳು ಹೆಚ್ಚು ಪ್ರಸಿದ್ಧ.Read More...
Read more Articles on
click me!

Recommended Stories

ಒಂದಲ್ಲಾ ಒಂದು ದಿನ ಹಿಜಾಬ್‌ ಧರಿಸಿದಾಕೆ ಪ್ರಧಾನಿ ಆಗ್ತಾಳೆ : ಒವೈಸಿ
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು