ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಾಳೆ ಬೆಂಬಲಿಗರ ಜತೆ ಚರ್ಚೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳೋದಾಗಿ ಲಕ್ಷ್ಮಣ ಸವದಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಅಥಣಿ (ಏಪ್ರಿಲ್ 12, 2023): ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷದಿಂದ ಹೊರನಡೆಯಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗಿದ್ದು, ನಾಳೆ ಬೆಂಬಲಿಗರ ಜತೆ ಚರ್ಚೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳೋದಾಗಿ ಲಕ್ಷ್ಮಣ ಸವದಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುವಾಗ ಸಿಎಂ ಬೊಮ್ಮಾಯಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ನಿವಾಸದಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಲಕ್ಷ್ಮಣ ಸವದಿ ರಾಜೀನಾಮೆ ನೀಡಿದ್ದಾರೆ. ಈ ವೇಳೆ, ಸಿಎಂ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಥಣಿ ಕ್ಷೇತ್ರದ ಜನತೆಯೇ ನನ್ನ ಹೈಕಮಾಂಡ್ ಎಂದು ಹೇಳಿದ್ದಾರೆ. ನಾಳೆ ಬೆಂಬಲಿಗರ ಜತೆ ಸಭೆ ನಡೆಸಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಪಕ್ಷೇತರ ಅಥವಾ ಕಾಂಗ್ರೆಸ್ ಸೇರುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಇದನ್ನು ಓದಿ: ಸವದಿಗೆ ಅಥಣಿ ಟಿಕೆಟ್ ಮಿಸ್, ಬಿಕ್ಕಿ ಬಿಕ್ಕಿ ಅತ್ತ ಮಾಜಿ ಡಿಸಿಎಂ
ಅಲ್ಲದೆ, ತಮ್ಮ ನಿವಾಸದಲ್ಲಿ ಸಿಎಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಡಿಸಿಎಂ, ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದರು. ನಾವೇ ಅವರನ್ನು ತಡೆದಿದ್ದೆವು. ಈಗ ಅವರು ಸಿಎಂ ಆಗಿದ್ದಾರೆ. ಆದರೆ, ನನಗೆ ಟಿಕೆಟ್ ಕೈ ತಪ್ಪಿದೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಟಿಕೆಟ್ ನೀಡದಿರುವ ಬಗ್ಗೆ ಹೈಕಮಾಂಡ್ ಮೊದಲೇ ಮಾಹಿತಿ ನೀಡಬೇಕಿತ್ತು.ಟಿಕೆಟ್ ನೀಡದಿರುವ ಬಗ್ಗೆ ಹೈಕಮಾಂಡ್ ಮೊದಲೇ ಮಾಹಿತಿ ನೀಡಬೇಕಿತ್ತು. ಬಿಜೆಪಿ ತನ್ನ ಸಿದ್ಧಾಂತ ಮೀರಿ ಬೇರೆ ದಿಕ್ಕಿನತ್ತ ಹೋಗುತ್ತಿದೆ. ಬೊಮ್ಮಾಯಿ ಅವರು ಪ್ರಧಾನಿಯೂ ಆಗಬಹುದು, ರಮೇಶ್ ಜಾರಕಿಹೊಳಿ ರಾಜ್ಯದ ಸಿಎಂ ಆಗಬಹುದು. ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಲಕ್ಷ್ಮಣ ಸವದಿಗೆ ಸಾಂತ್ವನ ಹೇಳಿದ್ದೇನೆ: ರಾಜು ಕಾಗೆ
ಈ ಮಧ್ಯೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿಯನ್ನು ಭೇಟಿ ಮಾಡಿದ ಕಾಂಗ್ರೆಸ್‌ನ ರಾಜು ಕಾಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ಷ್ಮಣ ಸವದಿ ನಾನು ಒಳ್ಳೆಯ ಗೆಳೆಯ. ಅವರಿಗೆ ಟಿಕೆಟ್ ಸಿಗದೆ ಇರುವುದರಿಂದ ಸಾಂತ್ವನ ಹೇಳಿದ್ದೇನೆ. ನಾವು ಇಬ್ಬರು ಒಗ್ಗಟ್ಟಾಗಿ ಹೋದರೆ ತಾಲೂಕಿನಲ್ಲಿ ಒಳ್ಳೆಯದಾಗುತ್ತದೆ. ನಾನು ಒಂಟಿಯಾಗಿದ್ದೇನೆ. ಅವರು ನಮ್ಮ ಜೊತೆ ಬಂದರೆ ಒಳ್ಳೆಯದಾಗುತ್ತದೆ. ಜೋಡು ಎತ್ತುಗಳಾಗಿ ಇಬ್ಬರು ಹೋಗಬಹುದು ಎಂದಿದ್ದೇನೆ ಎಂದು ರಾಜು ಕಾಗೆ ಹೇಳಿದ್ದಾರೆ.
