ಶಾಸಕ ಸಿ.ಟಿ.ರವಿ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೆಟ್ಟ ಪದ ಪ್ರಯೋಗ ಮಾಡಿರುವ ಆರೋಪದ ಬೆನ್ನಲ್ಲೇ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹಳೆಯ ವಿಡಿಯೋ ವೈರಲ್ ಆಗ್ತಿದೆ. ಏನಿದು?
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿಯ ಶಾಸಕ ಸಿ.ಟಿ.ರವಿ ಅವರು ಅತ್ಯಂತ ಕೆಟ್ಟ ಪದ ಪ್ರಯೋಗ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಹೆಣ್ಣೊಬ್ಬಳಿ ತೀರಾ ಅವಮಾನ ಆಗುವಂಥ, ಅಶ್ಲೀಲ ಎನ್ನಿಸಿಕೊಂಡಿರುವ ಶಬ್ದವನ್ನು ಸಿ.ಟಿ.ರವಿ ಅವರು ಹೇಳಿರುವ ಆರೋಪ ಎದುರಿಸುತ್ತಿದ್ದಾರೆ. ಈ ಬೆಳವಣಿಗೆಯ ನಂತರ ರಾಜಕೀಯದಲ್ಲಿ ಹೈಡ್ರಾಮಾನೇ ನಡೆದು ಹೋಗಿದೆ. ಪೊಲೀಸರು ರವಿ ಅವರನ್ನು ಅರೆಸ್ಟ್ ಮಾಡಿದ್ದು, ಬಳಿಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು ಆಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ಸಿಗರು ವಾಗ್ದಾಳಿ ನಡೆಸುತ್ತಿದ್ದರೆ, ಬಿಜೆಪಿಯವರು ರವಿ ಅವರು ಹೇಳಿದ್ದು ಆ ಶಬ್ದವಲ್ಲ, ಮತ್ತೊಂದು ಶಬ್ದ ಎಂದು ಸ್ಪಷ್ಟನೆ ಕೊಡುತ್ತಿದ್ದಾರೆ. ನಾನು ಲಕ್ಷ್ಮೀ ಅವರಿಗೆ ಆ ಕೆಟ್ಟ ಪದದ ಪ್ರಯೋಗ ಮಾಡಿದ್ದೇ ಆಗಿದ್ದಲ್ಲಿ, ಅದರ ದಾಖಲೆ ತೋರಿಸಿ ಎಂದೂ ಸಿ.ಟಿ.ರವಿ ಸವಾಲು ಎಸೆದದ್ದೂ ಆಗಿದೆ. ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಈ ಘಟನೆ ಭಾರಿ ಕೋಲಾಹಲವನ್ನೇ ಸೃಷ್ಟಿಸುತ್ತಿದ್ದು, ಇಂದಿಗೂ ಆರೋಪ-ಪ್ರತ್ಯಾರೋಪಗಳು ಮುಗಿದಿಲ್ಲ.
ಆದರೆ ಇದರ ಬೆನ್ನಲ್ಲೇ ಬಿಜೆಪಿ ಬೆಂಬಲಿಗರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಲ್ಚಲ್ ಸೃಷ್ಟಿಸುತ್ತಿದೆ. 2018ರ ವಿಡಿಯೋ ಇದಾಗಿದೆ. ಇದು ನಟಿಯಾಗಿರುವ ಜಯಮಾಲಾ ಅವರು ಸಚಿವೆಯಾಗಿ ಆಯ್ಕೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಆ ಹುದ್ದೆ ಸಿಗದ ಸಂದರ್ಭದಲ್ಲಿ ಹೇಳಿದ ಮಾತು. ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚಿತ್ರನಟಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮದೇ ಪಕ್ಷದ ಜಯಮಾಲಾ ಅವರ ಬಗ್ಗೆ ಲಕ್ಷ್ಮೀ ಅವರು ಮಾತನಾಡಿದ್ದು, ಅದಕ್ಕೆ ಜಯಮಾಲಾ ಅವರು ತುಂಬಾ ನೊಂದುಕೊಟ್ಟಿದ್ದು, ಬಳಿಕ ಲಕ್ಷ್ಮೀ ಅವರು ನಾನು ಹಾಗೆ ಹೇಳಿದ್ದಲ್ಲ, ಹೀಗೆ ಹೇಳಿದ್ದು ಎಂದು ಸಮಜಾಯಿಷಿ ಕೊಡಲು ಹೋಗಿ ಮತ್ತೆ ಪೇಚಿಗೆ ಸಿಲುಕಿರುವ ಘಟನೆಯಾಗಿದೆ.
undefined
ಅಮಿತ್ ಶಾ ಭಾಷಣ ತಿರುಚಿದ್ರಾ ರಾಹುಲ್? ಫುಲ್ ವಿಡಿಯೋ ವೈರಲ್- ವಿಪಕ್ಷ ನಾಯಕನ ವಿರುದ್ಧ ಮತ್ತೊಂದು ಕೇಸ್?
