ಸಿದ್ದರಾಮೋತ್ಸವ ಹೆಸರಿನಲ್ಲಿ ಜನ್ಮದಿನ ಆಚರಿಸಲು ಹೊರಟಿದ್ದಾರೆ. ಇದುವೇ ಕಾಂಗ್ರೆಸ್ಸಿನವರಿಗೆ ದೊಡ್ಡ ವಿಷಯವಾಗಿದೆ.
ಹುಬ್ಬಳ್ಳಿ(ಜು.21): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಪಟ್ಟಕ್ಕೆ ಆರಂಭವಾಗಿರುವ ಒಳ ಹೋರಾಟದಿಂದಲೇ ಕಾಂಗ್ರೆಸ್ಸಿನ ಅವನತಿ ಪ್ರಾರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಹೆಸರಿನಲ್ಲಿ ಜನ್ಮದಿನ ಆಚರಿಸಲು ಹೊರಟಿದ್ದಾರೆ. ಇದುವೇ ಕಾಂಗ್ರೆಸ್ಸಿನವರಿಗೆ ದೊಡ್ಡ ವಿಷಯವಾಗಿದೆ. ಅವರಿಗೆ ಜನರ ಸಮಸ್ಯೆಗಳು ಬೇಕಾಗಿಲ್ಲ. ಅದಕ್ಕೆ ಸಮಯವೂ ಇಲ್ಲ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಮಾಡುವುದು ಅವರಿಗೆ ಬಿಟ್ಟ ವಿಚಾರ. ಹಿಂದೆ ಅವರು ಬಾದಾಮಿಯಿಂದ ಸಾವಿರ ಮತಗಳಿಂದ ಗೆದ್ದವರು. ಅಲ್ಲಿ ಏನಾದರೂ ಸೋತಿದ್ದರೆ ಅವರ ರಾಜಕೀಯ ಜೀವನವೇ ಮುಗಿಯುತ್ತಿತ್ತು. ಅಲ್ಲಿ ಗೆದ್ದರು ಕೂಡಾ ಚಾಮುಂಡೇಶ್ವರಿಯಲ್ಲಿ 30 ಸಾವಿರ ಅಂತರದಿಂದ ಸೋಲು ಕಂಡಿದ್ದಾರೆ. ಇತ್ತ ಒಕ್ಕಲಿಗರ ಮತಗಳ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ, ತಾವು ಮುಖ್ಯಮಂತ್ರಿ ಸ್ಪರ್ಧೆಯಲ್ಲಿರುವುದಾಗಿ ಹೇಳಿದ್ದಾರೆ. ಹಿಂದುಳಿದ ವರ್ಗದವರ ಮತಗಳನ್ನು ನಂಬಿ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ ಎಂದರು.
ರೈತರ ಹುತಾತ್ಮ ದಿನಾಚರಣೆಗೆ ಶಾಸಕ ಮುನೇನಕೊಪ್ಪ ಗೈರು!
ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಮೇಲೆ ಭರವಸೆ ಇದ್ದರೆ ಬಾದಾಮಿಯಲ್ಲಿಯೇ ನಿಂತು ಗೆದ್ದು ತೋರಿಸಲಿ. ಅದು ಬಿಟ್ಟು ಬೇರೆ ಕಡೆಗೆ ಕ್ಷೇತ್ರ ಹುಡುಕುವುದು ಯಾಕೆ? ಅವರಿಗೆ ಸೋಲುವ ಭಯ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಜಿಎಸ್‌ಟಿ ವಿಚಾರವಾಗಿ ಮಾತನಾಡಿದ ಶೆಟ್ಟರ್, ಜಿಎಸ್‌ಟಿ ಅವಧಿ ವಿಸ್ತರಣೆಗೆ ಕೌನ್ಸಿಲ್ ಎಂಬುದಿದೆ. ಅಲ್ಲಿ ಎಲ್ಲವೂ ನಿರ್ಧಾರ ಆಗಲಿದೆ. ಎಲ್ಲ ರಾಜ್ಯಗಳ ಸದಸ್ಯರು ಅಲ್ಲಿ ಬಂದಿರುತ್ತಾರೆ. ವಿಸ್ತೃತ ಚರ್ಚೆ ಆಗುತ್ತದೆ. ಅಲ್ಲಿ ಯಾಕೆ ಇವರು ಚರ್ಚೆ ಮಾಡಲಿಲ್ಲ? ಅದು ಬಿಟ್ಟು ಇದೀಗ ಮೊಸರು, ಮಜ್ಜಿಗೆ ಮತ್ತೊಂದಕ್ಕೆ ಬೆಲೆ ಏರಿಕೆ ಮಾಡಲಾಗಿದೆ ಎಂದು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಹರಿಹಾಯ್ದರು.
ಮಳೆಯಿಂದ ನಗರದ ರಸ್ತೆಗಳು ಹಾಳಾಗಿವೆ. ಜನರಿಗೆ ಸಮಸ್ಯೆ ಆಗುವ ಕಾರಣಕ್ಕೆ ಅವಸರ ಮಾಡಿ ತಗ್ಗು-ಗುಂಡಿ ಮುಚ್ಚುವ ಕೆಲಸ ಮಾಡಲಾಗಿದೆ. ಇದರಿಂದ ಮತ್ತೆ ಮಳೆಗೆ ರಸ್ತೆ ಹದಗೆಡುವ ಪರಿಸ್ಥಿತಿ ಇರಲಿದೆ. ಹೀಗಾಗಿ ಬಿಸಿಲು ಬೀಳುವವರೆಗೆ ಕಾದು ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕೆಂದು ಪಾಲಿಕೆ ಆಯುಕ್ತರಿಗೆ ಈಗಾಗಲೇ ತಿಳಿಸಿದ್ದೇನೆ ಎಂದರು.
ಸ್ಮಾರ್ಟ್‌ಸಿಟಿ ಕಳಪೆ ತನಿಖೆಗೆ ನಾನೂ ಒತ್ತಾಯಿಸುವೆ
ಸ್ಮಾರ್ಟ್‌ಸಿಟಿ ಕಾಮಗಾರಿಗಳು ಕಳಪೆಯಾಗಿವೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೆಟ್ಟರ್, ಯಾವ ಕಾಮಗಾರಿ ಕಳಪೆಯಾಗಿದೆ ಎಂಬುದನ್ನು ಜನಪ್ರತಿನಿಧಿಗಳಿಗೆ ತಿಳಿಸುವ ಕೆಲಸ ಆಗಲಿ. ನಾನು ಕೂಡಾ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡುವೆ. ಅಲ್ಲದೇ ತನಿಖೆಗೆ ಒತ್ತಾಯಿಸುವೆ. ಕಳಪೆಯಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಶೆಟ್ಟರ್ ತಿಳಿಸಿದರು.