ಕಾಂಗ್ರೆಸ್‌ನಲ್ಲಿ ಯಾರು ಸಿಎಂ ಎಂಬುದನ್ನು ಹೈಕಮಾಂಡ್, ಶಾಸಕಾಂಗ ಸಭೆ ನಿರ್ಧರಿಸುತ್ತದೆ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ(ಜು.21): ಮೊದಲು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿ, ಅದರಲ್ಲಿ ಬಹುಮತ ಪಡೆಯುವಷ್ಟು ಶಾಸಕರು ಆರಿಸಿ ಬರಬೇಕು. ಆಮೇಲೆ ಸಿಎಂ ಸ್ಥಾನದ ಪೈಪೋಟಿ ಮಾಡಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಯಾವ ಸಂದರ್ಭದಲ್ಲಿ, ಯಾವ ಉದ್ದೇಶದಿಂದ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಮೊದಲು 224 ಕ್ಷೇತ್ರಗಳಲ್ಲಿ 115 ಕಾಂಗ್ರೆಸ್ ಶಾಸಕರು ಆರಿಸಿ ಬರಲಿ. ಬಳಿಕ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಾಗಬೇಕು. ನಂತರ ಹೈಕಮಾಂಡ್ ಯಾರ ಹೆಸರನ್ನು ಸೂಚಿಸುತ್ತದೆಯೋ, ಶಾಸಕಾಂಗ ಸಭೆಯಲ್ಲಿ ಎಲ್ಲರೂ ಯಾರನ್ನು ನಾಯಕರೆಂದು ಒಪ್ಪಿಕೊಳ್ಳುತ್ತಾರೋ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮೋತ್ಸವದ ಬಗ್ಗೆ ಕಾಂಗ್ರೆಸ್ಸಿಗರಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಹಳೆಯ ಕಾಂಗ್ರೆಸ್, ಹೊಸ ಕಾಂಗ್ರೆಸ್ ಎಂಬ ಬಣಗಳಿಲ್ಲ. ರಾಹುಲ್ ಗಾಂಧಿಯವರೇ ಮುಂಚೂಣಿಯಲ್ಲಿ ನಿಂತು ಮುಖ್ಯ ಅತಿಥಿಯಾಗಿ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಇಡೀ ಕಾಂಗ್ರೆಸ್ ಪರಿವಾರ ಈ ಕಾರ್ಯಕ್ರಮ ನಡೆಸಿಕೊಡಲಿದೆ ಎಂದು ಹೇಳಿದರು.
ದುಡ್ಡು ಎಸೆದ ಬಗ್ಗೆ ಮಾತ್ರ ಕೇಳ್ತೀರಿ, ಪರಿಹಾರ ಹಣ ವಾಪಾಸ್ ತೆಗೆದುಕೊಂಡಿದ್ದಾರೆ ಅದರ ಬಗ್ಗೆ ಮಾತಾಡಿ!
ಸಿದ್ದರಾಮೋತ್ಸವಕ್ಕೆ ಬೆಳಗಾವಿ ಜಿಲ್ಲೆಯಿಂದ ಎಷ್ಟುಸಂಖ್ಯೆಯಲ್ಲಿ ಕಾರ್ಯಕರ್ತರು ತೆರಳಬೇಕು ಎನ್ನುವುದರ ಕುರಿತು ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ನಡೆದಿದೆ. ಪ್ರತಿಯೊಂದು ಕ್ಷೇತ್ರದಿಂದ ಎರಡು ಸಾವಿರ ಜನರು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವಕ್ಕೆ ಹೋಗುವ ನಿರೀಕ್ಷೆಯಿದೆ. ಯಾರಿಗಾದರೂ ಬಸ್ ಸೌಲಭ್ಯ ಸೇರಿ ಇತರೆ ಯಾವುದೇ ಸೌಲಭ್ಯದ ಅಗತ್ಯ ಇದ್ದರೆ ನನಗೆ ತಿಳಿಸಿದರೆ, ಇಡೀ ಜಿಲ್ಲೆಯ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.