ಜಯಮಾಲಾ ಅವರ ವಿರುದ್ಧ ಅಸಮಾಧಾನ ಹೊರಹಾಕುವ ಭರದಲ್ಲಿ ಲಕ್ಷ್ಮೀ ಅವರು, ‘ನಮ್ಮ ರಾಜ್ಯ ನಾಯಕರಿಗೆ ಜಯಮಾಲಾ ಅವರ ಸೇವೆ ಬಹಳ ಇಷ್ಟ ಆಗಿರಬೇಕು, ಅದಕ್ಕಾಗಿ ಸಚಿವೆ ಸ್ಥಾನ ಕೊಟ್ಟಿದ್ದಾರೆ' ಎಂದಿದ್ದರು. ಇದು ಆಗ ಭಾರಿ ಕೋಲಾಹಲ ಸೃಷ್ಟಿಸಿತ್ತು. ಸೇವೆ ಎನ್ನುವ ಪದ ಹಾಗೂ ಅವರು ಅದನ್ನು ಬಳಸಿದ ರೀತಿಗೆ ಮಹಿಳಾ ಸಮುದಾಯದಿಂದ ಟೀಕೆಗಳು ಕೇಳಿಬಂದಿದ್ದವು. ಅಷ್ಟಕ್ಕೂ ಲಕ್ಷ್ಮೀ ಅವರು ಹೇಳಿದ್ದೇನೆಂದರೆ, ‘ಇವತ್ತು ಜಿಲ್ಲೆಯಲ್ಲಿ ಸಂಘಟನೆ ಮಾಡಿದ್ದು ಯಾರು ಅಂತ ಕೇಳಿದ್ರೆ ಚಿಕ್ಕ ಮಗು ಕೂಡ ಹೇಳುತ್ತೆ. ಅಲ್ಲಿಂದ ಇಲ್ಲಿ ಬಂದು ಇಲ್ಲಿ ರಾಜ್ಯದಲ್ಲಿ ನಾನೇನೂ ಯಾವ ರೀತಿ ಕೆಲಸ ಮಾಡಿದ್ದೀನಿ, ಮಹಿಳಾ ಕಾಂಗ್ರೆಸ್‌ಗೆ ಎಷ್ಟುಜನ ಕರ್ಕೊಂಡು ಬಂದಿದ್ದೀನಿ, ಮಹಿಳಾ ಕಾಂಗ್ರೆಸ್‌ನ ಶೇಪ್‌ನ ಯಾವ ರೀತಿ ಚೇಂಜ್ ಮಾಡಿದೀನಿ ಅಂತ. ಇದನ್ನೆಲ್ಲಾ ಪರಿಗಣಿಸಬಹುದಿತ್ತು. ನನಗಂತೂ ಬಹಳ ವಿಶ್ವಾಸ ಇತ್ತು. ಆದರೆ ಜಯಮಾಲಾ ಅವರಿಗೆ ಸಚಿವೆ ಮಾಡಲಾಗಿದೆ. 20 ವರ್ಷಗಳಿಂದ ರಾಜಕೀಯದಲ್ಲಿದ್ದೀನಿ. ನಾನೇನು ಮೂರ್ಖಳಲ್ಲ. ಡೆಲ್ಲಿನಲ್ಲೂ ಕೂಡ ನನಗೆ ಮಾಡ್ತೀವಿ ಅಂತ ಹೇಳಿ ಕಳ್ಸಿದ್ರು. ಲಾಸ್ಟ್ ಕೊನೆಗಳಿಗೆ ಅಲ್ಲಿ ಅದೇನಾಯ್ತೋ...ಅದೇನ್ ಕತೆ ಆಯ್ತೋ ನನಗೆ ಅರ್ಥ ಆಗ್ತಾ ಇಲ್ಲ. ಬಹುಶಃ ಜಯಮಾಲಾ ಅವರ ಸೇವೆ ರಾಜ್ಯ ನಾಯಕರಿಗೆ ಇಷ್ಟ ಆಗಿರಬೇಕು' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಜಯಮಾಲಾ ತುಂಬಾ ನೊಂದುಕೊಂಡಿದ್ದರು. ಈ ರೀತಿಯ ಪದ ನಮ್ಮದೇ ಪಕ್ಷದ ಅದೂ ಹೆಣ್ಣುಮಗಳೊಬ್ಬಳಿಂದ ನಿರೀಕ್ಷೆ ಮಾಡಿರಲಿಲ್ಲ. ಈ ಶಬ್ದ ನನಗೆ ತುಂಬಾ ನೋವು ಉಂಟು ಮಾಡಿದೆ ಎಂದಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೇವೆ ಎನ್ನುವ ಶಬ್ದ ಭಾರಿ ಟೀಕೆಗೆ ಗುರಿಯಾಗುತ್ತಲೇ ಹಾಗೂ ಜಯಮಾಲಾ ಅವರ ರಿಯಾಕ್ಷನ್ ನೋಡಿದ ಅವರು, ಕೂಡಲೇ ಸಮಜಾಯಿಷಿ ಕೊಟ್ಟರು. ನಮ್ಮದು ಉತ್ತರ ಕರ್ನಾಟಕ. ಉತ್ತರ ಕರ್ನಾಟಕ ಶೈಲಿಯಲ್ಲಿ ಸೇವೆ ಎಂದರೆ ಅದು ಉರುಳು ಸೇವೆ ಅಂತೀವಿ. ಹರಕೆ ಸೇವೆ ಅಂತೀವಿ ಮತ್ತು ಪಕ್ಷದ ಸೇವೆ ಅಂತೀವಿ. ನಾನು ಆ ಅರ್ಥದಲ್ಲಿ ಜಯಮಾಲಾ ಅವರು ಪಕ್ಷದ ಸೇವೆ ಮಾಡಿದ್ದಾರೆ ಅಂತ ಹೇಳಿದ್ದೀನಿ. ನಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದಿದ್ದರು!
ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ರನ್ನು ನಡೆಸಿಕೊಂಡ ಇಂಚಿಂಚು ಮಾಹಿತಿ ನೀಡಿದ ಸಚಿವ ರಿಜೆಜು! ಭಾರಿ ಚರ್ಚೆ