ಇದನ್ನೂ ಓದಿ: ಅಥಣಿ, ಕರಾವಳಿಯಲ್ಲಿ ಬಿಜೆಪಿ ಮೇಜರ್ ಸರ್ಜರಿ, ಲಕ್ಷಣ್ ಸವದಿ ಸೇರಿ ಮೂವರಿಗೆ ಟಿಕೆಟ್ ಮಿಸ್?
ಅಲ್ಲದೆ, ನನ್ನನ್ನು ಯಾವ ರಾಜ್ಯ ನಾಯಕರು ಲಕ್ಷ್ಮಣ ಸವದಿ ಮನೆಗೆ ಕಳಿಸಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಅವರಿಗೆ ಹೇಳಿದ್ದೇನೆ. ಕಾಂಗ್ರೆಸ್ ಬಂದರೆ ಒಳ್ಳೆಯ ಸ್ಥಾನಮಾನ ಅವರಿಗೆ ಕೊಡಲಾಗುವುದು. ನನಗೆ ಏನಾದರೂ ಸಚಿವ ಸ್ಥಾನ ಕೊಟ್ಟರೆ, ನಾನು ಸವದಿಗಾಗಿ ತ್ಯಾಗ ಮಾಡುತ್ತೇನೆ. ಸವದಿ ಕಾಂಗ್ರೆಸ್‌ಗೆ ಬಂದರೆ ಒಳ್ಳೆಯದು ಎಂದೂ ರಾಜು ಕಾಗೆ ಹೇಳಿದ್ದಾರೆ.
ಅಫಜಲಪುರ, ಕುಂದಗೋಳದಲ್ಲೂ ಬಿಜೆಪಿಗೆ ಬಂಡಾಯ!
ಇನ್ನು, ಟಿಕೆಟ್ ಘೋಷಣೆ ಬೆನ್ನಲ್ಲೇ ಅಫಜಲಪುರದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ವಿರುದ್ದ ಮಾಲೀಕಯ್ಯ ಗುತ್ತೇದಾರರ ಸ್ವಂತ ತಮ್ಮ ನಿತಿನ್ ಗುತ್ತೇದಾರ ತೊಡೆ ತಟ್ಟಿದ್ದಾರೆ. ಪಕ್ಷ ಯುವಕನಾದ ನನಗೆ ಟಿಕೆಟ್ ನೀಡುತ್ತದೆ ಎನ್ನುವ ನಂಬಿಕೆ ಇತ್ತು. ಬಿಜೆಪಿ ನನಗೆ ಟಿಕೆಟ್ ನೀಡದಿದ್ದರೂ ಸರಿ ನನ್ನ ಸ್ಪರ್ಧೆ ಖಚಿತ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿಯುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಲಿರುವ ನಿತಿನ್ ಗುತ್ತೇದಾರ ಹೇಳಿದ್ದಾರೆ.
ಇದನ್ನೂ ಓದಿ: ಏಕೆ ಚಡಪಡಿಸ್ತೀಯ ಅಣ್ಣಾ?: ಸವದಿಗೆ ರಮೇಶ್ ಜಾರಕಿಹೊಳಿ ಟಾಂಗ್
ಅಲ್ಲದೆ, ಕುಂದಗೋಳದಲ್ಲೂ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬಿಜೆಪಿಗೆ ಗುಡ್ ಬೈ ಹೇಳಲು ಚಿಕ್ಕನಗೌಡ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ಕೈ ತಪ್ಪಿದಕ್ಕೆ ಯಡಿಯೂರಪ್ಪ ಸಂಬಂಧಿ ಎಸ್.ಐ ಚಿಕ್ಕನಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಹ್ಲಾದ್ ಜೋಶಿ ಆಪ್ತ ಎಂ.ಆರ್ ಪಾಟೀಲ್‌ಗೆ ಕುಂದಗೋಳದಲ್ಲಿ ಬಿಜೆಪಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆ ಬಂಡಾಯದ ಕಹಳೆ ಮೊಳಗಿಸಲು ಎಸ್.ಐ ಚಿಕ್ಕನಗೌಡರು ಸಿದ್ಧವಾಗಿದ್ದು, ಇಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕವಾಗಿದೆ.